- ರಾಘವೇಂದ್ರ ಅಡಿಗ ಎಚ್ಚೆನ್.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಪುತ್ರ ಪವನ್ ವೆಂಕಟೇಶ್ ನಿರ್ದೇಶನದಲ್ಲಿ ‘ಫಸ್ಟ್ ಸ್ಯಾಲರಿ’ ಕಿರುಚಿತ್ರವನನು ನಿರ್ಮಿಸಿದ್ದು, ಈ ಚಿತ್ರಕ್ಕೆ ‘ಕನಸುಗಳ ಹಾದಿ’ ಎನ್ನುವ ಅಡಿಬರಹವಿದೆ. ‘ಫಸ್ಟ್ ಸ್ಯಾಲರಿ’ ಕಿರುಚಿತ್ರದ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಉತ್ಸವ ಲೆಗಸಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟಿ ಶ್ರುತಿ ಸೇರಿದಂತೆ ಅನೇಕ ಗಣ್ಯರು, ಹಿರಿ ಕಿರಿಯ ಪತ್ರಕರ್ತರು, ಮಾದ್ಯಮ ಮಿತ್ರರು ಹಾಗೂ ಡಿ.ವಿ. ಸುಧೀಂದ್ರ ಅವರ ಕುಟುಂಬ ಸದಸ್ಯರು, ಸ್ನೇಹಿತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.

ಹಿರಿಯ ನಟ ಎಂ.ಎಸ್. ಉಮೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸುವುದರೊಡನೆ ಕಾರ್ಯಕ್ರಮ ಪ್ರಾರಂಭವಾಗಿದ್ದು ಅತಿಥಿಗಳು ಕಿರುಚಿತ್ರಕ್ಕೆ ಶುಭಹಾರೈಸಿದ್ದಲ್ಲದೆ ನಿರ್ದೇಶಕನಾದ ಪವನ್ ಭವಿಷ್ಯದಲ್ಲಿ ಮತ್ತಷ್ಟು ಉತ್ತಮ ಸಿಇನಿಮಾ ಮಾಡಲಿ ಎಂದು ಸಹ ಹಾರೈಸಿದ್ದಾರೆ.
ಈ ಹಿಂದೆ ಕರೋನ ಸಮಯದಲ್ಲಿ ‘ಕರಾಳ ರೋಗ ನಾಶ’ ಎಂಬ ಕಿರುಚಿತ್ರ, ಕನ್ನಡದ ಅಗ್ರಗಣ್ಯ ಸಿನಿಮಾ ಪ್ರಚಾರಕರ್ತ ದಿ ಡಿ.ವಿ ಸುಧೀಂದ್ರ ಅವರ ಬದುಕಿನ ಕುರಿತಾದ “ಡಿ ವಿ ಸುಧೀಂದ್ರ ಸಿನಿ ಪಯಣ” ಸಾಕ್ಷ್ಯಚಿತ್ರ ಹಾಗು ಆನಿಮೇಷನ್ ನಲ್ಲಿ "ರಾಮಜನ್ಮ ಭೂಮಿ" ಕಿರುಚಿತ್ರ ನಿರ್ದೇಶನ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವ ಹೊಂದಿರುವ ಪವನ್ ವೆಂಕಟೇಶ್, ಈಗ ‘ಫಸ್ಟ್ ಸ್ಯಾಲರಿ’ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಕಿರುಚಿತ್ರದಲ್ಲಿ ಹಿರಿಯ ಕಲಾವಿದರಾದ ಹರಿಣಿ ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ವಿಜಯ್ ಶಿವಕುಮಾರ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ ಮತ್ತು ರಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೋಡುಗರಿಗೆ ಬೇಕಾದ ಎಲ್ಲಾ ಕಮರ್ಷಿಯಲ್ ಅಂಶ ಈ ಕಿರುಚಿತ್ರದಲ್ಲಿದೆ. . ಶ್ರೀರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್ ಚಾನಲ್‍ನಲ್ಲಿ ಈ ಕಿರುಚಿತ್ರ ಬಿಡುಗಡೆ ಆಗಿದೆ.

‘ಫಸ್ಟ್ ಸ್ಯಾಲರಿ’ ತಾಯಿಯ ಸೆಂಟಿಮೆಂಟ್ ಆಧರಿಸಿದ ಕಿರುಚಿತ್ರವಾಗಿದ್ದು, ಬೆಂಗಳೂರಿನ ನಾಗರಭಾವಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಕಿರುಚಿತ್ರದಲ್ಲಿ ಒಂದು ಹಾಡಿದ್ದು, ಡಿಐ ಸೇರಿದಂತೆ ಒಟ್ಟಾರೆ ಕಿರುಚಿತ್ರದ ತಯಾರಿಕೆಗೆ 2 ರಿಂದ ಮೂರು ತಿಂಗಳು ಹಿಡಿದಿದೆ. ’ಫಸ್ಟ್ ಸ್ಯಾಲರಿ’ ಕಿರುಚಿತ್ರ ಒಟ್ಟಾರೆ 24 ನಿಮಿಷದ ಅವಧಿ ಇದೆ. ನಿರ್ದೇಶನ ತಂಡದಲ್ಲಿ ಮನೋಜ್ ಕುಮಾರ್ ಎಚ್.ಎನ್ ಮತ್ತು ರವಿ ಸಾಸನೂರು ಕೆಲಸ ಮಾಡಿದ್ದು ಪ್ರಚಾರ ಕಲೆ ಮಣಿ ಅವರದು. ವಿಜಯ್ ಶಿವಕುಮಾರ್ ರಚನೆ, ರಿಚರ್ಡ್ ಡ್ಯಾನಿಯಲ್ ಛಾಯಾಗ್ರಾಹಣದ ಜೊತೆಗೆ ಸಂಕಲನ ಮಾಡಿದ್ದು ವಿಜಯ್ ಹರಿತ್ಸ ಸಂಗೀತ ಸಂಯೋಜಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಂಪರ್ಕಕೊಂಡಿಯಾಗಿ ಕಳೆದ ಐದು ದಶಕಗಳಿಂದ ಕೆಲಸ ಮಾಡುತ್ತಿರುವ ‘ಶ್ರೀ ರಾಘವೇಂದ್ರ ಚಿತ್ರವಾಣಿ’ ಮೂಲಕ ಡಿ.ವಿ. ಸುಧೀಂದ್ರ ಅವರು ‘ಒಲವಿನ ಉಡುಗೊರೆ’, ‘ಗಣೇಶನ ಮದುವೆ’, ‘ಗುಂಡನ ಮದುವೆ’, ‘ಪಟ್ಟಣಕ್ಕೆ ಬಂದ ಪುಟ್ಟ’ ಮತ್ತು ‘ನಗು ನಗುತಾ ನಲಿ’ ಚಿತ್ರಗಳನ್ನು ನಿರ್ಮಾಣ ಮಾಡಿದ್ದರೆನ್ನುವುದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.





