- ರಾಘವೇಂದ್ರ ಅಡಿಗ ಎಚ್ಚೆನ್
ಭಾರತದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ '45' ಇದೀಗ ಅದರ ಪ್ರಮೋಷನಲ್ ಹಾಡು 'AFRO ಟಪಾಂಗ್' ಮೂಲಕ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿಯಂತಹ ಸ್ಯಾಂಡಲ್‌ವುಡ್‌ನ ಮೂವರು ಸ್ಟಾರ್‌ಗಳು ಒಟ್ಟಾಗಿ ನಟಿಸಿರುವ ಈ ಬಹುನಿರೀಕ್ಷಿತ ಚಿತ್ರ, ಡಿಸೆಂಬರ್ 2025ರ ಅತ್ಯಂತ ನಿರೀಕ್ಷಿತ ಸಿನಿಮಾ.

ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಮಟ್ಟದ ವೀಕ್ಷಣೆಯನ್ನ ಪಡೆದ 'AFRO ಟಪಾಂಗ್' ಹಾಡು ಭಾರತದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲೂ ಟಾಪ್ ಟ್ರೆಂಡಿಂಗ್ ಸಾಂಗ್ ಆಗಿದೆ. ಈ ಹಾಡು ಜಾಗತಿಕವಾಗಿ 28.5 ಮಿಲಿಯನ್ ವೀಕ್ಷಣೆಗಳೊಂದಿಗೆ ಹೊಸ ಮೈಲಿಗಲ್ಲನ್ನು ದಾಟಿದೆ.
ನಿರ್ಮಾಪಕ ರಮೇಶ್ ರೆಡ್ಡಿ ಅವರ ಈ ಅತಿ ದೊಡ್ಡ ಸಾಹಸಕ್ಕೆ (ಚಿತ್ರದ ಬಜೆಟ್ ₹100 ಕೋಟಿ ಎಂದು ಅಂದಾಜಿಸಲಾಗಿದೆ) ಈ ಭರ್ಜರಿ ಯಶಸ್ಸು ಭದ್ರ ಬುನಾದಿ ಹಾಕಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ಚಿತ್ರದ ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಯಶಸ್ಸನ್ನು ಕಂಡಿದೆ.

ಯೂಟ್ಯೂಬ್‌ನಲ್ಲಿ 28.5 ಮಿಲಿಯನ್ ವೀಕ್ಷಣೆಗಳ ಧೂಳೀಪಟ!
'AFRO ಟಪಾಂಗ್' ಹಾಡು ತನ್ನ ವಿಶಿಷ್ಟ ಮ್ಯೂಸಿಕ್ ಮತ್ತು ಉಗಾಂಡದ ಪ್ರಸಿದ್ಧ ಜಿಟೊ ಕಿಡ್ಸ್ (Ghetto Kids) ತಂಡದ ಆಕರ್ಷಕ ಸ್ಟೆಪ್ಸ್‌ಗಳಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಟೊ ಕಿಡ್ಸ್ ತಂಡವು ಭಾರತೀಯ ಚಿತ್ರರಂಗಕ್ಕೆ ಇದೇ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ. ಈ ಪ್ರಮೋಷನಲ್ ಸಾಂಗ್ ಯುಟ್ಯೂಬ್‌ನಲ್ಲಿ ಬರೋಬ್ಬರಿ 28.5M ಮಿಲಿಯನ್ ವೀಕ್ಷಣೆಗಳು ಹಾಗು 265k ಲೈಕ್ಸ್ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದೆ.
ಕೇವಲ ಪ್ರಚಾರಕ್ಕಾಗಿ ಬಿಡುಗಡೆ ಮಾಡಿದ ಹಾಡಿಗೆ ಇಷ್ಟೊಂದು ದೊಡ್ಡ ಮಟ್ಟದ ವೀಕ್ಷಣೆ ಮತ್ತು ಎಂಗೇಜ್‌ಮೆಂಟ್ ಸಿಕ್ಕಿರುವುದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ '45' ಚಿತ್ರದ ಕಂಟೆಂಟ್ ಮತ್ತು ಅದರ ಮೇಲಿರುವ ನಿರೀಕ್ಷೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

*ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ವೈರಲ್ ಟ್ರೆಂಡ್!*
ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೆ, ಇನ್‌ಸ್ಟಾಗ್ರಾಂನಲ್ಲೂ 'AFRO ಟಪಾಂಗ್' ಹಾಡು ವೈರಲ್ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಹಾಡಿನ ಡ್ಯಾನ್ಸ್ ಸ್ಟೆಪ್ಸ್ ಮತ್ತು ಆಫ್ರೋ ಬೀಟ್ಸ್ ಜನರನ್ನು ಆಕರ್ಷಿಸಿದ್ದು, ರೀಲ್ಸ್‌ಗಳ ಸೃಷ್ಟಿಗೆ ಪ್ರೇರಣೆ ನೀಡಿದೆ.

*ಹಾಲಿವುಡ್ ಸಂಸ್ಥೆಯ ಸಹಯೋಗ*
ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಹಾಲಿವುಡ್ ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಿರುವ ಕೆನಡಾದ ಪ್ರತಿಷ್ಠಿತ ವಿ.ಎಫ್.ಎಕ್ಸ್ ಸಂಸ್ಥೆ "MARZ" ಕೂಡ ಈ ಚಿತ್ರದ ಭಾಗವಾಗಿದೆ. ಇದು ಚಿತ್ರದ ತಾಂತ್ರಿಕ ಗುಣಮಟ್ಟದ ಬಗ್ಗೆ ಹೆಚ್ಚಿನ ಭರವಸೆ ಮೂಡಿಸಿದೆ.

'AFRO ಟಪಾಂಗ್' ಹಾಡಿನ ಯಶಸ್ಸಿನ ಈ ಅಲೆಯಲ್ಲಿ, ಡಿಸೆಂಬರ್ 25ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ '45' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರೀ ಓಪನಿಂಗ್ ಪಡೆಯುವ ನಿರೀಕ್ಷೆ ಮೂಡಿಸಿದೆ.





