ಅಮೇರಿಕಾದ ಮಾಜಿ ಅಧ್ಯಕ್ಷರಾಗಿದ್ದಂತಹ ಜಾನ್ ಎಫ್ ಕೆನಡಿಯವರು Success has many fathers, but failure is an orphan ಎಂಬ ಮಾತುಗಳನ್ನು ಆಡಿದ್ದರು. ಅಂದರೆ ಯಾರೇ ಯಾವುದೇ ಕೆಲದಲ್ಲಿ ಯಶಸ್ಸಿ ಆಗುತ್ತಿದ್ದಂತೆಯೇ ಅದರ ಶ್ರೇಯವನ್ನು ಪಡೆಯಲು ನಾನು ನಾನು ಎಂದು ನೂರಾರು ಜನರು ಮುಂದೆ ಬರುತ್ತಾರೆ. ಆದರೆ ಯಾರೇ ಯಾವುದೇ ಕಾರ್ಯದಲ್ಲಿ ವೈಫಲ್ಯ ಕಾಣುತ್ತಿದ್ದಂತೆಯೇ ಜತೆಗಿದ್ದವರೂ ಪರಾರಿಯಾಗಿ ಅನಾಥ ಪ್ರಜ್ಞೆಯನ್ನು ಮೂಡಿಸುತ್ತಾರೆ ಎನ್ನುವ ಸುಂದರವಾದ ಮಾತಿದು. ಯಾಕಪ್ಪಾ ಇಷ್ಟೆಲಾ ಪೀಠಿಕೆ ಎಂದರೆ, ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆಯವರು ತಮ್ಮ ಕ್ಷೇತ್ರದ ಭಾಗವಾಗಿರುವ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಎಸ್ ಎಸ್ ಎಲ್ ಸಿ ಫಲಿತಾಂಶ ಈ ಬಾರಿ 94% ಪಡೆಯುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ, ಆ ಶಾಲೆಗೆ ಹೋಗಿ ಅಲ್ಲಿನ ಮುಖ್ಯೋಪಾಧ್ಯಾಯಿನಿ ಆಗಿರುವ ಶ್ರೀಮತಿ ಜಯಂತಿ ಟೀಚರ್ ಅವರ ಕಾಲು ಮುಟ್ಟಿ ನಮಸ್ಕರಿಸುವ ಮೂಲಕ ನಮ್ಮ ಸನಾತನ ಧರ್ಮದ ಆಚಾರ್ಯ ದೇವೋಭವ ಉಕ್ತಿಗೆ ಮೇಲ್ಪಂಕ್ತಿ ಹಾಕಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಮಗೆಲ್ಲಗಿಗೂ ತಿಳಿದಿರುವಂತೆ ಇಂದಿನ ಉಡುಪಿ ಜಿಲ್ಲೆಯು ಈ ಹಿಂದೆ ಅವಿಭಜಿತ ದಕ್ಷಿಣ ಕನ್ನಡದ ಭಾಗವಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಕಾಲವೂ ಮುಂದಿದ್ದು, ನಂತರ ದಕ್ಷಿಣ ಕನ್ನಡದಿಂದ ಉಡುಪಿ ಜಿಲ್ಲೆಯಾಗಿ ವಿಭಜಿತಗೊಂಡರೂ ಇಡೀ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಲವಾರು ವರ್ಷಗಳಿಂದ ಎರಡನೇ ಸ್ಥಾನವನ್ನು ಸುಭಧ್ರವಾಗಿಸಿಕೊಂಡಿದ್ದು, ಅದೇ ಉಡುಪಿ ಜೆಲ್ಲೆಯ ಭಾಗವಾದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ವರ್ಷ 2025ರಲ್ಲಿ ಕೇವಲ 35% ಫಲಿತಾಂಶ ಪಡೆದು ಕ್ಷೇತ್ರದ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿತ್ತು.
ತಮ್ಮ ಕ್ಷೇತ್ರದ ಈ ಶಾಲೆಯು ಶೈಕ್ಷಣಿಕವಾಗಿ ಹಿಂದುಳಿದಿರುವ ವಿಚಾರವನ್ನು ತಿಳಿದ ಬೈಂದೂರು ಕ್ಷೇತ್ರದ ಶಾಸಕರು ಮತ್ತು ಬರಿಗಾಲು ಸಂತ ಎಂದೇ ಪ್ರಸಿದ್ಧರಾಗಿರುವ ಗುರುರಾಜ್ ಗಂಟಿಹೊಳೆಯವರು ಅದನ್ನು ಗಂಭೀರವಾಗಿ ಪರಿಗಣಿಸಿ, ಅಲ್ಲಿನ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಶಾಲಾ ಸಿಬ್ಬಂಧಿಗಳೊಂದಿಗೆ ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಅತ್ಯುತ್ತಮ ಫಲಿತಾಂಶ ಪಡೆಯ ಬೇಕೆಂಬ ಆಸೆಯನ್ನು ವ್ಯಕ್ತ ಪಡಿಸಿ ಅದಕ್ಕೆ ತಮ್ಮ ಕಡೆಯಿಂದ ಯಾವ ರೀತಿಯ ಸಹಾಯ ಬೇಕಿದ್ದರೂ ತಿಳಿಸಬೇಕೆಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಟೀಚರ್ ಮತ್ತು ಅವರ ಶಿಕ್ಷಕ ತಂಡದವರಿಗೆ ಮನವಿ ಮಾಡಿಕೊಂಡಿದ್ದರು. ಶಾಸಕರ ಈ ಮನವಿಯನ್ನೇ ಸವಾಲಾಗಿ ಸ್ವೀಕರಿಸಿದ್ದ ಶಾಲೆಯ ಜಯಂತಿ ಟೀಚರ್ ಮತ್ತವರ ಶಿಕ್ಷಕವೃಂದ ಬಹಳ ಶ್ರಮವಹಿಸಿ, ಓದಿನಲ್ಲಿ ಸ್ವಲ್ಪ ಹಿಂದಿದ್ದ ಮಕ್ಕಳಿಗೆ ಹೆಚ್ಚಿನ ಅವಧಿಯಲ್ಲಿ ಪಾಠ ಮಾಡಿ 2026ರ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಾಗ, ಕೇವಲ ಆ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರಷ್ಟೇ ಅಲ್ಲದೇ ಇಡೀ ಊರಿಗೆ ಊರೇ ಹೆಮ್ಮೆ ಪಡುವಂತಹ 94% ಫಲಿತಾಂಶ ಪಡೆಯುವ ಮೂಲಕ ಬಹುತೇಕ ಹಿಂದಿನ ವರ್ಷಕ್ಕಿಂತ ಮೂರು ಪಾಲು ಹೆಚ್ಚಿನ ಸಾಧನೆಗೈದಿತ್ತು.
ತಮ್ಮ ಕ್ಷೇತ್ರದ ಶಿರೂರು ಸರ್ಕಾರಿ ಶಾಲೆಯು ತಮ್ಮ ಮನವಿಯನ್ನು ಸವಾಲಾಗಿ ಸ್ವೀಕರಿಸಿ ಈ ಪರಿಯ ಫಲಿತಾಂಶವನ್ನು ಪಡೆದು ತಮಗೆ ಹೆಮ್ಮೆಯನ್ನು ತಂದಂತಹ ವಿಷಯ ತಿಳಿಯುತ್ತಿದ್ದಂತೆಯೇ, ಈ ಸಾಧನೆ ತನ್ನದು ತನ್ನಿಂದಲೇ ಆದದ್ದು ಎಂಬ ಹಮ್ಮು ಬಿಮ್ಮು ತೋರದೇ, ಕೂಡಲೇ ಆ ಶಾಲೆಗೆ ಧಾವಿಸಿ ಬಂದ ಶಾಸಕರು, ಅತ್ಯುತ್ತಮ ಸಾಧನೆಗೈಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ ಜಯಂತಿ ಟೀಚರ್ ಮತ್ತವರ ಶಿಕ್ಷಕವೃಂದಕ್ಕೆ ಎಲ್ಲರ ಮುಂದೆಯೇ ಪಾದಕ್ಕೆರಗಿ ನಮಸ್ಕಾರ ಮಾಡುವ ಮೂಲಕ ಅಭಿನಂದನೆಗಳನ್ನು ತಿಳಿಸುವ ಮೂಲಕ ಗುರುಗಳ ಅಭಿನಂದನೆ ಮಾಡುವ ಹೊಸಾ ಸಂಪ್ರದಾಯವನ್ನು ಹುಟ್ಟು ಹಾಕಿರುವುದು ನಿಜಕ್ಕೂ ಅನನ್ಯ ಮತ್ತು ಅಭಿನಂದನಾರ್ಹವಾಗಿದೆ.





