- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: X&Y
ನಿರ್ಮಾಣ: ಸತ್ಯ ಪಿಕ್ಚರ್ಸ್
ನಿರ್ದೇಶನ: ಡಿ ಸತ್ಯಪ್ರಕಾಶ್
ತಾರಾಂಗಣ: ಬೃಂದಾ ಆಚಾರ್ಯ, ಡಿ.ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ , ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್, ತೇನಪ್ಪನ್ ಮುಂತಾದವರು
ರೇಟಿಂಗ್:4/5
ಈ ಹಿಂದೆ ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಮತ್ತು ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳನ್ನು ನಿರ್ದೇಶಿಸಿರುವ ಡಿ ಸತ್ಯಪ್ರಕಾಶ್ ಅವರೀಗ ಮತ್ತೊಂದು ಹೊಸ ಬಗೆಯ ಚಿತ್ರದೊಡನೆ ಬಂದಿದ್ದಾರೆ. " X&Y " ಎನ್ನುವ ಚಿತ್ರವಿದಾಗಿದ್ದು ಈ ಚಿತ್ರ ಈ ವಾರ ಜೂನ್ 26(ಗುರುವಾರ) ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ.
"X&Y"ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು, ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಹಾಗೂ ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿದೆ. ಸತ್ಯ ಪಿಕ್ಚರ್ಸ್ ನಿರ್ಮಾಣದ ಚಿತ್ರದ ತಾರಾಬಳಗದಲ್ಲಿ ಬೃಂದಾ ಆಚಾರ್ಯ, ಡಿ.ಸತ್ಯಪ್ರಕಾಶ್, ಅಯಾನ, ಅಥರ್ವ ಪ್ರಕಾಶ್, ದೊಡ್ಡಣ್ಣ , ವೀಣಾ ಸುಂದರ್, ಸುಂದರ್ ವೀಣಾ, ಹರಿಣಿ, ಧರ್ಮಣ್ಣ ಕಡೂರ್, ತೇನಪ್ಪನ್ ಮುಂತಾದವರಿದ್ದಾರೆ. ಹಾಗಾದರೆ ಚಿತ್ರ ಹೇಗಿದೆ ನೋಡೋಣ ಬನ್ನಿ-
ಸ್ವರ್ಗದಲ್ಲಿರುವ ಒಂದು ಆತ್ಮ ತಾನು ಭೂಮಿಗೆ ಬರಬೇಕು, ಅಲ್ಲಿನ ಬದುಕು ಜೀವಿಸಬೇಕು ಎನ್ನುವ ಕಾರಣಕ್ಕೆ ದೇವಿಯಲ್ಲಿ ರಚ್ಚೆ ಹಿಡಿದು ನಾಲ್ಕು ದಿನಗಳ ಮಟ್ಟಿಗೆ ಭೂಮಿಗೆ ಬಂದು ತನ್ನ ಅಮ್ಮನನ್ನು ಹುಡುಕುವುದರಲ್ಲಿದ್ದಾಗ ಅದಕ್ಕಾಗುವ ಈ ಭೂಮಿಯ ಜನರ ಬದುಕಿನ ಸತ್ಯ ದರ್ಶನವೇ " X&Y "ಚಿತ್ರದ ಕಥೆ. ಒಂದು ಗಂಡು-ಹೆಣ್ಣು ಸೇರಿದಾಗ ಹೆಣ್ಣಿನ ಭ್ರೂಣದಲ್ಲಿ ಶಿಶುವು ಜನ್ಮತಾಳುತ್ತದೆ. ಹಾಗೆ ಜನ್ಮತಾಳುವ ವೇಳೆ ಲಿಂಗ ನಿರ್ಧಾರವಾಗುವುದು XY ಮತ್ತು XX ಎನ್ನುವ ಅಣುಗಳ ಆಧಾರದಲ್ಲಿ ಎನ್ನುವುದು ವೈಜ್ಣಾನಿಕ ಸತ್ಯ. ಅದನ್ನು ಮೂಲವಾಗಿರಿಸಿಕೊಂಡು ನಿರ್ದೇಶಕರು ಸಮಾಜದಲ್ಲಿ ಮಾನವನ ಜಾತಿ ವ್ಯವಸ್ಥೆ, ಬಡತನ ಸಿರಿತನದಲ್ಲಿನ ಅಸಮಾನತೆ ಸೇರಿ ಅನಾಥಾಶ್ರ್ಮ, ವೃದ್ದಾಶ್ರಮಗಳ ವಯವಸ್ಥೆ ಅದರಿಂದುಟಾಗಿರುವ ಮಾನವ ಜೀವನದ ದುರ್ಬರ ಸ್ಥಿತಿಯನ್ನು ಇಲ್ಲಿ ಹೇಳಲು ಹೊರಟಿದ್ದಾರೆ. ಮಾನವರೆಲ್ಲಾ ಯಾಗೆ ಹೂವಿನ ರೀತಿಯಲ್ಲಿ ನಗು ನಗುತ್ತಾ ಬಾಳಲು ಸಾಧ್ಯವಿಲ್ಲ? ಎನ್ನುವ ಮೂಲಭೂತ ಪ್ರಶ್ನೆಯೊಂದರ ಜೊತೆಗೆ ಈ ಚಿತ್ರ ಪ್ರೇಕ್ಷಕರಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಇಂದಿನ ಕಾಲಘಟ್ಟಕ್ಕೆ ಹೆಚ್ಚು ಪ್ರಸ್ತುತ ಎನ್ನಿಸುವ ಕಥಾವಸ್ತು ಇದು. ಜೀವನದ ಮೌಲ್ಯಗಳ ಅರಿವು ಮೂಡಿಸುವುದು ಇಲ್ಲಿನ ಕಥೆಯ ಮೂಲ ಉದ್ದೇಶ.
"ಶ್ರೀಮಂತರೆಲ್ಲಾ ದೇಶ ಬಿಟ್ಟು ವಿದೇಶಕ್ಕೆ ಹೋಗುತ್ತಾರೆ, ಬಡವರು ಇಲ್ಲಿಯೇ ಜೀವನ ಕಟ್ಟಿಕೊಳ್ಳಬೇಕು" ಎನ್ನುವ ಮಾರ್ಮಿಕ ಸತ್ಯವನ್ನೂ ಸಹ ಇಲ್ಲಿ ಹೇಳಲಾಗಿದೆ.ಹೀಗೆಂದ ಮಾತ್ರಕ್ಕೆ ಇಡೀ ಚಿತ್ರದಲ್ಲಿ ಬೋಧನೆಯೇ ಪ್ರಧಾನವಾಗಿದೆ ಎನ್ನುವಂತಿಲ್ಲ. ಮೊದಲ ಅರ್ಧ ಹಾಸ್ಯಮಯವಾಗಿ ಕಥೆ ಸಾಗುತ್ತದೆ. ಹಾಗೆಯೇ ಪ್ರೇಕ್ಷಕರಿಗೂ ಎಲ್ಲಿಯೂ ಬೇಸರ ತರದಂತಿದೆ. ದ್ವಿತೀಯಾರ್ಧದಲ್ಲಿ ಕೆಲವು ಸಂದೇಶ ಪ್ರಧಾನ ದೃಶ್ಯಗಳಿದ್ದು ಒಂದೆರಡು ಕಡೆ ಸ್ವಲ್ಪ ಎಳೆದಂತೆ ಭಾಸವಾಗುತ್ತದೆ. ಪ್ರಮುಖವಾಗಿ ಕೆಲವು ಹಾಡುಗಳು ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಂತೆ ಕಾಣುತ್ತದೆ.
ಪ್ರಮುಖ ಪಾತ್ರದಲ್ಲಿ ಸತ್ಯ ಪ್ರಕಾಶ್ ಹಾಗೂ ಅಥರ್ವ ಪ್ರಕಾಶ್ ಅವರ ಅಭಿನಯ ಮೆಚ್ಚುವಂತಿದೆ. ಬೃಂದಾ ಆಚಾರ್ಯ ತೆರೆ ಮೇಲೆ ಮುದ್ದಾಗಿ ಕಾಣಿಸಿಕೊಂಡಿದ್ದು ಸಿಕ್ಕ ಅವಕಾಶಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅಯಾನಾ, ವೀಣಾ, ಸುಂದರ್, ಹರಿಣಿ ಶ್ರೀಕಾಂತ್, ಧರ್ಮಣ್ಣ ಕಡೂರ್, ದೊಡ್ಡಣ್ಣ ಎಲ್ಲರೂ ಕಥೆಯ ಓಟಕ್ಕೆ ತಕ್ಕಂತೆ ಕಾಣಿಸಿಕೊಳ್ಳುತ್ತಾರೆ. ಚಿತ್ರದ ಹಿನ್ನೆಲೆ ಸಂಗೀತ ಉತ್ತಮವಾಗಿದ್ದು ಛಾಯಾಗ್ರಹಣ ಸಹ ನೀಟಾಗಿ ಬಂದಿದೆ. ಬೃಂದಾ ಆಚಾರ್ಯ ಅಂತಹಾ ನಾಯಕಿಯಿದ್ದೂ ಚಿತ್ರದಲ್ಲಿ ಒಂದೊಳ್ಳೆಯ ಹಾಡು ಅವರಿಗಾಗಿ ಇಲ್ಲದಿರುವುದು ಮಾತ್ರ ಚಿತ್ರದ ಪ್ರಮುಖ ಕೊರತೆ ಎನ್ನಬಹುದು.
ಒಟ್ಟಾರೆ ಈ ವಾರ ಬಿಡುಗಡೆಯಾಗುತ್ತಿರುವ ಒಂದು ವಿಶೇಷ ಆಯಾಮದ ಕಥೆ ಇರುವ ಚಿತ್ರ " X&Y "ಕನ್ನಡ ಚಿತ್ರಪ್ರೇಮಿಗಳು ಚಿತ್ರಮಂದಿರಗಳಲ್ಲಿ ಕುಟುಂಬ ಸಮೇತ ನೋಡಬಹುದಾದ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.