Sj*
ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‌ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಅಭೂತಪೂರ್ವ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ ವಿಶೇಷ ಹೆಲ್ತ್ ಕಾರ್ಡ್ ಬಿಡುಗಡೆಯಾಗಿದ್ದರೆ, ಇನ್ನೊಂದೆಡೆ ಶಿವಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾಗಳ ಟೀಸರ್, ಪೋಸ್ಟರ್ ಹಾಗೂ ಪ್ರೋಮೋಗಳು ರಿಲೀಸ್ ಆಗಿ ಧೂಳೆಬ್ಬಿಸುತ್ತಿವೆ.
- ವಿ.ಎಸ್.ಎಚ್. ಆಸ್ಪತ್ರೆಯಿಂದ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಲೋಕಾರ್ಪಣೆ
ಬೆಂಗಳೂರಿನ ಹೃದಯಭಾಗದಲ್ಲಿರುವ ಪ್ರತಿಷ್ಠಿತ ವಿ.ಎಸ್.ಎಚ್. (VSH) ಆಸ್ಪತ್ರೆಯು (ಹಿಂದಿನ ಮಲ್ಯಾ ಆಸ್ಪತ್ರೆ) ಡಾ. ಶಿವರಾಜ್‌ಕುಮಾರ್ ಅವರ ಜನ್ಮದಿನದ ಸಂಭ್ರಮಕ್ಕೆ ಅತ್ಯಂತ ಅರ್ಥಪೂರ್ಣ ಕೊಡುಗೆ ನೀಡಿದೆ. ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪ ಹಾಗೂ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ದಶಕಗಳ ಆತ್ಮೀಯ ಬಾಂಧವ್ಯ ಹೊಂದಿರುವ ಈ ಆಸ್ಪತ್ರೆಯು, ಶಿವಣ್ಣನ ಹುಟ್ಟುಹಬ್ಬದ ಗೌರವಾರ್ಥವಾಗಿ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಅನ್ನು ಬಿಡುಗಡೆ ಮಾಡಿದೆ.
ಉಚಿತವಾಗಿ ನಟಿಸಿದ ಶಿವಣ್ಣ:
ಆಸ್ಪತ್ರೆಯ ‘Minutes Matter’ (ನಿಮಿಷಗಳು ಅಮೂಲ್ಯ) ಎಂಬ ಧೈಯದ ಜಾಹೀರಾತಿನಲ್ಲಿ ಆಂಬುಲೆನ್ಸ್ ಚಾಲಕ, ವೈದ್ಯ, ಮನೋವೈದ್ಯ ಸೇರಿದಂತೆ 10 ವಿಭಿನ್ನ ಪಾತ್ರಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಜಾಗತಿಕ ಮಟ್ಟದ ಹೃದಯ ತಜ್ಞರಾದ ಡಾ. ವಿ.ಕೆ. ಶ್ರೀನಿವಾಸ್ ಅವರು ಈ ಹಿಂದೆ ಶಿವಣ್ಣ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದರು. ಶಿವಣ್ಣ ಈ ಜಾಹೀರಾತಿನಲ್ಲಿ ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ನಟಿಸಿದ್ದು, ಆ ಹಣವನ್ನು ಅಭಿಮಾನಿಗಳ ಆರೋಗ್ಯ ಸೇವೆಗೆ ಬಳಸುವಂತೆ ಮಾಡಿದ್ದಾರೆ. ಎಲ್ಲ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ವಿ.ಎಸ್.ಎಚ್. ನಿರ್ದೇಶಕಿ ಡಾ. ಕಲ್ಪಜಾ ಅವರ ಕನಸಿಗೆ ಗೀತಾ ಶಿವರಾಜ್‌ಕುಮಾರ್ ಅವರ ಪ್ರೋತ್ಸಾಹವೂ ಬೆಂಬಲವಾಗಿ ನಿಂತಿದೆ.
ಕಾರ್ಡ್‌ನಿಂದ ಸಿಗುವ ಪ್ರಮುಖ ಸೌಲಭ್ಯಗಳು (ಸುಮಾರು 2,500 ಕುಟುಂಬಗಳಿಗೆ ಅನುಕೂಲ):
ಒಂದು ಬಾರಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ತುರ್ತು ಆಂಬುಲೆನ್ಸ್ ಸೇವೆ.
ಹೃದಯ ರೋಗ, ಕ್ಯಾನ್ಸರ್, ಡಯಾಲಿಸಿಸ್, ಹೊರರೋಗಿ/ಒಳರೋಗಿ ಸೇವೆಗಳು, ಲ್ಯಾಬ್ ಹಾಗೂ ರೇಡಿಯಾಲಜಿ ಪರೀಕ್ಷೆಗಳಿಗೆ ಆಸ್ಪತ್ರೆ ಶುಲ್ಕದಲ್ಲಿ 25% ರಿಯಾಯಿತಿ.
14 ವರ್ಷದೊಳಗಿನ ಮಕ್ಕಳ ಚಿಕಿತ್ಸೆಗೂ 25% ರಿಯಾಯಿತಿ ದೊರೆಯಲಿದೆ (ಔಷಧಿಗಳು ಮತ್ತು ಇಂಪ್ಲಾಂಟ್‌ಗಳಿಗೆ ಇದು ಅನ್ವಯಿಸುವುದಿಲ್ಲ).
ಶಿವಣ್ಣನ ನಿವಾಸದ ಸಮೀಪ ಜುಲೈ 12ರಂದು ಸಾರ್ವಜನಿಕರಿಗೆ ಈ ಕಾರ್ಡ್‌ಗಳನ್ನು ವಿತರಿಸಲಾಗಿದೆ.

- ‘ಸರ್ವೈವರ್’ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ
ಶಿವರಾಜ್‌ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ ಅನಾರೋಗ್ಯದ ಕಠಿಣ ಹೋರಾಟದ ಕಥೆಯನ್ನು ಒಳಗೊಂಡಿರುವ ‘ಸರ್ವೈವರ್’ (Survivor) ಸಾಕ್ಷ್ಯಚಿತ್ರದ ಅಧಿಕೃತ ಟೀಸರ್ ಅನ್ನು ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಗೀತಾ ಶಿವರಾಜ್‌ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಾಣವಾಗಿದ್ದು, ಶಿವಣ್ಣ ಚಿಕಿತ್ಸೆ ಪಡೆಯುವಾಗಿನ ಆಸ್ಪತ್ರೆಯೊಳಗಿನ ನೈಜ ದೃಶ್ಯಗಳನ್ನು ಇದು ಒಳಗೊಂಡಿದೆ. ಈ ಟೀಸರ್‌ನಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರಾದ ಕಮಲ್ ಹಾಸನ್, ನಾಗಾರ್ಜುನ, ಕಿಚ್ಚ ಸುದೀಪ್, ಸಾಯಿ ಕುಮಾರ್, ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಶಿವಣ್ಣನ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.





