- ರಾಘವೇಂದ್ರ ಅಡಿಗ ಎಚ್ಚೆನ್.
ಅಪ್ಪು ಅಂದರೆ ಅದೊಂದು ಕೇವಲ ಹೆಸರಾಗಿ ಉಳಿದಿಲ್ಲ, ಅದೆಷ್ಟೋ ಜೀವಗಳಿಗೆ ಸ್ಫೂರ್ತಿಯ ಚಿಲುಮೆ. ಸದಾ ಹಸನುಖಿಯಾಗಿ, ಎಲ್ಲರಿಗೂ ಸ್ಫೂರ್ತಿಯಾಗಿದ್ದವರು. ಅವರ ಹುಟ್ಟುಹಬ್ಬ ಅಂದರೆ ಅಭಿಮಾನಿಗಳಿಗೆ ಹಬ್ಬವೇ ಸರಿ. ರಾಜ್ಯದ ಮೂಲೆ ಮೂಲೆಯಿಂದ ಅವರನ್ನ ನೋಡಲು ಜನ ಬರುತ್ತಾರೆ. ಕೈಯಲ್ಲೊಂದು ಗುಲಾಬಿ ಹಿಡಿದು, ಸಾರಕದ ಮೇಲೆ ನಗುತ್ತಾ ಎಲ್ಲರನ್ನು ನೋಡುತ್ತಿರುವ ಅಪ್ಪು ಭಾವಚಿತ್ರಕ್ಕೆ ಹೂ ಅರ್ಪಿಸಿ, ನಮನ ಸಲ್ಲಿಸಿ, ನೀವ್ ಇರಬೇಕಿತ್ತು ದೇವ್ರು ಎನ್ನುತ್ತಾ ದುಃಖವನ್ನು ಮನಸ್ಸೊಳಗೆ ತುಂಬಿಕೊಂಡು ಮುಂದೆ ಸಾಗುತ್ತಾರೆ.
ಪುನೀತ್ ರಾಜ್ಕುಮಾರ್ ಅವರ ಜನ್ಮದಿನವಾದ ಇಂದು (ಮಾರ್ಚ್ ೧೭). ಬದುಕಿದ್ದಿದ್ದರೆ ಅವರಿಗೆ 51 ವರ್ಷ ಆಗಿರುತ್ತಿತ್ತು. ಬೆಳಿಗಿನಿಂದಲೇ ಸಾವಿರಾರು ಮಂದಿ ಪುನೀತ್ ಅವರ ಸಮಾಧಿಗೆ ಭೇಟಿ ನೀಡಿದ್ದರು. ಕಂಠೀರವ ಸ್ಟುಡಿಯೊದಲ್ಲಿರುವ ದಿ.ಪುನೀತ್ ರಾಜ್ಕುಮಾರ್ ಅವರ ಸಮಾಧಿಯನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಕುಟುಂಬಸ್ಥರು ಭೇಟಿ ನೀಡಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಕುಟುಂಬಸ್ಥರು ಹಲವು ಗೆಳೆಯರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸತತವಾಗಿ ಭೇಟಿ ನೀಡಿದ್ದಲ್ಲದೆ . ನಟ ಶಿವರಾಜ್ ಕುಮಾರ್ ಅವರೂ ಸಹ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕೊತೆಗೆ ಡಿಕೆಡಿಯ ಪ್ರೀತಂ ಸಹ ಇದ್ದರು. ಆದರೆ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಕೆಲ ವೈಯುಕ್ತಿಕ ಕಾರಣಗಳಿಂದಾಗಿ ಸಮಾಧಿ ಬಳಿ ಬರಲು ಸಾಧ್ಯವಾಗಲಿಲ್ಲ. ಅವರ ಅನುಪಸ್ಥಿತಿಯಲ್ಲಿ ರಾಜ್ ಕುಟುಂಬ ಪೂಜೆ ನಡೆಸಿದೆ.
ಇನ್ನು ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಪವರ್ ಸ್ಟಾರ್ ದಿ.ಪುನೀತ್ ರಾಜಕುಮಾರ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಎರಡು ಕ್ವಿಂಟಲ್ ದೋಸೆ ವಿತರಣೆ ಮಾಡುವ ಮೂಲಕ ಗಮನ ಸೆಳೆದರು. ನಗರದ ಜೈ ರಾಜವಂಶ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ವದ್ದಿ ಅವರ ನೇತೃತ್ವದಲ್ಲಿ ಮೂರು ಸಾವಿರ ಮಠದ ಮುಂಭಾಗದಲ್ಲಿರುವ ಅಪ್ಪು ಬೆಣ್ಣೆ ದೋಸೆ ಹೋಟೆಲ್ನಲ್ಲಿ ಸಾವಿರಾರು ಜನರಿಗೆ ಇಂದು ಎರಡು ಕ್ವಿಂಟಲ್ ದೋಸೆ ವಿತರಣೆ ಮಾಡಲಾಯಿತು.
ಅಪ್ಪು ಇಲ್ಲ ಅಂದ್ರೂ ಅಭಿಮಾನಿಗಳು ಜಾಸ್ತಿ ಆಗ್ತಿದ್ದಾರೆ
ತಮ್ಮನ ಸಮಾಧಿಗೆ ಪೂಜೆ ನೆರವೇರಿಸಿದ ನಟ ರಾಘವೇಂದ್ರ ರಾಜ್ಕುಮಾರ್, ಆಕಾಶ್ ರೀ-ರಿಲೀಸ್ ಆಗಿ ಹೌಸ್ ಫುಲ್ ಶೋ ಪ್ರದರ್ಶನ ಕಂಡಿದೆ. ಅಪ್ಪು ಇಲ್ಲದೇ ತುಂಬಾ ಕಷ್ಟ ಆಗುತ್ತಿದೆ. ಆದ್ರೆ ಅಪ್ಪು ಮಾಡಿರುವ ಸಮಾಜ ಸೇವೆಯನ್ನು ಅಭಿಮಾನಿಗಳೂ ಕೂಡಾ ಪಾಲಿಸುತ್ತಿದ್ದಾರೆ. ಅಪ್ಪು ಇಲ್ಲ ಅಂದ್ರೂ ಅಭಿಮಾನಿಗಳು ಜಾಸ್ತಿ ಆಗ್ತಿದ್ದಾರೆ ಎಂದು ತಿಳಿಸಿದ ನಟ ನನಗೆ ಸಿಕ್ಕ ಗೌರವ ಡಾಕ್ಟರೇಟ್ ಅಭಿಮಾನಿ ದೇವರುಗಳಿಗೆ ಸೇರುತ್ತದೆ ಎಂದು ತಿಳಿಸಿದರು
ಚಿಕ್ಕಪ್ಪನ 51ನೇ ವರ್ಷದ ಹುಟ್ಟಹಬ್ಬ. ಪ್ರತೀ ವರ್ಷದಂತೆ ಈ ವರ್ಷವೂ ಹಬ್ಬ ಮಾಡುತ್ತಿದ್ದೇವೆ. ಆದ್ರೆ ಈ ದಿನ ಬಂದಾಗ ತುಂಬಾ ನೋವಾಗುತ್ತದೆ. ಅವರು ಇಲ್ಲೇ ಇರ್ತಾರೆ. ಅವರು ಕೊಟ್ಟ ಉಡುಗೊರೆಗಳು ಈಗಲೂ ಇವೆ. ಪ್ರತೀ ಬಾರಿ ನಮಗೆ ಗಿಫ್ಟ್ಸ್ ಕೊಡುತ್ತಿದ್ದರು. ಅವರು ಸದಾ ನಮ್ಮೊಂದಿಗೆ ಇರ್ತಾರೆ ಎಂದು ಯುವ ರಾಜ್ಕುಮಾರ್ ಹಾಗೂ ವಿನಯ್ ರಾಜ್ಕುಮಾರ್ ಹೇಳಿದ್ದಾರೆ.
ಶಿವಣ್ನ ಭಾವುಕ ಪೋಸ್ಟ್
ಅಪ್ಪು ಜನ್ಮದಿನಕ್ಕೆ ಕರುನಾಡ ಚಕ್ರವರ್ತಿ ಡಾ. ಶಿವ ರಾಜ್ಕುಮಾರ್ ಬಾವುಕ ಪೀಸ್ಟ್ ಮಾಡಿದ್ದಾರೆ. ''ಆಕಾಶದಾಚೆ ಎಲ್ಲೋ ದೇವರಿಲ್ಲವೋ ಇದು ಆಗ ಕೇಳಿದಾಗ ಎಷ್ಟು ನಿಜ ಅನ್ಸಿತ್ತು... ಈಗಲೂ ಹಾಗೇ ಇದೆ. ನಿನ್ನನ್ನು ಆಕಾಶದಾಚೆ ಹುಡುಕುವ ಅವಶ್ಯಕತೆ ಇಲ್ಲವೇ ಇಲ್ಲ. ಇಡೀ ಕರ್ನಾಟಕದಲ್ಲಿ ಎಲ್ಲೇ ಹೋದರೂ ಜನ ನಿನ್ನನ್ನು ಪ್ರತಿ ದಿನ ಸಂಭ್ರಮಿಸುತ್ತಾರೆ. ನಿನ್ನ ಹುಟ್ಟುಹಬ್ಬ ನಮ್ಮೆಲ್ಲರಿಗೂ ಹಬ್ಬ. ನಿನ್ನ ಹೆಸರು ಹೇಳಿದೊಡನೆ ಮೂಡುವ ನಗು, ನೀನು ಎಲ್ಲರಿಗೂ ಕೊಟ್ಟಿರುವ ಉಡುಗೊರೆ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು, ನಿನ್ನ ಶಿವಣ್ಣ'' ಎಂದು ಅವರು ಬರೆದುಕೊಂಡಿದ್ದಾರೆ.





