ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ದೇಶಕ : ಅಭಿಜಿತ್ ತೀರ್ಥಹಳ್ಳಿ
ನಿರ್ಮಾಣ" ವಡ್ಡರಹಳ್ಳಿ ಮಂಜು ಮತ್ತು ಪೂರ್ಣಿಮಾ ಎಂ. ಗೌಡ
ತಾರಾಂಗಣ: ವಿಕಾಶ್ ಉತ್ತಯ್ಯ,ರಾಧಾ ಭಗವತಿ,ಹರಿಣಿ,ಅಶ್ವಿನ್ ಹಾಸನ್,ಮಿಥುನ್,ರಾಘವ ಮೊದಲಾದವರು
ರೇಟಿಂಗ್:3/5
-ರಾಘವೇಂದ್ರ ಅಡಿಗ ಎಚ್ಚೆನ್.
ಮಧ್ಯರಾತ್ರಿಯಲ್ಲಿ ಇಬ್ಬರು ವ್ಯಕ್ತಿಗಳು ಮಿನಿವ್ಯಾನ್ ಓಡಿಸುವುದರೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಮಧ್ಯರಾತ್ರಿಯ ಸಮಯ ಅವರು ಗುಡ್ಡಗಾಡು ಪ್ರದೇಶವನ್ನು ಪ್ರವೇಶಿಸಿದಾಗ, ವಾಹನವು ಇದ್ದಕ್ಕಿದ್ದಂತೆ ನಿಲ್ಲುತ್ತದೆ. ಅವರು ಮುಂದಿರುವ ಅಪಾಯವನ್ನು ಗ್ರಹಿಸುತ್ತಾರೆ!
ಡಿಗ್ರಿ ಕೂಡ ಪಾಸ್ ಮಾಡಲು ಸಾಧ್ಯವಾಗದೇ ತಿರುಗಾಡಿಕೊಂಡಿರುವ ಮೂವರು ವಿದ್ಯಾರ್ಥಿಗಳಾದ ಸೂರಿ (ವಿಕಾಶ್), ಪೆಟ್ಗೆ (ರಾಘವ್), ಗಾಬ್ರಿಗೆ (ಮಿಥುನ್) ಮೂವರು ಸ್ನೇಹಿತರು. ಅವರಿಗೆ ಸರಿಯಾದ ದುಡಿಮೆ ಇಲ್ಲ, ಜೀವನದಲ್ಲಿ ಯಾವ ಶಿಸ್ತೂ ಇಲ್ಲ ಆದರೆ ಮೂವರಿಗೂ ತಾವು ಏನಾದರೂ ಮಾಡಿ ಹಣ ಗಳಿಸಬೇಕೆನ್ನುವ ಗುರಿ ರುತ್ತದೆ. ಅದಕ್ಕಾಗಿ ಅವರು ಆಯ್ಕೆ ಮಾಡಿಕೊಳ್ಳುವುದು ಅಡ್ಡ ದಾರಿ. ಅವರು ಕೋಟೆ ಕಾಡಿನ ದಾರಿ ಹಿಡಿದು ಅಲ್ಲಿ ಶ್ರೀಗಂಧದ ಮರದ ಶೋಧದಲ್ಲಿ ತೊಡಗುತ್ತಾರೆ. ಅಲ್ಲಿಂದ ಅವರು ಕಾಡಿನ ಒಳಗೆ ಇಳಿಯುತ್ತಾ ಹೋಗುತ್ತಾರೆ. ಸಿನಿಮಾ ಸಹ ಹಾರರ್, ಥ್ರಿಲ್ಲರ್ ಮತ್ತು ಚಿಲ್ ಗಳಿಂದ ಮುಂದೆ ಸಾಗುತ್ತದೆ.
ಮಲೆನಾಡಿನ ತೀರ್ಥಹಳ್ಳಿಯ ಕಡೆಯವರಾದ ನಿರ್ದೇಶಕ ಬಹುತೇಕ ಸಿನಿಮಾವನ್ನು ಅಲ್ಲಿಯೇ ಸುತ್ತಮುತ್ತ ಚಿತ್ರೀಕರಿಸಿದ್ದಾರೆ. ಚಿತ್ರದ ಮೊದಲಾರ್ಧ ಅಷ್ಟೇನೂ ವಿಶೇಷತೆ ಇಲ್ಲ ಬದಲಾಗಿ ದ್ವಿತೀಯಾರ್ಧದಲ್ಲಿ ನಿಜ ಹಾರರ್ ಅನುಭವ ಆಗಲಿದೆ. ಹಾಗಾಗಿ ಮೊದಲ ಬಾಗ ತುಸು ಎಳೆದಂತೆ ಎನಿಸುತ್ತದೆ. ದ್ವಿತೀಯಾರ್ಧದಲ್ಲಿ ಟ್ವಿಸ್ಟ್ & ಟರ್ನ್ ಇದೆ. ಸಿನಿಮಾದಲ್ಲಿ ಬರುವ ಫ್ಲ್ಯಾಶ್‌ಬ್ಯಾಕ್ ಕಥೆ ಚೆನ್ನಾಗಿದೆ. ಮೊದಲಾರ್ಧವು ಅವಿವಾಹಿತರ ಜೀವನದ ಸುತ್ತ ಸುತ್ತುತ್ತದೆ. ಆದಾಗ್ಯೂ, ಹಾರರ್ ಅಂಶಗಳು ಮುಖ್ಯವಾಗುತ್ತಾ ಸಾಗಿದಂತೆ ಕಥೆಯು ತನ್ನ ಹಿಡಿತವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ, ಅನೇಕ ಉಪ-ಕಥೆಗಳೊಂದಿಗೆ ಎಳೆತದಂತೆ ಭಾಸವಾಗುತ್ತದೆ.
ಬೆಳ್ಳಿ ಪರದೆಯ ಮೇಲೆ ಪಾದಾರ್ಪಣೆ ಮಾಡುತ್ತಿರುವ ವಿಕಾಸ್ ಈ ಹಾರರ್ ಥ್ರಿಲ್ಲರ್ ಹಿಂದಿನ ಪ್ರೇರಕ ಶಕ್ತಿಯಾಗಿದ್ದು, ತನ್ನ ಇಬ್ಬರು ಸಹನಟರೊಂದಿಗೆ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ನಟಿ ಹರಿಣಿ ಶ್ರೀಕಾಂತ್ ನಟನೆ ಚೆನ್ನಾಗಿದೆ. ನಾಯಕಿ ರಾಧಾ ಭಗವತಿ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ. ರುದ್ರನಾಗಿ ದೇವ್, ಕಲಾವತಿಯಾಗಿ ನವ್ಯಾ ಮೆಚ್ಚುಗೆ ಗಳಿಸುತ್ತಾರೆ. ನಟ ಅಶ್ವಿನ್ ಹಾಸನ್ ಗಮನ ಸೆಳೆಯುತ್ತಾರೆ.
ಸಾಮಾನ್ಯ ಹಾರರ್ ಸಿನಿಮಾ ಇಷ್ಟ ಪಡುವವರು ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ಒಮ್ಮೆ ವೀಕ್ಷಿಸಲು ಯಾವ ಅಪಾಯವೂ ಇರುವುದಿಲ್ಲ. ಹಾರರ್ ಅನುಭವ ಜೊತೆಗೆ ಚಿತ್ರ ಸಾಕಷ್ಟು ಮನರಂಜನೆ ನೀಡಬಲ್ಲದು.