– ರಾಘವೇಂದ್ರ ಅಡಿಗ ಎಚ್ಚೆನ್.
ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಕುಟುಂಬದ ಬೆಂಬಲಕ್ಕೆ ನಿಂತಿದ್ದ ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವೆ ಶುರುವಾಗಿದ್ದ ಮುಸುಕಿನ ಗುದ್ದಾಟ ಈಗ ಬಹಿರಂಗ ಸಮರವಾಗಿ ಬದಲಾಗಿದೆ. ಇಬ್ಬರ ನಡುವಿನ ಮಾತಿನ ಸಮರ ಇದೀಗ ಕೋರ್ಟ್ ಮೆಟ್ಟಿಲೇರಿದೆ. ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮಾನನಷ್ಟ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಜಯಲಕ್ಷ್ಮಿ ಖಾಸಗಿ ದೂರು ಸಲ್ಲಿಸಿದ್ದಾರೆ. ಧನ್ವೀರ್ ತಮ್ಮ ವಿರುದ್ಧ ಮಾನಹಾನಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಆ ಹೇಳಿಕೆಗಳನ್ನು ಮಾಧ್ಯಮಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 356(2) ಅಡಿಯಲ್ಲಿ ಮಾನನಷ್ಟ ಆರೋಪ ಹೊರಿಸಿರುವ ವಿಜಯಲಕ್ಷ್ಮಿ, ಈ ಹೇಳಿಕೆಗಳಿಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ದಾಖಲೆಗಳು ಹಾಗೂ ಆಡಿಯೋ, ವಿಡಿಯೋ ರೆಕಾರ್ಡಿಂಗ್ಗಳನ್ನು ಸಾಕ್ಷ್ಯವಾಗಿ ಸಲ್ಲಿಸಲು ಮುಂದಾಗಿದ್ದಾರೆ.
ಅಷ್ಟೇ ಅಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಗೆ ಅವಕಾಶ ನೀಡಬೇಕು. ಬಿಎನ್ಎಸ್ ಸೆಕ್ಷನ್ 222(1) ಅಡಿಯಲ್ಲಿ ಖಾಸಗಿ ದೂರನ್ನು ಪರಿಗಣಿಸಿ, ಧನ್ವೀರ್ ವಿರುದ್ಧ ಸೆಕ್ಷನ್ 227ರ ಅಡಿಯಲ್ಲಿ ಸಮನ್ಸ್ ಜಾರಿಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇನ್ನು ಇವರಿಬ್ಬರ ನಡುವಿನ ಸಂಘರ್ಷಕ್ಕೆ ಕಾರಣವೇನು ಎಂಬುದನ್ನು ನೋಡುವುದಾದರೆ, ದರ್ಶನ್ ಜೈಲು ಸೇರಿದ ಆರಂಭದಲ್ಲಿ ಧನ್ವೀರ್ ವಿಜಯಲಕ್ಷ್ಮಿ ಬೆಂಬಲಕ್ಕೆ ನಿಂತಿದ್ದರು. ಆದರೆ ಕಾಲಕ್ರಮೇಣ ಇಬ್ಬರ ನಡುವೆ ಅಂತರ ಮೂಡಿದೆ ಎನ್ನಲಾಗಿತ್ತು.
ಇತ್ತೀಚೆಗೆ ಧನ್ವೀರ್ ವಿಜಯಲಕ್ಷ್ಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ದರ್ಶನ್ ಜೈಲಿನಿಂದ ಹೊರಬರುವುದು ವಿಜಯಲಕ್ಷ್ಮಿಗೆ ಇಷ್ಟವಿಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದರು. ಮತ್ತೊಂದೆಡೆ, ಧನ್ವೀರ್ ವಿರುದ್ಧವೇ ಮೋಸದ ಆರೋಪವನ್ನು ವಿಜಯಲಕ್ಷ್ಮಿ ಮಾಡಿದ್ದರು.
ಹೀಗೆ ಆರಂಭವಾದ ಮಾತಿನ ಸಂಘರ್ಷ ಈಗ ಕಾನೂನು ಹೋರಾಟದ ಹಂತ ತಲುಪಿದೆ. ವಿಜಯಲಕ್ಷ್ಮಿ ದಾಖಲಿಸಿರುವ ದೂರಿನ ಮುಂದಿನ ಬೆಳವಣಿಗೆಗಳ ಮೇಲೆ ಇದೀಗ ಎಲ್ಲರ ಗಮನ ನೆಟ್ಟಿದೆ.





