– ರಾಘವೇಂದ್ರ ಅಡಿಗ ಎಚ್ಚೆನ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಈಗ ಸಾಕ್ಷಿಗಳ ಹೇಳಿಕೆಗಳ ಹಂತದಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಾದ ನಟ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಘಟನೆ ನಡೆದ ದಿನ ನಟ ದರ್ಶನ್ ಮತ್ತು ಅವರ ತಂಡದೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಇಬ್ಬರ ಸಾಕ್ಷ್ಯವೂ ವಿಚಾರಣೆಯಲ್ಲಿ ಗಮನ ಸೆಳೆದಿದೆ.
ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ನಟ ಚಿಕ್ಕಣ್ಣ ಮಾತನಾಡಲು ತಡಬಡಿಸಿದ ಘಟನೆ ನಡೆದಿದೆ. ಅವರು ಮಾತನಾಡಲು ಕಷ್ಟಪಡುತ್ತಿರುವುದನ್ನು ಗಮನಿಸಿದ ನ್ಯಾಯಾಧೀಶರು, ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿದ್ದರು.
ಇನ್ನು, ನಟ ಯಶಸ್ ಸೂರ್ಯ ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ವೇಳೆ ದರ್ಶನ್ ಅವರೊಂದಿಗಿನ ತಮ್ಮ ದೀರ್ಘಕಾಲದ ಪರಿಚಯದ ಬಗ್ಗೆ ವಿವರಿಸಿದ್ದಾರೆ. 2010ರಲ್ಲಿ ಬಿಡುಗಡೆಯಾದ ‘ಚಿಂಗಾರಿ’ ಸಿನಿಮಾದಿಂದ ಆರಂಭಿಸಿ ‘ಕುರುಕ್ಷೇತ್ರ’, ‘ಚಕ್ರವರ್ತಿ’, ‘ಒಡೆಯ’ ಮತ್ತು ‘ಗರಡಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ದರ್ಶನ್ ಅವರೊಂದಿಗೆ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ.
ಘಟನೆ ನಡೆದ ದಿನ ಸ್ಟೋನಿಬ್ರೂಕ್ ರೆಸ್ಟೋರೆಂಟ್ನಲ್ಲಿ ಊಟ ಮಾಡಿದ್ದಾಗಿ ಯಶಸ್ ಸೂರ್ಯ ನ್ಯಾಯಾಲಯಕ್ಕೆ ಹೇಳಿದ್ದಾರೆ. ಅಲ್ಲಿ ಸಿನಿಮಾ ವಿಚಾರಗಳ ಕುರಿತು ಮಾತ್ರ ಚರ್ಚೆ ನಡೆದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಊಟ ಮುಗಿದ ತಕ್ಷಣವೇ ತಾವು ರೆಸ್ಟೋರೆಂಟ್ನಿಂದ ಹೊರಟುಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ.
ಒಂದೆಡೆ ಚಿಕ್ಕಣ್ಣ ಅವರ ಸಾಕ್ಷ್ಯ ಹೇಳಿಕೆಯ ವೇಳೆ ನಡೆದ ಬೆಳವಣಿಗೆ ಗಮನ ಸೆಳೆದಿದ್ದರೆ, ಮತ್ತೊಂದೆಡೆ ಯಶಸ್ ಸೂರ್ಯ ನೀಡಿದ ಹೇಳಿಕೆ ವಿಚಾರಣೆಯ ಭಾಗವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಮೇಲೆ ಈಗ ಗಮನ ನೆಟ್ಟಿದೆ.





