– ರಾಘವೇಂದ್ರ ಅಡಿಗ ಎಚ್ಚೆನ್.
ಕಿರುತೆರೆ, ಹಿರಿತೆರೆ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಕಲಾವಿದ ವಿಜಯಕುಮಾರ್ ಜಿತೂರಿ ನಿಧನರಾಗಿದ್ದಾರೆ. ಸೋಮವಾರ (ಆಗಸ್ಟ್ 10) ಸಂಜೆ ಗದಗದ ಬೆಟಗೇರಿಯಲ್ಲಿರುವ ಹುಟ್ಟೂರಿನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಂಗಭೂಮಿಯ ಗಣ್ಯರು, ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ವಿಜಯಕುಮಾರ್ ಜಿತೂರಿ ಅವರು ಕೇವಲ ನಟರಾಗಿರಲಿಲ್ಲ. ಉತ್ತಮ ಗಾಯಕನಾಗಿಯೂ ಗುರುತಿಸಿಕೊಂಡಿದ್ದ ಅವರು ಹಲವು ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಸೋಮವಾರ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಬಳಿಕ ಗದಗದ ಬೆಟಗೇರಿಯಲ್ಲಿ ನಿಧನರಾಗಿದ್ದಾರೆ.
ಕಿರುತೆರೆಯಲ್ಲಿ ವಿಜಯಕುಮಾರ್ ಜಿತೂರಿ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಅದರಲ್ಲೂ ಗಗನ್ ಚಿನ್ನಪ್ಪ ಅಭಿನಯದ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಕಾನ್‌ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಅವರೊಂದಿಗೆ ಹಲವು ದೃಶ್ಯಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.
ಬಣ್ಣದ ಲೋಕದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದರೂ ಇತ್ತೀಚಿನ ದಿನಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ದೊರೆಯುತ್ತಿರಲಿಲ್ಲ. ಇದರ ನಡುವೆ ಆರ್ಥಿಕ ಸಂಕಷ್ಟವೂ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ. ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಅವರು ಹುಟ್ಟೂರಾದ ಗದಗಕ್ಕೆ ಮರಳಿದ್ದರು.
ಕಲಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ವಿಜಯಕುಮಾರ್ ಜಿತೂರಿ ಅವರ ನಿಧನದಿಂದ ಕಿರುತೆರೆ ಹಾಗೂ ರಂಗಭೂಮಿ ವಲಯದಲ್ಲಿ ಶೋಕ ಆವರಿಸಿದೆ. ನಟನೆಯ ಜೊತೆಗೆ ಗಾಯನದಲ್ಲೂ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದನ ಅಗಲಿಕೆ ಕಲಾಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ.





