ಕಾಲಕಾಲಕ್ಕೆ ಸರಿಯಾಗಿ ಫೇಸ್‌ ಪ್ಯಾಕ್‌ ಬಳಸುವುದರಿಂದ ಚರ್ಮ ಆರೋಗ್ಯಕರ ಮತ್ತು ಕೋಮಲವಾಗಿರುತ್ತದೆ. ರಕ್ತಸಂಚಾರ ಸುಗಮವಾಗಿ ಸಾಗುತ್ತದೆ. ಇದು ಚರ್ಮಕ್ಕೆ ಒಂದು ಉತ್ತಮ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ವಾರದಲ್ಲಿ ನಿಯಮಿತವಾಗಿ ಒಂದೆರಡು ಬಾರಿ ಫೇಸ್‌ ಪ್ಯಾಕ್‌ ಹಾಕಿಕೊಳ್ಳುವುದರಿಂದ ಚರ್ಮ ಸುಂದರವಾಗುತ್ತದೆ. ಅಂಗಡಿಯಲ್ಲಿ ರೆಡಿ ಫೇಸ್‌ ಪ್ಯಾಕ್‌ ದೊರೆಯುತ್ತದೆ. ಬೇಕಾದರೆ ನೀವು ಇದನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಯಾವ ಚರ್ಮಕ್ಕೆ ಎಂತಹ ಫೇಸ್‌ಪ್ಯಾಕ್‌ ಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ:

ಒಣ ಚರ್ಮಕ್ಕಾಗಿ : 1 ಚಮಚ ಚಂದನದ ಪುಡಿ, 1 ಚಮಚ ಜೇನುತುಪ್ಪ, 1 ಚಮಚ ಹಾಲಿನ ಪುಡಿ ಮತ್ತು 1 ಚಮಚ ಪನ್ನೀರು  ಇವುಗಳನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಪೂರ್ತಿ ಮುಖಕ್ಕೆ ಹಚ್ಚಿ ಒಣಗಲು ಬಿಡಿ. 20 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ.

– 1 ಚಮಚ ಬಾದಾಮಿ ಎಣ್ಣೆ, 1 ಚಮಚ ಕಡ್ಲೆಹಿಟ್ಟು ಮತ್ತು 1 ಚಮಚ ಹಾಲಿನ ಕೆನೆಯನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ರಿಂದ 20 ನಿಮಿಷ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ.

– 1-2 ಹನಿ ಆಲಿವ್‌ ಆಯಿಲ್‌ನ್ನು 2 ಚಮಚ ಮೈದಾಗೆ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಕಾಲ ಬಿಡಿ. ಒಣಗಿದ ನಂತರ ಪನ್ನೀರಿನಿಂದ ತೊಳೆಯಿರಿ.

ಸಾಮಾನ್ಯ ಚರ್ಮಕ್ಕಾಗಿ :  2 ಬಾದಾಮಿಗಳನ್ನು ನೆನೆಸಿ ರುಬ್ಬಿಕೊಳ್ಳಿ. ಅದಕ್ಕೆ 2 ಚಮಚ ಹಾಲು, 1 ಚಮಚ ಕ್ಯಾರೆಟ್‌ ಮತ್ತು ಕಿತ್ತಳೆಯ ರಸವನ್ನು ಸೇರಿಸಿ ಮುಖ ಮತ್ತು ಕುತ್ತಿಗೆಗೆ ಗಾಢವಾಗಿ ಲೇಪಿಸಿ. ಅರ್ಧ ಗಂಟೆಯ ನಂತರ ತೊಳೆದು ಬಿಡಿ. ಇದರಿಂದ ಕಲೆಗಳು ದೂರವಾಗಿ ಚರ್ಮ ಕೋಮಲವಾಗುತ್ತದೆ.

– 1 ಚಮಚ ಜೇನುತುಪ್ಪಕ್ಕೆ ಕೊಂಚ ಬಾದಾಮಿ ಎಣ್ಣೆಯನ್ನು ಸೇರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 10 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಚರ್ಮ ಕೋಮಲವಾಗುತ್ತದೆ ಮತ್ತು ಸುಕ್ಕುಗಳೂ ಕಡಿಮೆಯಾಗುತ್ತವೆ.

– 2 ಚಮಚ ಗೋದಿಹಿಟ್ಟಿಗೆ ಹಾಲು, ಅರಿಶಿನ ಮತ್ತು ಕೊಂಚ ಪನ್ನೀರು ಸೇರಿಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಬೆಚ್ಚನೆಯ ನೀರಿನಿಂದ ತೊಳೆಯಿರಿ.

– ಸ್ವಲ್ಪ ಗೋದಿಹಿಟ್ಟಿಗೆ ನೀರು ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. 15 ರಿಂದ  20 ನಿಮಿಷಗಳ ನಂತರ ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ.

ತೈಲಯುಕ್ತ ತ್ವಚೆಗಾಗಿ : 2 ಚಮಚ ಮುಲ್ತಾನಿಮಿಟ್ಟಿ, 2 ಚಮಚ ನಿಂಬೆರಸ ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ. 20 ನಿಮಿಷಗಳ ನಂತರ ಕೊಂಚ ಬಿಸಿಯಾದ ನೀರಿನಿಂದ ತೊಳೆಯಿರಿ.

– ಮಸೂರ್‌ ದಾಲ್ ಅಥವಾ ಅಕ್ಕಿಯನ್ನು ತರಿಯಾಗಿ ಪುಡಿ ಮಾಡಿ. ಅದಕ್ಕೆ ಚಂದನದ ಪುಡಿ, ಮುಲ್ತಾನಿಮಿಟ್ಟಿ, ಕಿತ್ತಳೆ ಸಿಪ್ಪೆಯ ಪುಡಿ ಹಾಗೂ 2 ಚಮಚ ಸೌತೆಕಾಯಿಯ ರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.

– ಸ್ವಲ್ಪ ಜವೆಗೋದಿಹಿಟ್ಟು, ಸ್ವಲ್ಪ ಹಾಲು ಮತ್ತು 2 ಚಮಚ ನಿಂಬೆರಸ ಇವುಗಳನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸಿ. ಒಣಗಿದ ನಂತರ ತೊಳೆಯಿರಿ. ಇದರಿಂದ ಮುಖದಲ್ಲಿ ರಕ್ತ ಸಂಚಾರ ಸರಾಗವಾಗಿರುತ್ತದೆ ಮತ್ತು ಚರ್ಮ ನಿರ್ಮಲವಾಗಿರುತ್ತದೆ.

– ಸೋರೆಕಾಯಿಯ ತಿರುಳನ್ನು ಜಜ್ಜಿ  ಅದಕ್ಕೆ 1 ಚಮಚ ಪನ್ನೀರು ಮತ್ತು ಕೊಂಚ ನಿಂಬೆರಸ ಸೇರಿಸಿ. ಇದನ್ನು ಬಟ್ಟೆಯ ಮೇಲೆ ಇರಿಸಿಕೊಂಡು ಮುಖಕ್ಕೆ ಹಚ್ಚಿ. 15 ರಿಂದ 20 ನಿಮಿಷಗಳ ನಂತರ ತೆಗೆದು ಬಿಡಿ.

– ಜೆ. ಅಂಜನಾ

ಎಚ್ಚರಿಕೆ : ಫೇಸ್‌ ಪ್ಯಾಕ್‌ ಹಾಕಿಕೊಳ್ಳುವಾಗ ನೀವು ಗಮನಿಸಬೇಕಾದ ಅಂಶವೆಂದರೆ ಅದನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಇರಿಸಿಕೊಳ್ಳಬಾರದು ಹಾಗೂ ಕಣ್ಣುಗಳ ಸುತ್ತಲೂ ಹಚ್ಚಬಾರದು. ಒದ್ದೆ ಮಾಡಿದ ಹತ್ತಿಯನ್ನು ಕಣ್ಣಿನ ಮೇಲೆ ಇರಿಸಿಕೊಳ್ಳಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ