– ರಾಘವೇಂದ್ರ ಅಡಿಗ ಎಚ್ಚೆನ್.
ತಿಂಗಳುಗಳ ಕಾಲ ಸಿನಿರಸಿಕರ ನಡುವೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ . ತೆಲುಗು ಸಿನಿಜಗತ್ತು ಹಾಗೂ ದಕ್ಷಿಣ ಭಾರತದ ಸಿನಿಮಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ನಟ ಅಲ್ಲು ಅರ್ಜುನ್ ತನ್ನ 23ನೇ ಚಿತ್ರದ ಘೋಷಣೆಯನ್ನು ಅಧಿಕೃತವಾಗಿ ನೀಡಿದ್ದಾರೆ . ನಿರ್ದೇಶಕ ಲೋಕೇಶ್ ಕನಕರಾಜ್ ಅವರೊಂದಿಗೆ ನಟ ಒಗ್ಗೂಡಿರುವ ಈ ಹೊಸ ಸಿನಿಮಾ ಈಗಾಗಲೇ ದಕ್ಷಿಣ ಭಾರತದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಜನವರಿ 14ರಂದು AA 23 ಎಂಬ ತಾತ್ಕಾಲಿಕ ಶೀರ್ಷಿಕೆಯಲ್ಲಿ ಚಿತ್ರವನ್ನು ಘೋಷಿಸಿದೆ. ಈ ಒಂದು ಟ್ವೀಟ್ ಅಥವಾ ಪೋಸ್ಟ್ ಬಿಡುಗಡೆಯಾಗುತ್ತಿದ್ದಂತೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಕೇಳಿಬಂದಿತು. ಅಲ್ಲು ಅರ್ಜುನ್ ಹಿಂದೆ ಇದೇ ನಿರ್ಮಾಣ ಸಂಸ್ಥೆಯೊಂದಿಗೆ ಪುಷ್ಪಾ ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಅದರಿಂದಲೇ ಈ ಹೊಸ ಜೋಡಾಟದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಲೋಕೇಶ್ ಕನಕರಾಜ್ ದಕ್ಷಿಣ ಭಾರತದ ಹೊಸ ಪೀಳಿಗೆಯ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬ. ಕೈತಿ, ಮಾಸ್ಟರ್, ವಿಕ್ರಮ್ ಮುಂತಾದ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ತನ್ನದೇ ಆದ ವಿಶಿಷ್ಟ ಶೈಲಿಯನ್ನು ನಿರ್ಮಿಸಿಕೊಂಡಿರುವ ಅವರು ಇದೀಗ ಆ ಶೈಲಿಯನ್ನು ಅಲ್ಲು ಅರ್ಜುನ್ ಜಗತ್ತಿಗೆ ಸೇರಿಸಲಿದ್ದಾರೆ.
ಪುಷ್ಪಾ ಸರಣಿಯ ಮೂಲಕ ಭಾರತದೆಲ್ಲೆಡೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಅಲ್ಲು ಅರ್ಜುನ್ ಈಗ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ ಎಂಬುದು ಸಿನಿರಸಿಕರಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಲೋಕೇಶ್ ಕನಕರಾಜ್ ಸಿನಿಮಾಗಳು ಸಾಮಾನ್ಯವಾಗಿ ಆಕ್ಷನ್, ಇಂಟೆನ್ಸಿಟಿ ಮತ್ತು ಡಾರ್ಕ್ ಟೋನ್‌ಗಾಗಿ ಪ್ರಸಿದ್ಧವಾಗಿರುವುದರಿಂದ, ಈ ಬಾರಿ ನಟ ಸಂಪೂರ್ಣ ವಿಭಿನ್ನ ಲುಕ್ ಮತ್ತು ಶೈಲಿಯಲ್ಲಿ ಮೂಡಿಬರಬಹುದು ಎನ್ನುವ ನಿರೀಕ್ಷೆ ಇದೆ.

ಘೋಷಣೆ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಟ್ವಿಟ್ಟರ್, ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಯಿತು. ಅಲ್ಲು ಅರ್ಜುನ್‌ನ ಫ್ಯಾನ್ಸ್, ಲೋಕೇಶ್ ಕನಕರಾಜ್ ಅಭಿಮಾನಿ ಬಳಗ ಹಾಗೂ ತಮಿಳು–ತೆಲುಗು ಸಿನಿರಸಿಕರು ಈ ಜೋಡಾಟವನ್ನು ಡ್ರೀಮ್ ಕಾಂಬೊ ಎಂದು ಕರೆಯುತ್ತಿದ್ದಾರೆ. ಈ ಚಿತ್ರದ ಮೊದಲ ಲುಕ್, ಟೀಸರ್ ಹಾಗೂ ಟ್ರೈಲರ್ ಕುರಿತು ಈಗಾಗಲೇ ನಿರೀಕ್ಷೆಗಳು ಗರಿಷ್ಠ ಮಟ್ಟಕ್ಕೇರಿದೆ
ಅಲ್ಲು ಅರ್ಜುನ್ ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಭಾವ ಬೀರಿರುವುದರಿಂದ, ಲೋಕೇಶ್ ಕನಕರಾಜ್ ಅವರ ನಿರ್ದೇಶನದೊಂದಿಗೆ ಅವರ ಹೊಸ ಸಿನಿಮಾ ದೇಶದಾದ್ಯಂತ ಹೊಸ ದಾಖಲೆಯನ್ನು ಸೃಷ್ಟಿಸಬಹುದು ಎಂಬ ಊಹೆಗಳು ಜೋರಾಗಿದೆ.





