ಬೇವು ಬೆಲ್ಲ ಇಲ್ಲದೆ ಯುಗಾದಿ ಎಂದಾದರೂ ಸಾಧ್ಯವೇ? ಅದೇ ತರಹ ಬೇವು ಸೌಂದರ್ಯ ಸಂರಕ್ಷಣೆಗೂ ಬಹಳ ಸಹಕಾರಿ. ನಿಮ್ಮ ಮೊಡವೆಗಳ ನಿವಾರಣೆಯಿಂದ ಹಿಡಿದು ತಲೆಹೊಟ್ಟಿನ ನಿವಾರಣೆವರೆಗೂ ಇದರ ಪಾತ್ರ ಹಿರಿದು. ಇದನ್ನು ಬೇರೆ ಬೇರೆ ರೂಪಗಳಲ್ಲಿ ಬಳಸಿ ಸೌಂದರ್ಯ ವರ್ಧನೆ ಮಾಡಿಕೊಳ್ಳಿ. ಇಷ್ಟು ಮಾತ್ರವಲ್ಲ, ಇದರ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಂತೂ ವರ್ಣನಾತೀತ! ಇದನ್ನು ನೀವು ಏರ್ ಬೋರ್ನ್ ಬ್ಯಾಕ್ಟೀರಿಯಲ್ ರೋಗಗಳು ಮತ್ತು ವೈರಸ್ ನಿಯಂತ್ರಣಕ್ಕೂ ನೈಸರ್ಗಿಕವಾಗಿ ಬಳಸಿಕೊಳ್ಳಬಹುದು. ಹಲವು ವಿಧಾನಗಳ ಮೂಲಕ ಬೇವಿನ ಬಳಕೆಯಿಂದ ನಿಮ್ಮ ಆರೋಗ್ಯ ಹಾಗೂ ಚರ್ಮ ಸೌಂದರ್ಯಕ್ಕೆ ಲಾಭ ತರಬಹುದು. ಇದರ ಬಗ್ಗೆ ವಿವರವಾಗಿ ತಿಳಿಯೋಣವೇ?
ಆ್ಯಂಟಿ ಫಂಗಲ್/ಬ್ಯಾಕ್ಟೀರಿಯಲ್
ಬೇವಿನ ಎಲೆಗಳನ್ನು ಫಂಗಲ್/ಬ್ಯಾಕ್ಟೀರಿಯಲ್ ಸೋಂಕು ನಿವಾರಿಸಲು ತಿಳಿಸುತ್ತಾರೆ. ಹೀಗಾಗಿ ವಾರ್ಟ್ಸ್, ಚಿಕನ್ ಪಾಕ್ಸ್, ಸ್ಮಾಲ್ ಪಾಕ್ಸ್ (ಅಮ್ಮ) ಆಗಿರುವಾಗ ರೋಗಿ ಪಕ್ಕದಲ್ಲಿ ಧಾರಾಳ ಇರಿಸಿ, ಅರೆದು ಅದನ್ನು ಮೈ ತುಂಬಾ ಪೂಸಿ, ಬಕೆಟ್ ನೀರಿನ ತುಂಬಾ ಬೇವಿನ ಎಲೆ ಹಾಕಿ ಸ್ನಾನ ಮಾಡಿಸುತ್ತಾರೆ. ಎಲ್ಲೆಲ್ಲಿ ಸೋಂಕು ಹರಡಿದೆಯೋ ಆ ಭಾಗಕ್ಕೆ ಇದರ ಪೇಸ್ಟ್ ನ್ನು ಧಾರಾಳ ಲೇಪಿಸಬೇಕು. ಒಡೆದ ಹಿಮ್ಮಡಿ, ಕಾಲು ಬೆರಳಿನ ಸಂಧಿನಲ್ಲಿ ಉಂಟಾಗುವ ಸೋಂಕಿಗೂ ರಾಮಬಾಣ. ವಿಶೇಷವಾಗಿ ಅಥ್ಲೀಟ್ಸ್ ಗೆ ಇದು ಬಹಳ ಸಹಕಾರಿ.
ಇಮ್ಯುನಿಟಿ ಹೆಚ್ಚಿಸಲು
ಕೊರೋನಾ ಕಾಟದಿಂದಾಗಿ ನಾವೆಲ್ಲರೂ ಹಿಂದಿಗಿಂತಲೂ ಹೆಚ್ಚಾಗಿ ನಮ್ಮ ಇಮ್ಯುನಿಟಿ ಹೆಚ್ಚಿಸಿಕೊಳ್ಳುತ್ತ ಗಮನ ಹರಿಸಬೇಕಿದೆ. ಬೇವು ನಿವಾರಕ ಬ್ಯಾಕ್ಟೀರಿಯಾ, ವೈರಸ್ ಗಳನ್ನು ನಾಶಪಡಿಸಿ ನಮ್ಮ ಇಮ್ಯುನಿಟಿ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಶ್ರೇಷ್ಠ ಸ್ಥಾನ ನೀಡಲಾಗಿದ್ದು, ನಮ್ಮ ದೈನಂದಿನ ಆಹಾರದ ಬಳಕೆಯಲ್ಲೂ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುತ್ತದೆ.
ನೀವು ಮಹಾನಗರಗಳ ಕಾಂಕ್ರೀಟ್ ಕಾಡಿನಲ್ಲಿರುವುದರಿಂದ ಸಕಾಲಕ್ಕೆ ತಾಜಾ ಬೇವು ಸಿಗುತ್ತಿಲ್ಲ ಎಂದು ಕಂಗಾಲಾಗಿದ್ದರೆ, ಬ್ಯಾಕ್ಟೀರಿಯಾ/ವೈರಸ್ ನಿವಾರಣೆಗಾಗಿ ನೀವು ಹತ್ತಿರದ ಮೆಡಿಕಲ್ ಸ್ಟೋರ್ ನಿಂದ ನೀಮ್ ತುಳಸಿ ಹರ್ಬಲ್ ಮಾಯಿಶ್ಚರೈಸಿಂಗ್ ಲೋಶನ್, ಬಾಡಿವಾಶ್ ವಿತ್ ನೀಮ್ ಮುಂತಾದ ಹರ್ಬಲ್ ಟಾಯ್ಲೆಟರೀಸ್, ಕಾಸ್ಮೆಟಿಕ್, ಬಳಸಲು ಮರೆಯದಿರಿ. ಬೇವು ತುಂಬಿದ ಸೋಪಿನಿಂದಲೇ ನಿತ್ಯ ಸ್ನಾನ ಮಾಡಿ. ಇಂಥ ನೈಸರ್ಗಿಕ ಬಾಡಿವಾಶ್ ಗಳು ನಿಮ್ಮ ಚರ್ಮಕ್ಕೆ ಬಲು ಉಪಯುಕ್ತ. ಇದು ಇಡೀ ದಿನ ನಿಮ್ಮ ಚರ್ಮವನ್ನು ಮಾಯಿಶ್ಚರೈಸ್ಡ್ ಆಗಿಡುತ್ತದೆ.
ಸಶಕ್ತ ನೀಳ ಕೂದಲಿಗಾಗಿ
ಬೇವು ಕೂದಲನ್ನು ಬಲು ದೃಢ, ಸಶಕ್ತಗೊಳಿಸಿ, ಅದರ ಆರೋಗ್ಯಕರ ಬೆಳವಣಿಗೆಯಲ್ಲಿ ಸಹಕಾರಿ ಆಗಿದೆ. ಬೇವಿನ ಎಲೆಯ ಪೇಸ್ಟ್ ನ್ನು ಸೀಗೆ, ಚಿಗರೆಪುಡಿ ಜೊತೆ ಬೆರೆಸಿ ಉತ್ತಮ ಹರ್ಬಲ್ ಶ್ಯಾಂಪೂ, ಕಂಡೀಶನರ್ ಆಗಿ ಬಳಸಿರಿ. ತನ್ನ ಆ್ಯಂಟಿ ಫಂಗಲ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಇನ್ ಫ್ಲಮೇಟರಿ ಗುಣಗಳಿಂದಾಗಿ ಬೇವು ತಲೆಹೊಟ್ಟಿನ ನಿವಾರಣೆಯಲ್ಲಿ ಅಗ್ರಗಣ್ಯ ಸ್ಥಾನ ಹೊಂದಿದೆ. ಇದು ಕೂದಲಿನ ಬುಡ ಭಾಗವನ್ನು ಸಶಕ್ತಗೊಳಿಸುತ್ತದೆ, ಈ ಕಾರಣದಿಂದಾಗಿ ಕೂದಲು ದಟ್ಟ, ಒತ್ತಾಗಿ, ಗಾಢ ಕಪ್ಪು ಬಣ್ಣ ತುಂಬಿಕೊಳ್ಳುತ್ತದೆ. ಇದು ಕೂದಲಿನ ಬುಡಭಾಗಕ್ಕೆ ಅತ್ಯಗತ್ಯ ಕಂಡೀಶನಿಂಗ್‌ಪ್ರೊಟೆಕ್ಷನ್ ಒದಗಿಸುತ್ತದೆ. ಅದರಿಂದ ಕೂದಲಿನ ವಾಲ್ಯೂಂ ಹೆಚ್ಚಿ, ಕಾಂತಿಯುತವಾಗುತ್ತದೆ.




 
  
         
    





 
                
                
                
                
                
                
               