ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (KSDL) 2025-26ನೇ ಹಣಕಾಸು ವರ್ಷದಲ್ಲಿ ಇದೇ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು ನಡೆಸಿದ್ದು, 507 ಕೋಟಿ ರೂ. ಲಾಭ ಗಳಿಸಿದೆ.
ಇದು ಸಂಸ್ಥೆಯ ಪಾಲಿಗೆ ಚಾರಿತ್ರಿಕ ಮೈಲುಗಲ್ಲಾಗಿದ್ದು, ಸಾರ್ವಜನಿಕ ಉದ್ದಿಮೆಗಳ ಸಾಧನೆಯಲ್ಲಿ ಕಿರೀಟಪ್ರಾಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಸಂಸ್ಥೆಯ ಈ ಅಪೂರ್ವ ಸಾಧನೆಯ ಹಿನ್ನೆಲೆಯಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ ಮೈಸೂರು ಸ್ಯಾಂಡೆಲ್ ನ ಸಾಧನೆಯ ಶಿಖರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಸ್ಥೆಯು ಮೊದಲ ಒಂದು ಸಾವಿರ ಕೋಟಿ ರೂ.ಗಳ ವಹಿವಾಟನ್ನು ತಲುಪಲು 105 ವರ್ಷ ತೆಗೆದುಕೊಂಡಿತ್ತು. ಆದರೆ, ಅಲ್ಲಿಂದ 2 ಸಾವಿರ ಕೋಟಿ ರೂ. ಮಟ್ಟವನ್ನು ಕೇವಲ ನಾಲ್ಕು ವರ್ಷಗಳಲ್ಲಿ ತಲುಪಿದೆ. 2022-23 ರಲ್ಲಿ 1,375 ಕೋಟಿ ರೂ. ವಹಿವಾಟು ನಡೆಸಿದ್ದ ಸಂಸ್ಥೆಯು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷಗಳಲ್ಲಿ 2,016 ಕೋಟಿ ರೂ. ತಲುಪಿದೆ. ಇಷ್ಟು ಅಲ್ಪಾವಧಿಯಲ್ಲಿ ಕೆ.ಎಸ್.ಡಿ.ಎಲ್ ವಹಿವಾಟು 641 ಕೋಟಿ ರೂ.ಗಳನ್ನು ಹೆಚ್ಚಳ ಕಂಡಿದೆ ಎಂದರು
ಮೊದಲು ಸಂಸ್ಥೆಯು ಕೇವಲ 34 ಉತ್ಪನ್ನಗಳನ್ನು ಹೊಂದಿತ್ತು. ಮೂರು ವರ್ಷಗಳಲ್ಲಿ ನಾವು 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈಗ ಒಟ್ಟು 94 ಉತ್ಪನ್ನಗಳಿವೆ. ಯಾವುದೇ ಹೊಸ ನೇಮಕಾತಿ ಇಲ್ಲದೆ, ಯಂತ್ರೋಪಕರಣಗಳ ಖರೀದಿ ಇಲ್ಲದೆ ಇದನ್ನೆಲ್ಲ ಸಾಧಿಸಲಾಗಿದೆ. ಬಂದಿರುವ 507 ಕೋಟಿ ರೂ. ಲಾಭದಲ್ಲಿ ಸರಕಾರಕ್ಕೆ 157 ಕೋಟಿ ರೂ. ಲಾಭಾಂಶ (ಡಿವಿಡೆಂಡ್) ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ ಹಸ್ತಾಂತರಿಸಲಾಗುವುದು. ಹೋದ ವರ್ಷ 135 ಕೋಟಿ ರೂ. ಕೊಡಲಾಗಿತ್ತು. ಇದರಲ್ಲಿ ಈಗ 22 ಕೋಟಿ ರೂ. ಹೆಚ್ಚಳವಾಗಿದೆ ಎಂದು ಅವರು ವಿವರಿಸಿದರು.
ಒಟ್ಟಾರೆಯಾಗಿ ಸಂಸ್ಥೆಯ ವಹಿವಾಟನ್ನು 2028ರ ಹೊತ್ತಿಗೆ 3 ಸಾವಿರ ಕೋಟಿ ರೂ. ಮತ್ತು 2030ರ ಹೊತ್ತಿಗೆ 5 ಸಾವಿರ ಕೋಟಿ ರೂ.ಗಳಿಗೆ ಕೊಂಡೊಯ್ಯುವ ಗುರಿ ಇದೆ. ಇದಕ್ಕೆ ಪೂರಕವಾಗಿ ವಿಜಯಪುರದಲ್ಲಿ 50 ಎಕರೆಯಲ್ಲಿ ನೂತನ ಉತ್ಪಾದನಾ ಘಟಕ ಆರಂಭವಾಗಲಿದ್ದು, ಇದಕ್ಕೆ 229 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಂಸ್ಥೆಯ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಗಂಧದ ಎಣ್ಣೆಯೇ ಮೂಲವಸ್ತುವಾಗಿದೆ. ಇದರ ಸುಗಮ ಪೂರೈಕೆಗೆ ಸಂಸ್ಥೆಯು ರೈತರೊಂದಿಗೆ ಕೈಜೋಡಿಸಿದ `ಗ್ರೋ ಮೋರ್ ಸ್ಯಾಂಡಲ್’ ಕಾರ್ಯಕ್ರಮ ರೂಪಿಸಿದೆ. ಇದರಡಿಯಲ್ಲಿ 10 ವರ್ಷಗಳಲ್ಲಿ 10 ಸಾವಿರ ಎಕರೆ ಗಂಧದ ನೆಡುತೋಪು ಬೆಳೆಸಲಾಗುವುದು. ಇದಕ್ಕಾಗಿ ರೈತರಿಗೆ ಪ್ರತೀ ಗಂಧದ ಗಿಡಕ್ಕೆ 3 ವರ್ಷಗಳಿಗೆ 500 ರೂ. ಪ್ರೋತ್ಸಾಹಧನ ನೀಡಲಾಗುವುದು. ಜತೆಗೆ ಬೆಂಗಳೂರಿನ ಜಿಕೆವಿಕೆ ಮತ್ತು ವಿಜಯಪುರದ ಕೃಷಿ ವಿದ್ಯಾಲಯಗಳ ಸಹಯೋಗದಲ್ಲಿ ಶ್ರೀಗಂಧದ ಅಧ್ಯಯನ ಪೀಠ ತೆರೆಯಲಾಗುವುದು ಎಂದು ಪಾಟೀಲ ತಿಳಿಸಿದ್ದಾರೆ.





