ಜಾಗೀರ್ದಾರ್*
ನಾವು ರೋಗಿಗಳನ್ನು ಎಚ್ಚರಿಕೆಯಿಂದ ಉಪಚರಿಸುವ ಬದಲು ಸುಟ್ಟರೆ, ಮಾನವ ಕುಲ ಅಸ್ತಿತ್ವದಲ್ಲಿರುತ್ತದೆಯೇ? ಒಬ್ಬನು ಅಪರಾಧ ಮಾಡಿದರೆ, ನಾವು ಸಂಪೂರ್ಣ ಮಾನವಕುಲವನ್ನೇ ದಂಡಿಸುತ್ತೇವೆಯೇ? ಇಲ್ಲ. ನಾವು ನ್ಯಾಯವನ್ನು ಹುಡುಕುತ್ತೇವೆ, ವಿನಾಶವನ್ನಲ್ಲ. ಹಾಗಾದರೆ, ನಾವೇಕೆ ಮೂಕ ಜೀವಿಗಳನ್ನು ಕೆಲವರ ಕೃತ್ಯಗಳಿಂದ ಜಡ್ಜ್ ಮಾಡುತ್ತಿದ್ದೇವೆ?
ಒಂದೇ ಒಂದು ಗಾಯದಿಂದ ಇಡೀ ಇಂದು ಪ್ರಾಣಿ ಕುಲವನ್ನೇ ತಕ್ಕಡಿಗೆ ಹಾಕಿ ತೂಗಬೇಡಿ. ತೀರ್ಪು ನೀಡಬೇಡಿ. ಶತಮಾನಗಳಿಂದ ನಾಯಿಗಳು ನಮ್ಮೊಂದಿಗಿವೆ. ಅವು ಬೇಡದ ಜೀವಗಳಲ್ಲ ನಮ್ಮ ಬೀದಿಗಳಿಗೂ, ಮನೆಗಳಿಗೂ ನಂಟು ಹೊಂದಿದ ಪ್ರಾಣಿಗಳು.
ಅವು ಕಾವಲುಗಾರರು, ಅವು ಆಪ್ತರು, ಅವು ಅಂಧರಿಗೆ ಕಣ್ಣುಗಳು. ಅವು ತಮ್ಮ ಪ್ರಾಣವನ್ನೇ ಕೊಡುತ್ತವೆ, ಮನೆಯಿಗಷ್ಟೇ ಅಲ್ಲ, ರಾಷ್ಟ್ರಕ್ಕೂ. ಅವು ಪೊಲೀಸರ ಗೆಳೆಯರು, ಬಾಂಬ್ ಪತ್ತೆ ದಳದ ಸಹಚರರು. ಅವು ಅನೇಕರಿಗೆ ಶುದ್ಧ ಸಂತೋಷ, ದೇವರಿಂದ ಕಳುಹಿಸಲಾದ ದಿವ್ಯದೂತರು. ಹೀಗಿರುವಾಗ ಪ್ರಸ್ತುತ ಚರ್ಚೆಯಾಗುತ್ತಿರುವ ವಿಚಾರ ನ್ಯಾಯವಲ್ಲ.. ಇದೊಂದು ಹತ್ಯಾಕಾಂಡದ ಮುನ್ಸೂಚನೆ.
ಹೌದು, ಬೀದಿ ನಾಯಿಗಳು ಸಹ ಕಷ್ಟ ಅನುಭವಿಸುತ್ತವೆ. ರೇಬೀಸ್‌ನಿಂದ ರಕ್ತಸ್ರಾವಗೊಳ್ಳುತ್ತವೆ, ಕಲ್ಲುಗಳಿಂದ ಹೊಡೆತ ತಿನ್ನುತ್ತವೆ, ವೇಗದ ವಾಹನಗಳ ಚಕ್ರಕ್ಕೂ ಸಿಲುಕಿ ನಲುಗುತ್ತವೆ. ಸಮಸ್ಯೆ ಬಂದಾಗ, ಅವುಗಳ ನಾಶವೊಂದೇ ಪರಿಹಾರವಲ್ಲ. ಸಾಮೂಹಿಕ ಲಸಿಕೆ, ನಿಷ್ಕ್ರಿಯೀಕರಣ, ಚೂರು ಕರುಣೆ, ಸಮುದಾಯದ ನಿರಂತರ ಕಾಳಜಿ ಮತ್ತು ದತ್ತು ಪ್ರಕ್ರಿಯೆ ಇದೆಲ್ಲದಕ್ಕೂ ಪರಿಹಾರ.
ನಾವು ಸಹಜೀವನ ಆಯ್ಕೆ ಮಾಡೋಣ. ಪ್ರಾಣಿಗಳನ್ನು ಭೂಮಿಯ ಸಹಪೌರರಂತೆ ಕಾಣೋಣ. ಅವು ಸಹ ಕಾಳಜಿ, ರಕ್ಷಣೆಗೆ ಅರ್ಹ ಎನಿಸಿಕೊಂಡಿವೆ. ನಾನು ಗೌರವದಿಂದ ಕೇಳುತ್ತೇನೆ: ಸುಪ್ರೀಂ ಕೋರ್ಟ್ ಬಳಿ ನಾನು ಕೇಳಿಕೊಳ್ಳುವುದೇನೆಂದರೆ ದಯವಿಟ್ಟು ತೀರ್ಪನ್ನು ಬದಲಿಸಿ. ಕರುಣೆ ಕಾನೂನಿಗೆ ಮಾರ್ಗದರ್ಶಿಯಾಗಲಿ.





