- ರಾಘವೇಂದ್ರ ಅಡಿಗ ಎಚ್ಚೆನ್
: ‘ಬಿಗ್ ಬಾಸ್ ಕನ್ನಡ’ ಅಭಿಮಾನಿಗಳಿಗೆ ಕಲರ್ಸ್ ಕನ್ನಡ ವಾಹಿನಿ ಭರ್ಜರಿ ಸರ್ಪ್ರೈಸ್ ನೀಡಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಕುರಿತು ವಾಹಿನಿ ಅಧಿಕೃತ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದೆ.
‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ… With Something Special’ ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಳ್ಳಲಾದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಲ್ಕು ತಿಂಗಳ ಹಿಂದಷ್ಟೇ ಮುಕ್ತಾಯಗೊಂಡಿದ್ದ 12ನೇ ಸೀಸನ್ ಬಳಿಕ ಹೊಸ ಸೀಸನ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ವಾಹಿನಿಯ ಘೋಷಣೆ ವೀಕ್ಷಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿರುವ ‘ಬಿಗ್ ಬಾಸ್ ಕನ್ನಡ’ ಇದುವರೆಗೆ 12 ಯಶಸ್ವಿ ಸೀಸನ್‌ಗಳನ್ನು ಪೂರ್ಣಗೊಳಿಸಿದೆ. ಎಲ್ಲಾ ಸೀಸನ್‌ಗಳನ್ನೂ ಕಿಚ್ಚ ಸುದೀಪ್ ಯಶಸ್ವಿಯಾಗಿ ನಿರೂಪಣೆ ಮಾಡಿದ್ದು, ಕಾರ್ಯಕ್ರಮಕ್ಕೆ ಅಪಾರ ಅಭಿಮಾನಿ ಬಳಗ ನಿರ್ಮಾಣವಾಗಿದೆ.
ಹೊಸ ಸೀಸನ್ ಘೋಷಣೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದು, ಸ್ಪರ್ಧಿಗಳ ಪಟ್ಟಿಯ ಬಗ್ಗೆ ಕುತೂಹಲ ವ್ಯಕ್ತವಾಗಿದೆ. ಈ ಬಾರಿ ಯಾವ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.
ಪ್ರತಿ ಸೀಸನ್‌ನಲ್ಲಿ ಹೊಸ ಆಟಗಳು, ಹೊಸ ನಿಯಮಗಳು ಹಾಗೂ ಹೊಸ ಕಾನ್ಸೆಪ್ಟ್‌ಗಳ ಮೂಲಕ ಗಮನ ಸೆಳೆಯುವ ಬಿಗ್ ಬಾಸ್, ಈ ಬಾರಿಯೂ ಕೆಲವು ವಿಶೇಷ ಅಚ್ಚರಿಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.





