ಸ್ಯಾಂಡಲ್ವುಡ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಮಹಾರಾಜ ಬಳ್ಳಾರಿ ಟೈಗರ್ಸ್ ಕ್ರಿಕೆಟ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ (AVR ಗ್ರೂಪ್ ಮಾಲೀಕ) ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಶ್ರೀಲಂಕಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಅರವಿಂದ್ ವೆಂಕಟೇಶ್ ರೆಡ್ಡಿ ಅವರನ್ನು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗೋವಿಂದರಾಜನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಾಗಿರುವ ಅರವಿಂದ್ ರೆಡ್ಡಿ, ನಟಿಗಾಗಿ 3 ಕೋಟಿ ರೂಪಾಯಿ ಖರ್ಚು ಮಾಡಿ ಸೈಟ್, ಮನೆ, ದುಬಾರಿ ಕಾರು ಗಿಫ್ಟ್ ಮಾಡಿದ್ದೆ. ಆದರೆ ಆಕೆ ನನಗೆ ಮೋಸ ಮಾಡಿ ಬೇರೆಯವನ ಜೊತೆಗೆ ಸಂಬಂಧ ಹೊಂದಿದ್ದಳು. ನಾನು ಯಾವುದೇ ಕಿರುಕುಳ ನೀಡಿಲ್ಲ ಎಂದು ವಿಚಾರಣೆ ಸಮಯದಲ್ಲಿ ಹೇಳಿದ್ದಾರೆ.
ಅರವಿಂದ್ ರೆಡ್ಡಿ 2021ರಲ್ಲಿ ತನ್ನನ್ನು ಪರಿಚಯ ಮಾಡಿಕೊಂಡಿದ್ದು, ಆರ್ಥಿಕ ಶಕ್ತಿ ಬಳಸಿ ಲೈಂಗಿಕ ಕಿರುಕುಳ ನೀಡಿ, ಬೆದರಿಕೆ ಹಾಕಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ. ಈ ಸಂಬಂಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐದು ದಿನಗಳ ಹಿಂದೆ ಪ್ರಕರಣವನ್ನು ಗೋವಿಂದರಾಜನಗರ ಠಾಣೆಗೆ ವರ್ಗಾಯಿಸಲಾಗಿತ್ತು. ಆರೋಪಿ ದೇಶ ಬಿಟ್ಟು ಹೋಗಿರುವ ಸಾಧ್ಯತೆಯಿದ್ದ ಕಾರಣ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಎಸಿಪಿ ಚಂದನ್ ಮತ್ತು ಇನ್ಸ್‌ಪೆಕ್ಟರ್ ಸುಬ್ರಹ್ಮಣಿ ನೇತೃತ್ವದ ತಂಡವು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದು, ಶ್ರೀಲಂಕಾದಿಂದ ಬಂದೊಡನೆ ಬಂಧಿಸಿದ್ದಾರೆ. ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಕೋರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಯಲ್ಲಿ ಅರವಿಂದ್ ರೆಡ್ಡಿ ತಮ್ಮನ್ನು ನಿರ್ದೋಷಿ ಎಂದು ಸಾಬೀತುಪಡಿಸಲು ಪ್ರಯತ್ನಿಸಿದ್ದಾರೆ. ನಟಿಯನ್ನು ಪ್ರೀತಿಸಿ ಮದುವೆಯಾಗುವ ಉದ್ದೇಶದಿಂದ 3 ಕೋಟಿ ರೂಪಾಯಿ ಖರ್ಚು ಮಾಡಿದ್ದೆ. ಬೆಂಗಳೂರಿನಲ್ಲಿ ಸೈಟ್ ಖರೀದಿಸಿ, ಮನೆ ಕಟ್ಟಿಸಿ ಕೊಟ್ಟೆ. ಲಕ್ಷಾಂತರ ಮೌಲ್ಯದ ದುಬಾರಿ ಕಾರು (BMW) ಗಿಫ್ಟ್ ಮಾಡಿದ್ದೆ. ಆದರೆ ಆಕೆ ನನಗೆ ಮೋಸ ಮಾಡಿ ಬೇರೆಯೊಬ್ಬ ವ್ಯಕ್ತಿ ಜೊತೆಗೆ ಸಂಬಂಧ ಹೊಂದಿದ್ದಳು. ನಾನು ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ, ಅವಳೇ ನನ್ನ ಭಾವನೆಗಳೊಂದಿಗೆ ಆಟವಾಡಿದ್ದಾಳೆ ಎಂದು ಆರೋಪಿ ಹೇಳಿಕೊಂಡಿದ್ದಾರೆ. ಪೊಲೀಸರು ಆರೋಪಿಯ ಮೊಬೈಲ್, ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದು, ನಟಿಯ ದೂರು ಮತ್ತು ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಅರವಿಂದ್ ವೆಂಕಟೇಶ್ ರೆಡ್ಡಿ ಅವರು AVR ಗ್ರೂಪ್‌ನ ಮಾಲೀಕರಾಗಿದ್ದು, ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ದುಬೈ, ಶ್ರೀಲಂಕಾ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ನಿರ್ಮಾಪಕರಾಗಿ ಹಲವು ಸಿನಿಮಾಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮಹಾರಾಜ ಬಳ್ಳಾರಿ ಟೈಗರ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿ ಕೆಸಿಎಲ್‌ನಲ್ಲಿ ಗಮನ ಸೆಳೆದಿದ್ದಾರೆ. ಚಲನಚಿತ್ರ ನಟ-ನಟಿಯರಿಗಾಗಿ ಹಲವು ಕ್ರಿಕೆಟ್ ಟೂರ್ನಮೆಂಟ್‌ಗಳನ್ನು ಆಯೋಜಿಸಿದ್ದು, ದುಬೈ ಮತ್ತು ಶ್ರೀಲಂಕಾದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ ಸ್ಪಾನ್ಸರ್ ಆಗಿದ್ದಾರೆ.





