ಅತಿ ಸುಂದರವಾಗಿ ಕಂಗೊಳಿಸಬೇಕೆಂಬ ಬಯಕೆ ಪ್ರತಿಯೊಬ್ಬ ಹುಡುಗಿಗೂ ಇದ್ದೇ ಇರುತ್ತದೆ. ಈ ಮದುವೆಯ ಮುಹೂರ್ತದ ದಿನಕ್ಕಾಗಿ ಅವಳು ನಾನಾ ಬಗೆಯ ಕನಸುಗಳನ್ನು ಕಾಣುತ್ತಾಳೆ. ಅವಳು ತನ್ನನ್ನು ತಾನು ಅತಿ ಸುಂದರ ವಧುವನ್ನಾಗಿ ತೋರ್ಪಡಿಸಲು ಲೇಟೆಸ್ಟ್  ಮಾಡರ್ನ್‌ ಔಟ್‌ಫಿಟ್ಸ್ ಜೊತೆ ಮ್ಯಾಚಿಂಗ್‌ ದುಬಾರಿ ಒಡವೆ, ಮ್ಯಾಚಿಂಗ್‌ ಫುಟ್‌ವೇರ್‌ ಹಾಗೂ ಪಾರ್ಲರ್‌ನಲ್ಲಿ ಬುಕಿಂಗ್‌ ಇತ್ಯಾದಿ ಮಾಡಿಸಿಕೊಳ್ಳುತ್ತಾಳೆ. ಇದರಿಂದ ತನ್ನ ಅಲಂಕಾರದಲ್ಲಿ ಯಾವುದೇ ಕೊರತೆ ಇರದಂತೆ, ಮದುವೆಯ ಮನೆಯ ಗುಂಪಿನಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿರಲು ಬಯಸುತ್ತಾಳೆ.

ಈ ಅಲಂಕಾರದ ಓಡಾಟದಲ್ಲಿ ಅವಳು ತನ್ನ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸುತ್ತಾಳೆ. ಅದು ಅವಳ ಆರೋಗ್ಯದ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೆ ಮುಖದಲ್ಲೂ ಅದು ಸ್ಪಷ್ಟವಾಗಿ ಕಾಣಿಸುತ್ತದೆ. ಇಂಥ ಸಂದರ್ಭದಲ್ಲಿ ವಧು ಒಳಗೆ ಹಾಗೂ ಹೊರಗಿನಿಂದ ಎರಡೂ ವಿಧದಲ್ಲಿ ಪರ್ಫೆಕ್ಟ್ ಫಿಟ್‌ ಆಗಿ ಕಂಡುಬರಬೇಕು. ಆಗ ಮಾತ್ರ ಮದುವೆ ದಿನ ಅವಳು ಪೂರ್ತಿಯಾಗಿ ಎಂಜಾಯ್‌ ಮಾಡಲು ಸಾಧ್ಯ. ಏಕೆಂದರೆ ವಧು ಒಳಗಿನಿಂದ ಹೆಲ್ದಿ ಆಗಿರದಿದ್ದರೆ, ಹೊರಗಿನಿಂದ ಎಷ್ಟೇ ಮೇಕಪ್‌ ಮಾಡಿಕೊಂಡರೂ, ಅದು ಎದ್ದು ಕಾಣುವುದಿಲ್ಲ. ನಿಮ್ಮ ಕೆಟ್ಟಿರುವ ತ್ವಚೆ, ಕೆದರಿದ ಕೂದಲು, ಆಳಕ್ಕಿಳಿದ ಕಂಗಳು, ಸುಸ್ತು ಸಂಕಟದ ವರ್ತನೆ ನಿಮ್ಮ ಮದುವೆ ದಿನದ ಅಂದವನ್ನು ಹಾಳುಗೆಡಹುತ್ತದೆ.

ಈ ರೀತಿಯ ಅತಿಯಾದ ಓಡಾಟದ ಜೀವನಶೈಲಿ ಆರೋಗ್ಯದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮುಖ್ಯ ಪರಿಣಾಮ ತ್ವಚೆಯ ಮೇಲೆ ಕಾಣಿಸುತ್ತದೆ. ಏಕೆಂದರೆ ಈ ಸಂದರ್ಭದಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಜೊತೆಜೊತೆಗೆ ಸ್ವಸ್ಥ ತ್ವಚೆಗಾಗಿ ಎಲ್ಲಕ್ಕೂ ಮುಖ್ಯವಾದ ಐರನ್‌ ದೇಹದಲ್ಲಿ ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ಚರ್ಮ ಹಳದಿ ಆಗುತ್ತಾ ಹೋಗುತ್ತದೆ. ಹೀಗಾದಾಗ ವಧುವಿನ ಸೌಂದರ್ಯಕ್ಕೆ ಕಲೆ ತಗುಲಿದಂತಾಗುತ್ತದೆ.

Iron_04_EM

ಬನ್ನಿ, ಮದುವೆಯ ಬಿಝಿ ಶೆಡ್ಯೂಲ್‌ ನಿಭಾಯಿಸುತ್ತಲೇ, ಆಂತರಿಕ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆಂದು ನೋಡೋಣ :ಗ್ಲೋಯಿಂಗ್‌ ಸ್ಕಿನ್‌ಗಾಗಿ ಮದುವೆಗೆ ಮೊದಲು ನೀವು ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ ಎಷ್ಟೇ ಫೇಶಿಯಲ್ ಮಾಡಿಸಿರಲಿ, ನ್ಯಾಚುರಲ್ ಗ್ಲೋ ಎಂಬುದು ಮುಖದಲ್ಲಿ ಸಹಜವಾಗಿ ಮೂಡಿಬರಬೇಕು. ನೀವು ಇಂಥ ನ್ಯಾಚುರಲ್ ಗ್ಲೋ ಬಯಸಿದರೆ ಕ್ಯಾರೆಟ್‌, ಟೊಮೇಟೊ, ಹಸಿರು ತರಕಾರಿ ಇತ್ಯಾದಿ ಸೇವಿಸಲು ಮರೆಯದಿರಿ. ಇವನ್ನು ನಿಮ್ಮ ದೈನಂದಿನ ಆಹಾರದಲ್ಲಿ ಅಗತ್ಯವಾಗಿ ಬಳಸಿಕೊಳ್ಳಿ. ಆಗ ನೋಡಿ, ನಿಮ್ಮ ಚರ್ಮಕ್ಕೆ ಎಂಥ ಹೊಳಪು ಬರುತ್ತದೆಂದು ನಿಮಗೇ ತಿಳಿಯುತ್ತದೆ.

ಐರನ್‌ನಿಂದ ತುಂಬಿರಲಿ ಡಯೆಟ್‌

ಮದುವೆಯ ದಿನ ನಿಮ್ಮ ಚರ್ಮ ಡಲ್, ಕೂದಲು ನಿರ್ಜೀವ, ಉಗುರು ತುಸು ತಗುಲಿದರೆ ತುಂಡರಿಸುವುದು, ಅದರಲ್ಲಿ ಹಳದಿ ಬಣ್ಣ ಕಾಣಿಸುವುದು….. ಇತ್ಯಾದಿ ಆಗಬಾರದು ಎಂದು ಬಯಸಿದರೆ ನೀವು ಕಬ್ಬಿಣಾಂಶ ತುಂಬಿರುವ ಆಹಾರವನ್ನು ಎಂದೂ ನಿರ್ಲಕ್ಷಿಸಬೇಡಿ. ಏಕೆಂದರೆ ಐರನ್ನಿನ ಕೊರತೆ ನಿಮ್ಮ ಸೌಂದರ್ಯವನ್ನು ತಗ್ಗಿಸಬಹುದು. ಓವರ್‌ಆಲ್ ಬ್ಯೂಟಿಫುಲ್ ಬ್ರೈಡ್ ಆಗಿ ಕಂಗೊಳಿಸಲು ಐರನ್‌ ತುಂಬಿದ ಡಯೆಟ್‌ ಅಂದರೆ ಮೊಟ್ಟೆ, ಮೀನು, ಮಾಂಸ, ಟೋಫು, ಬೀನ್ಸ್, ಸೋಯಾ, ನಟ್ಸ್ ಇತ್ಯಾದಿ ಖಂಡಿತಾ ಸೇವಿಸಿ. ಏಕೆಂದರೆ ಉದ್ದದ ಕೂದಲಿಗಾಗಿ ವಿಟಮಿನ್ಸ್, ಮಿನರಲ್ಸ್, ಪ್ರೋಟೀನ್ಸ್ ಜೊತೆ ಐರನ್‌ ಸೇವನೆಯೂ ಅತ್ಯಗತ್ಯ.

ಐರನ್‌ ರಿಚ್‌ ಫುಡ್‌

ತರಕಾರಿ, ಹಣ್ಣುಗಳ ಜೊತೆ ಇನ್ನೂ ಕೆಲವು ಆಹಾರ ಪದಾರ್ಥಗಳು ಐರನ್ನಿನ ಉತ್ತಮ ಸ್ರೋತ ಎನಿಸಿವೆ. ರೆಡ್‌ಮೀಟ್‌, ಚಿಕನ್‌, ಇಡಿಯಾದ ಬೇಳೆಕಾಳು (ಕಡಲೆ, ಹುರುಳಿ, ಹಲಸಂದೆ, ಹೆಸರು, ಸೋಯಾ), ಬ್ರೆಡ್‌, ಮೊಟ್ಟೆ, ಕಡಲೆಬೀಜ, ಟೂನಾ ಫಿಶ್‌, ಬೆಲ್ಲ, ಕುಂಬಳ ಬೀಜ, ಹಾಲು ಇತ್ಯಾದಿ ಐರನ್‌ ಕೊರತೆಯನ್ನು ಪೂರ್ತಿ ಮಾಡುತ್ತವೆ.

ನಿಮ್ಮ ಡಯೆಟ್‌ನಲ್ಲಿ ತರಕಾರಿ ಹಾಕಿ ಮಾಡಿದ ಅವಲಕ್ಕಿ ಉಪ್ಪಿಟ್ಟು ಅಗತ್ಯ ಇರಲಿ. ಇದು ಕೂಡ ಉತ್ತಮ ಕಬ್ಬಿಣಾಂಶ ಹೊಂದಿದೆ.

ಐರನ್‌ ರಿಚ್‌ ಡಯೆಟ್‌ನ್ನು ಜೀರ್ಣಿಸಿಕೊಳ್ಳಲು ವಿಟಮಿನ್‌ `ಸಿ’ ಸೇವನೆ ಅತ್ಯಗತ್ಯ. ಏಕೆಂದರೆ ವಿಟಮಿನ್‌ `ಸಿ’ ಸಹಜವಾಗಿ ಐರನ್‌ ರಕ್ತದಲ್ಲಿ ವಿಲೀನಗೊಳ್ಳಲು ಪೂರಕ. ಊಟಕ್ಕೆ ಮೊದಲು ನಿಂಬೆಯರಸ ಅಥವಾ ಹುಳಿ ಹುಣ್ಣುಗಳ ರಸ ಸೇವಿಸಿ. ಇದರಿಂದ ಹೊಟ್ಟೆ ಹೆಚ್ಚು ಅಸಿಡಿಕ್‌ ಆಗುತ್ತದೆ, ಆಗ ಅದು ಕಬ್ಬಿಣಾಂಶವನ್ನು ಬೇಗ ವಿಲೀನಗೊಳಿಸಲು ಸಹಾಯಕ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮೇಲೆ ತಿಳಿಸಲಾದ ಕಬ್ಬಿಣಾಂಶದ ಆಹಾರ ಸಾಮಗ್ರಿಗಳಲ್ಲಿ ಯಾವುದು ನಿಮ್ಮ ಮನೆಯ ಆಸುಪಾಸಿನಲ್ಲಿ ಸುಲಭ ಲಭ್ಯವೋ ಅಥವಾ ಋತುವಿಗೆ ತಕ್ಕಂತೆ ಸಿಗುತ್ತದೋ ಅದಕ್ಕೆ ಪ್ರಾಶಸ್ತ್ಯ ಕೊಡಿ.

ನಿದ್ದೆಗೆ ಕೊರತೆ ಬೇಡ

ಮದುವೆ ನಿಶ್ಚಯವಾಗುತ್ತಿದ್ದಂತೆ, ಮದುವೆಯ ಕಾರ್ಯಕಲಾಪಗಳು ದಿನೇ ದಿನೇ ಹೆಚ್ಚತೊಡಗುತ್ತವೆ. ಜೊತೆಗೆ ವಧು ಕನಸಿನ ಲೋಕದಲ್ಲಿ ತೇಲಿಹೋಗುತ್ತಾಳೆ. ತಡರಾತ್ರಿಯವರೆಗೂ ತನ್ನ ಭಾವೀ ಪತಿಯ ಜೊತೆ ಹರಟೆ ಹೊಡೆಯುವ ಕಾರಣ, ನಿದ್ದೆಯ ಕೊರತೆ ದೇಹಾರೋಗ್ಯ ಹಾಗೂ ಸೌಂದರ್ಯದ ಮೇಲೆ ತನ್ನ ಪ್ರಭಾವ ಬೀರುತ್ತದೆ. ಇಂಥ ಪರ್ವಕಾಲ ಜೀವನದಲ್ಲಿ ಮತ್ತೆ ಮರಳಿಬಾರದು ಎಂಬುದು ನಿಜವಾದರೂ, ಮುಖದಲ್ಲಿನ ಕಾಂತಿ ಮಂದವಾಗುತ್ತದೆ ಹಾಗೂ ಮೂಡ್‌ ಸ್ಟ್ರೆಸ್‌ ಲೆವೆಲ್‌ ಹೆಚ್ಚಾಗುತ್ತದೆ. ನೀವು ಮದುವೆಯ ದಿನ ಕಾಂತಿಯುತವಾಗಿ ನಳನಳಿಸ ಬಯಸಿದರೆ, ಮದುವೆ ಫಿಕ್ಸ್ ಆದ ದಿನದಿಂದಲೇ ಪ್ರತಿ ರಾತ್ರಿ ಕನಿಷ್ಠ 7-8 ತಾಸುಗಳ ನಿದ್ದೆ ಅಗತ್ಯ ಮಾಡಿ. ಹೀಗೆ ನಿದ್ದೆ ಪರಿಪೂರ್ಣಗೊಳ್ಳುವುದರಿಂದ ಮುಖದಲ್ಲಿ ತಂತಾನೇ ತಾಜಾತನ ತುಂಬಿಕೊಳ್ಳುತ್ತದೆ.

ಬ್ರೇಕ್‌ಫಾಸ್ಟ್ ತ್ಯಜಿಸ ಬೇಡಿ

ಡಿನ್ನರ್‌ ನಂತರ ಮಾರನೇ ದಿನದ ಊಟ ಬಹಳ ತಡ ಆಗುತ್ತದೆ. ಹೀಗಿರುವಾಗ ನೀವು ಡಯೆಟಿಂಗ್‌ ಚಕ್ರವ್ಯೂಹಕ್ಕೆ ಸಿಲುಕಿ ಬ್ರೇಕ್‌ಫಾಸ್ಟ್ ಸ್ಕಿಪ್‌ ಮಾಡಿದರೆ, ಆ ದಿನ ಸ್ವಲ್ಪ ಹೊತ್ತಾದ ಮೇಲೆ ನಿಮಗೆ ಬಹಳ ಸುಸ್ತುಸಂಕಟ ಎನಿಸುತ್ತದೆ. ಆಗ ನೀವು ಬಯಸಿದ ಓಡಾಟ, ಮದುವೆಯ ತಯಾರಿಯ ಕಾರ್ಯ ಕಲಾಪಗಳಲ್ಲಿ ಸಹಜವಾಗಿ ಭಾಗವಹಿಸಲಾಗದು. ಹಾಗಾಗಿ ಮರೆತೂ ಸಹ ಬ್ರೇಕ್‌ಫಾಸ್ಟ್ ತ್ಯಜಿಸಬೇಡಿ. ಸಾಧ್ಯವಾದಷ್ಟೂ ನಿಮ್ಮ ಬೆಳಗಿನ ತಿಂಡಿಯಲ್ಲಿ ಲೋ ಫ್ಯಾಟ್‌ ಮಿಲ್ಕ್ ಜೊತೆ ಸ್ಪ್ರೌಟ್ಸ್ ಅಗತ್ಯ ಸೇರಿರಲಿ. ಇದರಿಂದ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶಗಳು ಸುಲಭವಾಗಿ ಸಿಗುತ್ತವೆ

ದೇಹದಲ್ಲಿ ಕಬ್ಬಿಣಾಂಶದ ಪ್ರಮಾಣ ಸರಿಯಾಗಿದ್ದರೆ ಮಾತ್ರ, ಇಡೀ ದಿನದ ಚಟುವಟಿಕೆಗಳು ಚೂಟಿಯಾಗಿರುತ್ತವೆ. ಎಂದಿನ ಬೆಳಗಿನ ಉಪಾಹಾರದೊಂದಿಗೆ ಧಾರಾಳವಾಗಿ ಆಗಾಗ ಡ್ರೈಫ್ರೂಟ್ಸ್ ಸೇವಿಸುತ್ತಿರಿ.

ಲಂಚ್‌ – ಡಿನ್ನರ್‌ ಪೌಷ್ಟಿಕವಾಗಿರಲಿ

ಮದುವೆಗೆ ಮುಂಚಿನ ದಿನಗಳ ನಿಮ್ಮ ಡೇ ಶೆಡ್ಯೂಲ್‌ ಬಹಳ ಟೈಟ್‌ ಎಂಬುದೇನೋ ಸರಿ, ಆದರೆ ಲಂಚ್‌ – ಡಿನ್ನರ್‌ ಎರಡನ್ನೂ ನಿರ್ಲಕ್ಷಿಸುವಂತಿಲ್ಲ. ಅವೆರಡೂ ಪೌಷ್ಟಿಕವಾಗಿ ಇರಬೇಕಾದುದು ಅತ್ಯಗತ್ಯ. ಆಗ ಮಾತ್ರ ಮದುವೆಯ ಪೂರ್ವ ತಯಾರಿಯಲ್ಲಿ ಜಿಂಕೆ ಮರಿಯಂತೆ ನೀವು ಛಂಗನೆ ಜಿಗಿಯುತ್ತಾ ಓಡಾಡಬಹುದು. ಹೀಗಾಗಿ ನಿಮ್ಮ ಊಟದಲ್ಲಿ ಬೇಳೆ, ಕಾಳು, ತರಕಾರಿ, ಪಲ್ಯ, ಕೋಸಂಬರಿ, ಸಲಾಡ್‌, ಅನ್ನ, ಚಪಾತಿ, ರೊಟ್ಟಿ, ಹಸಿರು ಸೊಪ್ಪು ಇತ್ಯಾದಿಗಳನ್ನು ಧಾರಾಳವಾಗಿ ಬಳಸಿಕೊಳ್ಳಿ. ಏಕೆಂದರೆ ಆಂತರಿಕ ಆರೋಗ್ಯ ಬಹಳ ಮುಖ್ಯ.

ಸಂಜೆಯ ಸ್ನ್ಯಾಕ್ಸ್ ಜೊತೆ ಪಾಲಕ್‌, ಟೊಮೇಟೊ, ಸ್ವೀಟ್‌ಕಾರ್ನ್‌ ಸೂಪ್‌ ಇತ್ಯಾದಿ ನಿಮ್ಮನ್ನು ಹೆಚ್ಚು ಆರೋಗ್ಯವಂತರನ್ನಾಗಿ ಮಾಡುತ್ತದೆ. ಇದು ದೇಹದಲ್ಲಿ ಐರನ್‌ ಕೊರತೆಯನ್ನು ಸಂಪೂರ್ಣ ನಿವಾರಿಸುತ್ತದೆ. ಮುಖ್ಯವಾಗಿ ಸೊಪ್ಪುಗಳು ಅದರಲ್ಲೂ ನುಗ್ಗೆಸೊಪ್ಪು ಬಲು ಪೂರಕ. ಹಾಗೆಯೇ ಹಸಿವನ್ನು ಹೆಚ್ಚಿಸುತ್ತದೆ. ನಾನ್‌ವೆಜ್‌ ಬೇಕೆನಿಸಿದರೆ ಚಿಕನ್‌ ಸೂಪ್‌ ಅಗತ್ಯ ಸೇವಿಸಿ.

ಬೆಳಗಿನ ಆರಂಭ ವಿಭಿನ್ನವಾಗಿರಲಿ

ನೀವು ಇಡೀ ದಿನ ತಾಜಾತನದಿಂದ ಲವಲವಿಕೆಯಿಂದಿರಲು ಬಯಸಿದರೆ, ಬೆಳಗಿನ ಆರಂಭವನ್ನು ಗ್ರೀನ್‌ ಟೀ ಅಥವಾ ನಿಂಬೆ ರಸದೊಂದಿಗೆ ಮಾಡಿ. ಇದರಿಂದ ಇಮ್ಯೂನ್‌ ಸಿಸ್ಟಂ ಸಹಜವಾಗಿ ಸ್ಟ್ರಾಂಗ್‌ ಆಗುತ್ತದೆ, ಜೊತೆಗೆ ನಿಮ್ಮ ಮುಖದ ಕಾಂತಿಯೂ ಹೆಚ್ಚುತ್ತದೆ.

ಜಂಕ್‌ ಫುಡ್‌ ದೂರವಿರಿಸಿ

ಕೆಲಸದ ಒತ್ತಡ ಹಾಗೂ ಶಾಪಿಂಗ್‌ ಭರಾಟೆಯಲ್ಲಿ ನೀವು ಆ ಹೊತ್ತಿಗೆ ಏನೋ ಒಂದಿಷ್ಟು ತಿಂದರಾಯ್ತು ಎಂದು ಮನೆಯ ಪೌಷ್ಟಿಕ ಆಹಾರ ಮರೆತು, ಹೋಟೆಲ್‌ಗಳಲ್ಲಿ ಸಿಗುವ ಅನ್‌ಹೆಲ್ದಿ ಫುಡ್‌ ಅಂದ್ರೆ ಜಂಕ್‌ಫುಡ್‌ಗೆ ಮೊರೆಹೋಗಬೇಡಿ. ಪಿಜ್ಜಾ, ಬರ್ಗರ್‌, ಸ್ಯಾಂಡ್‌ವಿಚ್‌, ಪಾನಿಪೂರಿ….. ಇತ್ಯಾದಿಗಳನ್ನು ಬದಿಗೊತ್ತಿ. ಇದರಿಂದ ಅಗತ್ಯಕ್ಕಿಂತ ಹೆಚ್ಚಿನ ಫ್ಯಾಟ್‌ ಮಸಾಲೆ ಕೂಡುವುದರಿಂದ ಇತರ ಅನಾರೋಗ್ಯದ ಸಮಸ್ಯೆಗಳೂ ತಲೆದೋರಬಹುದು. ಹಾಗಾಗಿ ಜಂಕ್‌ಫುಡ್‌ ಅವಾಯ್ಡ್ ಮಾಡಲು ನೀವು ಸಮರ್ಪಕ ಪೌಷ್ಟಿಕ ಆಹಾರ ಸೇವಿಸಿ. ಜೊತೆಗೆ ಹಾಲು, ಹಣ್ಣು, ಸೂಪ್‌, ಸ್ಪ್ರೌಟ್ಸ್, ಹುರಿದ ನಟ್ಸ್ ಸೇವಿಸಿ. ಇದರಿಂದ ನಿಮಗೆ ಹೆಚ್ಚಿನ ಶಕ್ತಿ ದೊರೆತು ಮೋಸ್ಟ್ ಫಿಟ್‌ ಎನಿಸುವಿರಿ.

ವಾಕಿಂಗ್‌ ಜಾಗಿಂಗ್‌ ಮರೆಯದಿರಿ

ಇಷ್ಟು ದಿನ ಫಿಟ್‌ನೆಸ್‌ಗಾಗಿ ಬೇಕಾದಷ್ಟು ವ್ಯಾಯಾಮ ಮಾಡಿದ್ದಾಯಿತು ಎಂದು, ಮದುವೆ ಫಿಕ್ಸ್ ಆದ ಮೇಲೆ ವಾಕಿಂಗ್‌ ಜಾಗಿಂಗ್‌ ನಿರ್ಲಕ್ಷಿಸದಿರಿ. ಆದ್ದರಿಂದ ಏನೇ ಆದರೂ ಬೆಳಗಿನ ಈ ಲಘು ವ್ಯಾಯಾಮಗಳನ್ನು ತ್ಯಜಿಸಬೇಡಿ. ಬೆಳಗಿನ ತಾಜಾ ತಂಗಾಳಿ ನಿಮ್ಮನ್ನು ಒಳಗಿನಿಂದ ಸಂಪೂರ್ಣ ಆರೋಗ್ಯಕಾರಿಯನ್ನಾಗಿ ಮಾಡಬಲ್ಲದು. ಆಗ ಪರಿಸರದಲ್ಲಿ ಹರಡಿರುವ ಓಝೋನ್‌ ಪದರ, ಸೂರ್ಯ ಮೇಲೇರುತ್ತಿದ್ದಂತೆ ಚದುರುತ್ತದೆ.

ಧಾರಾಳ ನೀರು ಕುಡಿಯಿರಿ

ನೀರು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಲು ಹಿತಕಾರಿ. ಇದು ಚರ್ಮದ ಆರ್ದ್ರತೆಯನ್ನು ಕಾಪಿಡಲು ಬಲು ಮುಖ್ಯ. ಇದರಿಂದ ನಿಮ್ಮ ಚರ್ಮದ ಗ್ಲೋ ಹೆಚ್ಚುವುದಲ್ಲದೆ, ದೇಹದಿಂದ ವಿಷಯುಕ್ತ ಪದಾರ್ಥಗಳು ಹೊರಗೆ ಹೋಗಲು ಹೆಚ್ಚು ನೆರವಾಗುತ್ತದೆ. ಇದು ಏಜಿಂಗ್‌ ಪ್ರೋಸೆಸ್‌ ನಿಧಾನವಾಗಲಿಕ್ಕೂ ಪೂರಕ. ಆದ್ದರಿಂದ ಮುಖದ ಕಾಂತಿ ಹೆಚ್ಚಿಸಲು ಧಾರಾಳ ನೀರು ಕುಡಿಯಿರಿ.

ಈ ರೀತಿ ನೀವು ಆಂತರಿಕವಾಗಿ ಫಿಟ್‌ ಆದರೆ. ನಿಮ್ಮನ್ನು ನೀವು ಹೊರಗಿನ ಓಡಾಟಗಳಿಗೆ ಚೆನ್ನಾಗಿ ಅಣಿ ಮಾಡಿಕೊಳ್ಳಬಹುದು. ಫೇಶಿಯಲ್, ಸ್ಪಾ, ಬಾಡಿ ವ್ಯಾಕ್ಸ್, ಟೋಟಲ್ ಮೇಕಪ್‌….. ಇತ್ಯಾದಿಗಳೆಲ್ಲ ಪರಿಣಾಮಕಾರಿಯಾಗಿ ಮೂಡಲು, ಆಹಾರದಲ್ಲಿ ಕಬ್ಬಿಣಾಂಶದ ಕೊರತೆ ಕಾಡದಂತೆ ಎಚ್ಚರವಹಿಸಿ.

– ಬಿ. ಪಾರ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ