ಸುಂದರವಾಗಿ ಕಾಣಬೇಕೆನ್ನುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ಅವರ ಈ ಕನಸನ್ನು ನನಸು ಮಾಡುವಲ್ಲಿ ಕೂದಲು ಪ್ರಮುಖ ಪಾತ್ರವಹಿಸುತ್ತದೆ. ಉದ್ದನೆಯ, ದಟ್ಟ, ಹೊಳೆಯುವ ಕೂದಲು ಪಡೆಯಬೇಕೆಂಬುದು ಮಹಿಳೆಯರ ಮನದಾಳದ ಬಯಕೆಯಾಗಿರುತ್ತದೆ. ಅಷ್ಟೇ ಅಲ್ಲ, ಎಷ್ಟೋ ಮಹಿಳೆಯರು ತಮ್ಮ ಕೂದಲನ್ನೇ ಆಭರಣವೆಂದು ಭಾವಿಸುತ್ತಾರೆ. ಆದರೆ ಎಷ್ಟೋ ದುಬಾರಿ ಉತ್ಪನ್ನಗಳನ್ನು ಉಪಯೋಗಿಸಿದ ಬಳಿಕ ಕೂದಲಿನ ಬಗ್ಗೆ ಅವರ ಒಂದಿಲ್ಲೊಂದು ದೂರು ಇದ್ದೇ ಇರುತ್ತವೆ.
ಮಹಿಳೆಯರ ಈ ಎಲ್ಲ ಸಮಸ್ಯೆಗಳ ಕುರಿತಂತೆ ಹೇರ್ ಎಕ್ಸ್ ಪರ್ಟ್ ಹಾಗೂ ಡರ್ಮೆಟಾಲಜಿ ಡಾ. ಮನೀಷ್ ಹೀಗೆ ಹೇಳುತ್ತಾರೆ, “ಕೂದಲನ್ನು ಸುಂದರವಾಗಿ ಕಾಣಿಸುವ ಮುಂಚೆ ಅವನ್ನು ಆರೋಗ್ಯದಿಂದಿಡುವ ಬಗ್ಗೆ ಯೋಚಿಸಬೇಕು. ಶ್ಯಾಂಪೂ ಕೂದಲಿನ ಸ್ವಚ್ಛತೆಯ ಮುಖ್ಯ ಆಧಾರ. ಹೀಗಾಗಿ ಶ್ಯಾಂಪೂ ಆಯ್ಕೆ ಮತ್ತು ಅದರ ಸಮರ್ಪಕ ಬಳಕೆ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.”
ಕೂದಲಿನಲ್ಲಿ ಹೊಟ್ಟು ಇದ್ದರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ಆ್ಯಂಟಿ ಡ್ಯಾಂಡ್ರಫ್ ಮತ್ತು ಮೆಡಿಕಲ್ ಶ್ಯಾಂಪೂ ದೊರೆಯುತ್ತದೆ. ಶ್ಯಾಂಪೂ ಬಳಸುವವರು ಎಲ್ಲಕ್ಕೂ ವೊದಲು ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿಯೆಂದರೆ, ಶ್ಯಾಂಪೂವಿನ ಪಿ.ಎಚ್. ಅಥವಾ ಆ್ಯಸಿಡ್ ಸಮತೋಲನ ಅರಿಯಬೇಕು. ಅಂದಹಾಗೆ ಎಲ್ಲ ಶ್ಯಾಂಪೂಗಳ ಆ್ಯಸಿಡ್ ಸಮತೋಲನವಿರುತ್ತದೆ. ಆದರೆ ಕೆಲವು ಶ್ಯಾಂಪೂಗಳ ಪಿ.ಎಚ್. ಫ್ಯಾಕ್ಟರ್ ಅದರ ಆ್ಯಸಿಡ್ ಮತ್ತು ಅದರ ಆಲ್ಕೈನ್ ಡಿಗ್ರಿಯನ್ನು ಬಿಂಬಿಸುತ್ತದೆ. ಒಂದು ವೇಳೆ ಪಿ.ಎಚ್. ಫ್ಯಾಕ್ಟರ್ 5 ರಿಂದ 8.5ರ ನಡುವೆ ಇದ್ದರೆ, ಅದರ ಅಸಿಡಿಕ್ ಸಮತೋಲನ ಅಧಿಕವಾಗಿರುತ್ತದೆ ಮತ್ತು 8.5 ಅಥವಾ 11 ಡಿಗ್ರಿಗಿಂತ ಅಧಿಕ ಪಿಎಚ್ ಸಮತೋಲನ ಇರುನ ಶ್ಯಾಂಪೂವಿನಲ್ಲಿ ಆಲ್ಕೈನ್ ಬಹಳಷ್ಟು ಅಧಿಕವಾಗಿರುತ್ತದೆ. ಇಂತಹ ಶ್ಯಾಂಪೂ ಸಾಮಾನ್ಯ ಹಾಗೂ ಯಾವುದೇ ಪ್ರಕಾರದ ಬಣ್ಣ ಹಾಗೂ ಡೈ ಮಾಡಿದ ಕೂದಲಿಗೆ ಕಡಿಮೆ ಹಾನಿ ತಲುಪಿಸುತ್ತವೆ. ಏಕೆಂದರೆ ಈ ಶ್ಯಾಂಪೂ ಸೌಮ್ಯ ಪ್ರಕಾರದ್ದಾಗಿರುತ್ತದೆ. ಇಂತಹ ಶ್ಯಾಂಪೂ ಕೂದಲಿನ ಸ್ವಚ್ಛತೆಗಾಗಿ ಎಲ್ಲ ರೀತಿಯಲ್ಲೂ ಒಳ್ಳೆಯದೆಂದು ಭಾವಿಸಲಾಗುತ್ತದೆ. ಜೊತೆಗೆ ತಲೆಯ ತ್ವಚೆಗೂ ಇದು ಲಾಭಕರ. ಏಕೆಂದರೆ ಇದರಿಂದ ತ್ವಚೆಯಲ್ಲಿ ಹೊಟ್ಟು ಹಾಗೂ ತುರಿಕೆ ಉಂಟಾಗುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು ನೊರೆ ಉತ್ಪನ್ನ ಮಾಡುವ ಶ್ಯಾಂಪೂವನ್ನು ಉತ್ತಮ ಶ್ಯಾಂಪೂ ಎಂದು ಪರಿಗಣಿಸಬಾರದು. ಕಡಿಮೆ ನೊರೆ ಉತ್ಪನ್ನ ಮಾಡುವ ಶ್ಯಾಂಪೂಗಳೇ ಉತ್ತಮ ಕೆಲಸ ಮಾಡುತ್ತವೆ. ಅಂದಹಾಗೆ ಎಲ್ಲಿ ಗಡಸು ನೀರು ಇರುತ್ತೊ, ಅಲ್ಲಿ ಶ್ಯಾಂಪೂಗಳು ಕಡಿಮೆ ನೊರೆ ಉತ್ಪನ್ನ ಮಾಡುತ್ತವೆ. ಇದರರ್ಥ ಶ್ಯಾಂಪೂ ಗುಣಮಟ್ಟ ಸರಿಯಿಲ್ಲ ಎಂದಲ್ಲ.
ಶ್ಯಾಂಪೂ ಬಳಕೆಯ ವಿಧಾನ ಮತ್ತು ಯಾವಾಗ ಬಳಸಬೇಕು ಎಂಬುದರ ಬಗ್ಗೆ ಕೂಡ ಗಮನಿಸಬೇಕು. ಶ್ಯಾಂಪೂ ಬಳಸುವ ಮುನ್ನ ಕೂದಲಿನ ಸಿಕ್ಕುಗಳನ್ನು ಸರಿಪಡಿಸಿಕೊಳ್ಳಿ. ಏಕೆಂದರೆ ಸಿಕ್ಕು ಇರುವ ಕೂದಲು ಸ್ನಾನ ಮಾಡುವಾಗ ಮತ್ತಷ್ಟು ಗಂಟುಗಂಟಾಗುತ್ತದೆ. ನಿಮ್ಮ ಕೂದಲು ಕಿರಿದಾಗಿದ್ದರೆ, ಶ್ಯಾಂಪೂ ಮಾಡುವ ಸಂದರ್ಭದಲ್ಲಿ ತಲೆಯನ್ನು ಮುಂಭಾಗದತ್ತ ಬಗ್ಗಿಸಿ ಕೂದಲು ತೊಳೆದುಕೊಳ್ಳಿ. ನಿಮ್ಮ ಕೂದಲು ಉದ್ದವಾಗಿದ್ದರೆ, ನೇರವಾಗಿ ನಿಂತು ತಲೆ ಹಾಗೂ ಕತ್ತನ್ನು ಹಿಂಭಾಗದತ್ತ ವಾಲಿಸಿ ಕೂದಲಿಗೆ ಶ್ಯಾಂಪೂ ಹಾಕುವುದು ಒಳ್ಳೆಯದು. ಶ್ಯಾಂಪೂ ಮಾಡುವ ಸರಿಯಾದ ವಿಧಾನವೆಂದರೆ ಮೊದಲು ಕೂದಲನ್ನು ಒದ್ದೆ ಮಾಡಿಕೊಳ್ಳಬೇಕು. ನಂತರ ಶ್ಯಾಂಪೂವನ್ನು ಅಂಗೈಯಲ್ಲಿ ಹಾಕಿಕೊಂಡು ಇನ್ನೊಂದು ಕೈನ ಬೆರಳುಗಳ ತುದಿಯಿಂದ ತಲೆಯ ಸಂಪೂರ್ಣ ತ್ವಚಿ ಮತ್ತು ಕೂದಲಿನ ಮೇಲೆ ಹಗುರವಾಗಿ ಉಜ್ಜಿ ಒಂದೇ ಸಲ ನೊರೆ ಬರುವಂತೆ ಮಾಡಿ ನಂತರ ಚೆನ್ನಾಗಿ ತೊಳೆಯಿರಿ.
ತಜ್ಞರ ಪ್ರಕಾರ ಉದ್ಯೋಗಸ್ಥ ಯುವತಿಯರು ಪ್ರತಿದಿನ ಒಂದು ಒಳ್ಳೆಯ ಶ್ಯಾಂಪೂವನ್ನು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿ ಕೂದಲನ್ನು ತೊಳೆದುಕೊಳ್ಳಬೇಕು. ಕೂದಲಿಗೆ ಒಂದೇ ಸಲ ಮಾತ್ರ ಶ್ಯಾಂಪೂ ಹಾಕಬೇಕು ಹಾಗೂ ಅದರ ಪ್ರಮಾಣ ಕೂದಲಿನ ಉದ್ದಕ್ಕೆ ತಕ್ಕಂತೆ ಇರಬೇಕು. ಕೂದಲಿಗೆ ಶ್ಯಾಂಪೂ ಮಾಡಿದ ಬಳಿಕ ಕಂಡೀಷನರ್ ಹಚ್ಚುತ್ತಿದ್ದಲ್ಲಿ, ಶ್ಯಾಂಪೂ ಮತ್ತು ಕಂಡೀಷನರ್‌ನ್ನು ನೀರಿನಿಂದ ನಿವಾರಿಸುವುದು ಎಲ್ಲಕ್ಕೂ ಮುಖ್ಯ. ಏಕೆಂದರೆ ಕೂದಲಿನಲ್ಲಿ ಶ್ಯಾಂಪೂ ಹಾಗೂ ಕಂಡೀಷನರ್‌ನ ಅಂಶ ಪದರಿನಂತೆ ಜಮೆಗೊಳ್ಳುತ್ತವೆ. ಇದರಿಂದ ಕೂದಲಿನ ಸ್ವಾಭಾವಿಕ ಹೊಳಪು ಕಡಿಮೆಯಾಗುತ್ತದೆ.
ಶ್ಯಾಂಪೂ ಮತ್ತು ಕಂಡೀಷನರ್ ಬಳಕೆ
ಕೂದಲನ್ನು ಸ್ವಚ್ಛಗೊಳಿಸುವುದು ಮತ್ತು ಸರಿಯಾಗಿ ನಿರ್ವಹಣೆ ಮಾಡುವುದು ಬಹಳ ಕಷ್ಟಕರ ಎಂದು ಮಹಿಳೆಯರು ಭಾವಿಸಿದ್ದಾರೆ. ಆದರೆ ಅವರು ಅಂದುಕೊಂಡಷ್ಟು ಇದು ಕಷ್ಟದ ಕೆಲಸವೇನಲ್ಲ.
ಕೂದಲನ್ನು ಸ್ವಚ್ಛಗೊಳಿಸುವ ಮುನ್ನ ಚೆನ್ನಾಗಿ ಬ್ರಶ್ ಮಾಡಿ, ಏಕೆಂದರೆ ಕೂದಲನ್ನು ತೊಳೆಯುವ ಸಂದರ್ಭದಲ್ಲಿ ಅವು ಸಿಕ್ಕುಸಿಕ್ಕಾಗುವ ಹಾಗೂ ತುಂಡರಿಸುವ ಸಮಸ್ಯೆ ಉಂಟಾಗದಿರಲಿ.
ಆ ಬಳಿಕ ಕೂದಲು ತೊಳೆಯಲು ಒಂದು ಬಕೆಟ್‌ನಲ್ಲಿ ನೀರು ಹಾಕಿಕೊಳ್ಳಿ. ಆ ನೀರು ಸಾಧಾರಣ ಬೆಚ್ಚಗಿರಲಿ.
ಆ ಬಳಿಕ ಒಂದು ಮಗ್ ನೀರಿನಲ್ಲಿ ಶ್ಯಾಂಪೂ ಹಾಕಿ ಕಲಸಿ. ಕೂದಲಿಗೆ ನೇರವಾಗಿ ಶ್ಯಾಂಪೂ ಹಾಕಬಾರದು.
ಕೂದಲಿಗೆ ಶ್ಯಾಂಪೂ ಹಾಕಿದ ಬಳಿಕ ಬೆರಳಿನ ತುದಿಯಿಂದ ಹಗುರವಾಗಿ ಮಸಾಜ್ ಮಾಡಿ. ಆದರೆ ಯಾವುದೇ ಕಾರಣಕ್ಕೂ ತಲೆಗೆ ಉಗುರಿನ ಸ್ಪರ್ಶ ಆಗದಿರಲಿ.
ಆನಂತರ ಕೂದಲನ್ನು ಸ್ವಚ್ಛಗೊಳಿಸಿ ಶ್ಯಾಂಪೂವನ್ನು ನಿವಾರಿಸಿ. ಕೂದಲಿನಲ್ಲಿ ಉಳಿದ ಅಷ್ಟಿಷ್ಟು ಶ್ಯಾಂಪೂನಿಂದ ಕೂದಲಿಗೆ ಹಾನಿಯಾಗುತ್ತದೆ.
ಈಗ ಕೂದಲಿಗೆ ಕಂಡೀಷನರ್ ಹಚ್ಚಿ. ಅದಕ್ಕಾಗಿ ಕೂದಲನ್ನು 2 ಭಾಗಗಳಲ್ಲಿ ವಿಂಗಡಿಸಿ. ಬಳಿಕ ಕಂಡೀಷನರ್‌ನ್ನು ಅಂಗೈನಲ್ಲಿ ತೆಗೆದುಕೊಂಡು ಕೂದಲಿನ ಲೆಂಥ್ ಮೇಲೆ ಲೇಪಿಸಿ. ಕಂಡೀಷನರ್ ಕೂದಲಿನ ಬುಡಕ್ಕೆ ತಲುಪದಿರಲಿ. ಇದರಿಂದ ಕೂದಲು ದುರ್ಬಲಗೊಳ್ಳುತ್ತದೆ.
ಕೂದಲಿಗೆ ಕಂಡೀಷನರ್ ಲೇಪಿಸಿ 1 ನಿಮಿಷ ಹಾಗೆಯೇ ಬಿಡಿ. ಬಳಿಕ ಕೂದಲನ್ನು ಚೆನ್ನಾಗಿ ತೊಳೆದು ಕಂಡೀಷನರ್ ನಿವಾರಿಸಿ.
ಕೊನೆಯಲ್ಲಿ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಕೂದಲಿನ ಕ್ಯೂಟಿಕಲ್ಸ್ ಬಂದ್ ಆಗುತ್ತವೆ ಹಾಗೂ ಅವುಗಳಿಗೆ ಹೊಳಪು ಬರುತ್ತದೆ.
ಬಿಸಿಲಿನ ಪ್ರಖರತೆಯಲ್ಲಿ ಕೂದಲನ್ನು ರಕ್ಷಿಸಿ
ತೀವ್ರ ಬಿಸಿಲು ಮತ್ತು ಬೆವರು ಇವೆರಡೂ ಕೂದಲಿನ ವೈರಿಗಳೇ ಹೌದು. ಅರ್ಧ ಗಂಟೆ ಮುಂಚೆ ಶ್ಯಾಂಪೂ ಹಾಕಿದ ಕೂದಲು ಕೂಡ ಬಿಸಿಲಿಗೆ ತತ್ತರಿಸಿ ಹೋಗುತ್ತವೆ. ಬೆವರಿನಿಂದ ರೋಮ ಛಿದ್ರಗಳು ಮುಕ್ತಗೊಳ್ಳುವುದರಿಂದ ಕೂದಲು ದುರ್ಬಲಗೊಳ್ಳುತ್ತದೆ ಹಾಗೂ ಉದುರಲಾರಂಭಿಸುತ್ತದೆ. ಇಂತಹ ಸ್ಥಿತಿಯಲ್ಲಿ ಕೂದಲಿನ ಆರೈಕೆಯ ಬಗ್ಗೆ ಹೆಚ್ಚು ಗಮನಹರಿಸಬೇಕು.
ಕೂದಲು ಕಿರಿದಾಗಿರಲಿ ಅಥವಾ ಉದ್ದವಾಗಿರಲಿ, ವಾರದಲ್ಲಿ 3 ದಿನ ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
ಶ್ಯಾಂಪೂ ಯಾವಾಗಲೂ ಮೈಲ್ಡ್ ಆಗಿರಲಿ ಹಾಗೂ ನಂಬಿಕಸ್ಥ ಬ್ರ್ಯಾಂಡಿನದೇ ಇರಲಿ. ಏಕೆಂದರೆ ಕೆಮಿಕಲ್ ಗಳ ದುಷ್ಪರಿಣಾಮ ಸಾಧ್ಯವಾದಷ್ಟು ಕಡಿಮೆಯಾಗಿರಲಿ. ಶೀಕಾಕಾಯಿ, ನೆಲ್ಲಿಕಾಯಿ ಇದಕ್ಕೆ ಒಳ್ಳೆಯ ಪರ್ಯಾಯಗಳಾಗಿವೆ.
ವಾರದಲ್ಲಿ 1 ಅಥವಾ 2 ಸಲ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿ. ಎಣ್ಣೆಯನ್ನು ಕೂದಲಿನ ಬುಡಭಾಗಕ್ಕೆ ಲೇಪಿಸಿ.
ಮನೆಯಿಂದ ಹೊರಗೆ ಹೋಗುವಾಗ ಕೂದಲನ್ನು ಚೆನ್ನಾಗಿ ಕವರ್ ಮಾಡಿಕೊಳ್ಳಿ. ನೇರವಾದ ಬಿಸಿಲು ಹಾಗೂ ಧೂಳಿನಿಂದ ಅದನ್ನು ರಕ್ಷಿಸಿ. ಬೆವರಿನಿಂದ ಕೂದಲು ಜಿಗಟುಜಿಗುಟಾದಂತೆ ಅನಿಸುತ್ತಿದ್ದರೆ ಅದನ್ನು ಚೆನ್ನಾಗಿ ತೊಳೆಯಿರಿ. ನಿಮಗೆ ತೊಳೆಯಲು ಸಾಧ್ಯವಾಗದಿದ್ದಲ್ಲಿ ಕೂದಲನ್ನು ಚೆನ್ನಾಗಿ ಒಣಗಿಸುವ ಪ್ರಯತ್ನವನ್ನಾದರೂ ಮಾಡಿ.
– ಉಮಾ ರಾವ್