ನಮ್ಮ ಸನಾತನ ಧರ್ಮದ ಪ್ರಕಾರ ಹೆಣ್ಣು ಮತ್ತು ಗಂಡುಗಳು ಎಂಬ ಬೇಧವಿಲ್ಲದೇ, ಸಾಂಪ್ರದಾಯಿಕವಾಗಿ, ನಮ್ಮ ಮುಖದ ಮೇಲಿರುವ ಎರಡು ಹುಬ್ಬುಗಳ ನಡುವೆ ಕುಂಕುಮ, ತಿಲಕ ಇಲ್ಲವೇ ಗಂಧವನ್ನು ಇಟ್ಟುಕೊಳ್ಳುವುದು ರೂಢಿಯಲ್ಲಿದೆ. ಈ ಹುಬ್ಬುಗಳ ಮಧ್ಯೆ ಇರುವ ಸ್ಥಳವನ್ನು ಆರನೇ ಚಕ್ರ, ಆಜ್ಞಾ ಚಕ್ರ ಎಂದು ಹೇಳಲಾಗುತ್ತದೆ. ಈ ಕೇಂದ್ರದಲ್ಲಿ ಕುಂಕುಮ ಇಲ್ಲವೇ ತಿಲಕವನ್ನು ಇಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಈಗಾಗಲೇ ವೈಜ್ಞಾನಿಕವಾಗಿಯೂ ಧೃಢಪಟ್ಟಿದೆ. ಇನ್ನು ಹೆಣ್ಣು ಮಕ್ಕಳು ಹಣೆಯಲ್ಲಿ ಧರಿಸುವ ಕುಂಕುಮವು ಅವರ ಸುಮಂಗಲೀತನವನ್ನು ತೋರಿಸುತ್ತದೆ ಅಲ್ಲದೇ ಇತರರು ಬೀರುವ ವಕ್ರದೃಷ್ಟಿಯನ್ನೂ ನಿರಾಕರಿಸುವ ದೃಷ್ಟಿ ಬಟ್ಟಿನಂತೆಯೂ ಕಾರ್ಯನಿರ್ವಹಿಸುತ್ತದೆ. ಇನ್ನೂ ವೈಜ್ಞಾನಿಕವಾಗಿ

ನೋಡಿದರೆ, ಹಣ್ಣೆಯಲ್ಲಿರುವ ದೃಷ್ಟಿ ಕುಂಕುಮವು ನಮ್ಮ ಸಂಪೂರ್ಣ ಮುಖವನ್ನು ಪೂರೈಸುವ ಟ್ರೈಜಿಮಿನಲ್ ನರದ ಒಂದು ನಿರ್ದಿಷ್ಟ ಶಾಖೆಯನ್ನು ಹೊಂದಿದ್ದು, ಅದು ಮೂಗು ಮತ್ತು ಅದರ ಸುತ್ತಲಿನ ಪ್ರದೇಶಗಳನ್ನು ಪ್ರಚೋದಿಸಲ್ಪಡುತ್ತವೆ. ಹಾಗಾಗಿ ಹಣೆಯ ಮೇಲೆ ಕುಂಕುಮವನ್ನು ಇಡುವುದರಿಂದ ಮೂಗು ಮತ್ತು ಸೈನಸ್‌ಗಳ ಲೋಳೆಪೊರೆಯ ಒಳಪದರಕ್ಕೆ ರಕ್ತದ ಹರಿವನ್ನು ಉತ್ತೇಜಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇನ್ನು ಹಿಂದಿನ ಕಾಲದಲ್ಲಿ ದೂರದೂರದಿಂದ ಮನೆಗೆ ಬರುವ ಅತಿಥಿಗಳ ಹಣೆಯ ಮೇಲಿರುವ ವಿಭೂತಿ, ಕುಂಕುಮ, ಗಂಧ ಇಲ್ಲವೇ ಅಂಗಾರಕಗಳನ್ನು ನೋಡಿ ಅವುಗಳ ತಕ್ಕಂತೆ ಅವರಿಗೆ ಸೂಕ್ತವಾದ ಆಹಾರಗಳನ್ನು ನೀಡಲಾಗುತ್ತಿತ್ತು. ಮಟ ಮಟ ಮಧ್ಯಾಹ್ನ ಮನೆಗೆ ಬಂದ ಅತಿಥಿಗಳ ಹಣೆಯ ಮೇಲೆ ಇನ್ನೂ ವಿಭೂತಿ ಇದ್ದಲ್ಲಿ, ಅವರಿನ್ನೂ ಊಟ ಮಾಡಿಲ್ಲ ಎಂದು ತಿಳಿದು ಅವರು ಕೈಕಾಲು ತೊಳೆದ ನಂತರ ಊಟವನ್ನು ಬಡಿಸಲಾಗುತ್ತಿತ್ತು. ಅದೇ ರೀತಿ ಅವರ ಹಣೆಯ ಮೇಲೆ ಗಂಧ ಇಲ್ಲವೇ ಅಂಗಾರಕ ಇದ್ದಲ್ಲಿ ಅವರ ಊಟ ಆಗಿದೆ ಎಂದು ತಿಳಿದು ಕುಡಿಯಲು ತಂಪಾದ ಪಾನೀಯದ ಜೊತೆ ಲಘು ಉಪಹಾರವನ್ನು ನೀಡಲಾಗುತ್ತಿತ್ತು. ಹೀಗೆ ಹಣೆಯ ಮೇಲಿಡುವ ಕುಂಕುಮ ವಿವಿಧ ರೀತಿಯ ಅರ್ಥಗಳನ್ನು ನೀಡುತ್ತದೆ.
ಈ ರೀತಿಯಾದ ಸಂಪ್ರದಾಯ ದೇಶದ ಮೇಲೆ ಧಾಳಿ ಮಾಡಿದ ಮುಸಲ್ಮಾನರಲ್ಲೂ ಮತ್ತು ಕ್ರೈಸ್ತರಲ್ಲೂ ಇರದ ಕಾರಣ, ನಮ್ಮ ಇಂದಿನ ಪೀಳಿಗೆಯ ಯುವಕ ಯುವತಿಯರಿಗೆ ಹಣೆಯ ಮೇಲಿಡುವ ಕುಂಕುಮದ ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಅಂಧ ಪಾಶ್ಚಾತ್ಯೀಕರಣದ ಪರಿಣಾಮ ಇತ್ತೀಚೆಗೆ ಬೋಳು ಹಣೆಯಲ್ಲಿ ತಿರಗಾಡುವುದೇ ಒಂದು ರೀತಿ ಫ್ಯಾಷನ್ ಆಗಿಹೋಗಿರುವುದು ನಿಜಕ್ಕೂ ವಿಷಾಧಕರವಾಗಿದೆ. ಇದಕ್ಕೆ ಇಂಬು ಕೊಡುವಂತೆ ದೇಶದಲ್ಲಿರುವ ಬಹುತೇಕ ಶಿಕ್ಷಣ ಸಂಸ್ಥೆಗಳು ಪರೋಕ್ಷವಾಗಿ ಕ್ರೈಸ್ತರ/ಕಮ್ಯೂನಿಷ್ಟರ ಕಪಿಮುಷ್ಟಿಯಲ್ಲಿರುವ ಕಾರಣ, ಅಲ್ಲಿ ಓದುವ ಹಿಂದೂ ಮಕ್ಕಳಿಗೆ ಖಡ್ಡಾಯವಾಗಿ ಹಣೆಯಲ್ಲಿ ಕುಂಕುಮ, ತಲೆಗೆ ಹೂವು ಮತ್ತು ಕೈಗಳಿಗೆ ಬಳೆಯನ್ನು ಹಾಕಿಕೊಂಡು ಬರುವುದುನ್ನು ನಿಷೇಧ ಮಾಡಿರುವುದು ದುರಾದೃಷ್ಟಕರವಾಗಿದೆ.
ಈ ರೀತಿಯ ಪದ್ದತಿಗಳು ಸುಮಾರು ವರ್ಷಗಳಿಂದಲೂ ಕ್ರಿಶ್ಚಿಯನ್ ಶಾಲೆಗಳಲ್ಲಿ ರೂಢಿಯಲ್ಲಿದ್ದು, ಅಕಸ್ಮಾತ್ ಹಬ್ಬ ಹರಿದಿನಗಳು ಮತ್ತು ಹುಟ್ಟುಹಬ್ಬದಂತಹ ವಿಶೇಷ ಸಂಧರ್ಭದಲ್ಲಿ ಈ ರೀತಿಯಾಗಿ ಹಿಂದೂ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಶಾಲೆಗೆ ಹೋದಲ್ಲಿ ದಂಡ ಕಟ್ಟಿಸಿಕೊಳ್ಳುವ ಪದ್ದತಿ ಇತ್ತು ಕ್ಲೂನೀ ಕಾನ್ವೆಂಟ್ ನಲ್ಲಿ ಓದಿದ್ದ ನಮ್ಮ ಅಮ್ಮನೂ ಮತ್ತು ಮದುವೆಯಾದ ನಂತರ ನನ್ನ ಮಡದಿಯೂ ಹೀಗೆ ಹೇಳಿದ್ದರು. ಅದೃಷ್ಟ ಎಂದರೆ, ನಮ್ಮ ಅಜ್ಜ (ಅಮ್ಮನ ತಂದೆ) ಮತ್ತು ನಮ್ಮ ಮಾವ (ಮಡದಿಯ ತಂದೆ) ಇಬ್ಬರು ಶಾಲೆಗೆ ಹೋಗಿ ಪ್ರಾಂಶುಪಾಲರ ಬಳಿ ಇದರ ವಿರುದ್ಧ ಹೋರಾಟ ಮಾಡಿದ್ದ ಕಾರಣ, ಕೆಜಿಎಫ್ ಮತ್ತು ಬೆಂಗಳುರಿನ ಕ್ಲೂನೀ ಕಾನ್ವೆಂಟ್ ನಲ್ಲಿ ನನ್ನ ಅಮ್ಮ ಮತ್ತು ಮಡದಿಗೆ ವಿಶೇಷವಾಗಿ ಹಣೆಯಲ್ಲಿ ಕುಂಕುಮ, ಕೈಗೆ ಬಳೆ ಮತ್ತು ತಲೆಗೆ ಹೂವನ್ನು ಮುಡಿದು ಕೊಳ್ಳುವ ಸೌಲಭ್ಯವನ್ನು ನೀಡಲಾಗಿತ್ತು.





