- ರಾಘವೇಂದ್ರ ಅಡಿಗ ಎಚ್ಚೆನ್.
ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಮತ್ತು ನಟ ಭಾರತಿರಾಜ (86) ಇನ್ನಿಲ್ಲ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಮತ್ತು ನಟ ಭಾರತಿರಾಜ (86) ಇನ್ನಿಲ್ಲ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ (ಜೂನ್ 10) ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಭಾರತಿರಾಜ ಅವರ ನಿಧನದಿಂದ ಅವರ ಕುಟುಂಬ ಸದಸ್ಯರು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
1977ರಲ್ಲಿ ಬಿಡುಗಡೆಯಾದ '16 ವಯದಿನಿಲೆ' (ತೆಲುಗಿನಲ್ಲಿ ಪದಹಾರೇಳ್ಳ ವಯಸು) ಚಿತ್ರದ ಮೂಲಕ ಭಾರತಿರಾಜ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ತಮ್ಮ ವಿಭಿನ್ನ ಮೇಕಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತಮಿಳಿನಲ್ಲಿ 'ಕಿಳಕ್ಕೆ ಪೋಗುಮ್ ರೈಲು', 'ಸಿಗೆಪ್ಪು ರೋಜಕ್ಕಳ್', 'ಅಲೈಗಳ್ ಓಯಿವದಿಲ್ಲೈ', 'ಕಾದಲ್ ಓವಿಯಂ', 'ಮುದಲ್ ಮರಿಯಾದೈ' ನಂತಹ ಹಲವು ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ತೆಲುಗಿನಲ್ಲೂ 'ಸೀತಾಕೋಕ ಚಿಲುಕ', 'ಆರಾಧನ', 'ಜಮದಗ್ನಿ', 'ಈತರಂ ಇಲ್ಲಾಲು', 'ಎರ್ರ ಗುಲಾಬೀಲು', 'ಟಿಕ್ ಟಿಕ್ ಟಿಕ್' ಮುಂತಾದ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಕೇವಲ ನಿರ್ದೇಶನಕ್ಕೆ ಸೀಮಿತವಾಗದ ಭಾರತಿರಾಜ, ನಟನಾಗಿಯೂ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಮಣಿರತ್ನಂ ಅವರ 'ಯುವ', 'ಸೀತಾ ಕತ್ತಿ', 'ಈಶ್ವರನ್', 'ಸರ್', 'ತಿರು' ಮತ್ತು ಇತ್ತೀಚಿನ 'ಮಹಾರಾಜ' ಚಿತ್ರಗಳಲ್ಲಿ ಅವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. 2020ರಲ್ಲಿ ಬಿಡುಗಡೆಯಾದ 'ಮೀಂಡುಮ್ ಒರು ಮರಿಯಾದೈ' ಅವರು ನಿರ್ದೇಶಿಸಿದ ಕೊನೆಯ ಚಿತ್ರ. ಮೋಹನ್ ಲಾಲ್ ನಟನೆಯ 'ತುಡುರಮ್' ಅವರು ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡ ಕೊನೆಯ ಚಿತ್ರವಾಗಿದೆ.
ಕಳೆದ ವರ್ಷ ಅವರ ಏಕೈಕ ಪುತ್ರ ಮನೋಜ್ ಭಾರತಿರಾಜ ಅವರ ಅಕಾಲಿಕ ನಿಧನವು ಭಾರತಿರಾಜ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ನಟ ಮತ್ತು ನಿರ್ದೇಶಕನಾಗಿ ಬೆಳೆಯುತ್ತಿದ್ದ ಮಗನನ್ನು ಕಳೆದುಕೊಂಡ ನೋವಿನಿಂದ ಹೊರಬರಲು ಅವರಿಗೆ ಬಹಳ ಸಮಯ ಬೇಕಾಯಿತು. ಇದಕ್ಕಾಗಿ ಅವರು ಕೆಲಕಾಲ ವಿದೇಶದಲ್ಲಿ ಕುಟುಂಬದವರೊಂದಿಗೆ ಕಾಲ ಕಳೆದಿದ್ದರು. ಭಾರತಿರಾಜ ಅವರ ನಿಧನಕ್ಕೆ ದಕ್ಷಿಣ ಭಾರತದ ಖ್ಯಾತ ನಟರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಭಾರತೀಯ ಚಿತ್ರರಂಗದ ಒಂದು ಸುವರ್ಣ ಯುಗ ಇಂದು ಅಂತ್ಯಗೊಂಡಂತಾಗಿದೆ.





