- ರಾಘವೇಂದ್ರ ಅಡಿಗ ಎಚ್ಚೆನ್.
ಬ್ರಹ್ಮಗಂಟು ಧಾರಾವಾಹಿಯಲ್ಲಿ ಗುಂಡಮ್ಮ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಗೀತಾ ಭಾರತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಹೊಸ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಯ ವಿಷಯ ಇದೀಗ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಸಹ ಕಲಾವಿದರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
2017ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭವಾದ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ಗೀತಾ ಭಾರತಿ ಭಟ್ ಗುಂಡಮ್ಮ ಪಾತ್ರದಲ್ಲಿ ಅಭಿನಯಿಸಿ ಮನೆಮಾತಾಗಿದ್ದರು. ಈ ಧಾರಾವಾಹಿ 2021ರವರೆಗೆ ಪ್ರಸಾರಗೊಂಡು ಉತ್ತಮ ಜನಪ್ರಿಯತೆ ಪಡೆದುಕೊಂಡಿತ್ತು. ನಂತರ 2021ರಲ್ಲಿ ಪ್ರಸಾರವಾದ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಆದರೆ ಮೂರನೇ ವಾರದಲ್ಲೇ ಸ್ಪರ್ಧೆಯಿಂದ ಹೊರಬಿದ್ದರು
ಧಾರಾವಾಹಿ ಬಳಿಕ ಚಿತ್ರರಂಗದಲ್ಲೂ ಅವರು ಕಾಣಿಸಿಕೊಂಡಿದ್ದು, ‘Love Mocktail’ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದು, ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿತ್ತು.

ಇದೀಗ ಗೀತಾ ಭಾರತಿ ಭಟ್ ಅವರು ಸೈಲೆಂಟ್ ಆಗಿ ವಿವಾಹವಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಅವರು ಮದುವೆಯಾದವರು ಯಾರು, ಇದು ಪ್ರೇಮ ವಿವಾಹವೋ ಅಥವಾ ಅರೆಂಜ್ಡ್ ವಿವಾಹವೋ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಗೀತಾ ಭಾರತಿ ಭಟ್ ಅವರು ದೇಹದ ವಿಚಾರವಾಗಿ ಹಲವು ಬಾರಿ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದು, ಈ ರೀತಿಯ ಟೀಕೆಗಳನ್ನು ಅವರು ಸಾರ್ವಜನಿಕವಾಗಿ ಖಂಡಿಸಿದ್ದಾರೆ. ದೇಹದ ಆಧಾರದ ಮೇಲೆ ಅವಮಾನಿಸುವುದು ತಪ್ಪು ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.





