ಸರಸ್ವತಿ ಜಾಗೀರ್ದಾರ್*
ಕಾಂತಾರ ಚಾಪ್ಟರ್ 1 ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸಾಫೀಸ್ ನಲ್ಲಿಯೂ ಭರ್ಜರಿ ಕಮಾಯಿ ಮಾಡುತ್ತಿರುವ ಈ ಚಿತ್ರ ಹಲವು ದಾಖಲೆಗಳನ್ನು ಅಚ್ಚೊತ್ತುತ್ತಿದೆ. ಪ್ರೇಕ್ಷಕರು, ಸಿನಿಮಾಮೇಕರ್ಸ್ ಗಳಿಂದ ಅದ್ಭುತ ಪ್ರೀತಿ ಪಡೆಯುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಮೂಲಕ ಕೆನಡಾ ಮೂಲದ ಭಾರತೀಯ ಗಾಯಕ ಅಬ್ಬಿ ವಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕಾಂತಾರ 1 ಸಿನಿಮಾದ ಬ್ರಹ್ಮಕಲಶ ಸಿನಿಮಾ ಹಾಡಿಗೆ ಸಂಗೀತ ಪ್ರಿಯರು ತಲೆದೂಗಿದ್ದಾರೆ. ಶಿವನ ಕುರಿತಾದ ಈ ಹಾಡಿಗೆ ಶಶಿರಾಜ್ ಕಾವೂರ್ ಸಾಹಿತ್ಯ ಬರೆದಿದ್ದು, ಕನ್ನಡ ಜತೆಗೆ ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲೂ ಈ ಹಾಡು ರಿಲೀಸ್ ಆಗಿದೆ. ಮಲಯಾಳಂ ಹೊರತುಪಡಿಸಿ ಉಳಿದೆಲ್ಲ ಭಾಷೆಗಳಿಗೆ ಅಬ್ಬಿ ವಿ. ಧ್ವನಿ ನೀಡಿದ್ದಾರೆ.
ಅಬ್ಬಿ ವಿ, ಕೆನಡಾ ಮೂಲದ ಭಾರತೀಯ ಗಾಯಕ, ಗೀತರಚನೆಕಾರ, ಮತ್ತು ಸಂಯೋಜಕ. ಗ್ರ್ಯಾಮಿ ವಿಜೇತ ರಿಕಿ ಕೇಜ್ ಅವ ಸಹಯೋಗದೊಂದಿಗೆ “ಆರಂಭ್” ಎಂಬ ಆಲ್ಬಂ ಬಿಡುಗಡೆ ಮಾಡಿದ್ದಾರೆ. ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದ ಹಾಡೊಂದಕ್ಕೆ ಧ್ವನಿಯಾಗುವ ಮೂಲಕ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾರೆ.
*ಯಾರು ಅಬ್ಬಿ ವಿ*?
ಅಭಿ ವಿ. ಅವರ ನಿಜವಾದ ಹೆಸರು ಅಭಿಷೇಕ್ ವೆಂಕಟ್. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಕುಟುಂಬದಲ್ಲಿ ಜನಿಸಿದ ಅಬ್ಬಿ ಬಾಲ್ಯದಲ್ಲೇ ಸಂಗೀತ ಅಭ್ಯಾಸ ಆರಂಭಿಸಿದ್ದರು. ಅವರ ತಂದೆ ವೆಂಕಟ್ ಕೂಡ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಟೊರೆಂಟೊದಲ್ಲಿ ಹುಟ್ಟಿ ಬೆಳೆದ ಅಭಿ ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ, ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಅಭಿ ಆಗಾಗ ತಮ್ಮ ಹಾಡಿನ ವಿಡಿಯೊ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರು ತಮ್ಮ ತಂದೆಯೊಂದಿಗೆ ಸೇರಿ ಹಾಡಿರುವ ವಿಡಿಯೊ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿವೆ. ವಿವಿಧ ದೇಶಗಳಲ್ಲಿ ಅಭಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
2019ರಲ್ಲಿ ಭಾರತಕ್ಕೆ ಬಂದಿದ್ದ ಅಭಿ ಇಲ್ಲಿನ ಸಂಗೀತ, ರಾಗಗಳಿಗೆ ಮನಸೋತು ಕೆನಡಾಕ್ಕೆ ತೆರಳಿದ ಬಳಿಕ ಹೊಸದೊಂದು ಸಾಹಸಕ್ಕೆ ಕೈ ಹಾಕಿದರು. ಶಾಸ್ತ್ರೀಯ ಸಂಗೀತದ 73 ರಾಗಾಗಳನ್ನು 13 ನಿಮಿಷಗಳಲ್ಲಿ ಪರಿಚಯಿಸಿದರು. ಈ ವಿಡಿಯೊ ಯೂಟ್ಯೂಬ್‌ನಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ.
ಇದೀಗ ಅವರು ʼಕಾಂತಾರ: ಚಾಪ್ಟರ್ 1ʼ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಇಂತಹದ್ದೊಂದು ಅವಕಾಶ ನೀಡಿದ್ದಕ್ಕೆ ಅವರು ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.