Sj*
ಬಸರಾಳು: ಸ್ಥಳೀಯ ಸರ್ಕಾರಿ ಶಾಲಾ ಮೈದಾನದಲ್ಲಿ ‘ದಕ್ಷಿಣ ಪಥೇಶ್ವರ ಬಳಗ’ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಬಸರಾಳು ಕನ್ನಡ ಉತ್ಸವ’ ಸಂಭ್ರಮ ಹಾಗೂ ಜನಮೆಚ್ಚುಗೆಯೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಸ್ಯಾಂಡಲ್ವುಡ್ನ ತಾರೆಯರ ಸಮಾಗಮ, ಹಾಸ್ಯ ಕಲಾವಿದರ ನಗೆಯ ಹಬ್ಬ ಮತ್ತು ಬಡ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಒದಗಿಸಿದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಹಾಗೂ ಜನಪ್ರಿಯ ನಿರೂಪಕಿ ಅನುಶ್ರೀ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವೇದಿಕೆಗೆ ವಿಶೇಷ ಕಳೆ ತಂದರು. ಅನುಶ್ರೀ ಅವರು ತಮ್ಮ ತಂಡದಲ್ಲಿ ಕಾರ್ಯನಿರ್ವಹಿಸುವ ಯುವಕನ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಯಾವುದೇ ಸಂಭಾವನೆ ಪಡೆಯದೆ ಕಾರ್ಯಕ್ರಮಕ್ಕೆ ಆಗಮಿಸಿ ಸರಳತೆ ಮೆರೆದರು.

ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯಕ್ಕೆ ವೇದಿಕೆ ಸಾಕ್ಷಿಯಾಯಿತು. ‘ಸಾವಿತ್ರಮ್ಮ ರವಿಕುಮಾರ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸುಮಾರು 2,500 ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಮೌಲ್ಯದ ಅಪಘಾತ ವಿಮೆಯನ್ನು ನೀಡಲಾಯಿತು. ಈ ಮಹತ್ವದ ಜನೋಪಕಾರಿ ಯೋಜನೆಗೆ ನಿರೂಪಕಿ ಅನುಶ್ರೀ ಅವರ ಸಮ್ಮುಖದಲ್ಲೇ ಅಧಿಕೃತವಾಗಿ ಚಾಲನೆ ನೀಡಿ ಫಲಾನುಭವಿಗಳಿಗೆ ವಿಮೆ ಸೌಲಭ್ಯವನ್ನು ವಿತರಿಸಲಾಯಿತು.
ಉತ್ಸವಕ್ಕೆ ಸ್ಯಾಂಡಲ್ವುಡ್ನ ನವ ಚಿತ್ರತಂಡಗಳು ಸಾಥ್ ನೀಡಿದವು. ‘ಪಬ್ಬಾರ್’ ಚಿತ್ರತಂಡದ ಪರವಾಗಿ ಡಾ. ರಾಜ್ಕುಮಾರ್ ಅವರ ಮೊಮ್ಮಗ ಧೀರನ್ ರಾಮ್ಕುಮಾರ್ ಹಾಗೂ ನೆನಪಿರಲಿ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಆಗಮಿಸಿ ಪ್ರೇಕ್ಷಕರನ್ನು ರಂಜಿಸಿದರು. ಇದರ ಜೊತೆಗೆ ‘ನೀ ನಂಗೇ ಅಲ್ಲವಾ’ ಚಿತ್ರತಂಡದಿಂದ ನಟ ರಾಹುಲ್ ಹಾಗೂ ನಟಿ ಕಾಶಿಮಾ ವೇದಿಕೆ ಹಂಚಿಕೊಂಡು ಸಂಭ್ರಮ ಹೆಚ್ಚಿಸಿದರು.
ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಘವೇಂದ್ರ (ರಾಗಿಣಿ) ಹಾಗೂ ಚಿಲ್ಲರ್ ಮಂಜು ತಮ್ಮ ವಿಶಿಷ್ಟ ಹಾಸ್ಯ ಕಾರ್ಯಕ್ರಮದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಸಾಂಸ್ಕೃತಿಕ ವೈಭವ ಮತ್ತು ಜನಪರ ಕಾಳಜಿಯೊಂದಿಗೆ ನಡೆದ ಈ ಉತ್ಸವವು ಸ್ಥಳೀಯರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಈ ಕಾರ್ಯಕ್ರಮವನ್ನು ಮಂಡ್ಯ ಗಿರೀಶ್, ಪ್ರಶಾಂತ್ ಮತ್ತು ಮನು ಆಯೋಜಿಸಿದ್ದು, ಇವರಿಗೆ ಮಂಡ್ಯ ಶಾಸಕ ರವಿಕುಮಾರ್ ಗೌಡ ಅವರು ಪ್ರೋತ್ಸಾಹಕರಾಗಿದ್ದಾರೆ.





