ಬಾಲಿವುಡ್‌ನ 'ಹೀ-ಮ್ಯಾನ್' ಖ್ಯಾತಿಯ ಹಿರಿಯ ನಟ ಧರ್ಮೇಂದ್ರ (89) ಮಂಗಳವಾರ (ನವೆಂಬರ್ 11) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಬಾಲಿವುಡ್ ಆಕ್ಷನ್ ಹೀರೋ.. ಹಿ-ಮ್ಯಾನ್ ಎಂದೇ ಜನಪ್ರಿಯರಾಗಿದ್ದ ಧರ್ಮೇಂದ್ರ ವಾರದ ಹಿಂದಷ್ಟೇ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಬಳಿಕ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರಂಭದಲ್ಲಿ ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮತ್ತಷ್ಟು ಆರೋಗ್ಯ ಕ್ಷಿಣಿಸಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸಿನಿಮೋದ್ಯಮದಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಧರ್ಮೇಂದ್ರ ಅವರು ನಟಿಸಿರುವ 'ಇಕ್ಕೀಸ್' ಚಿತ್ರ ಡಿಸೆಂಬರ್ 25ರಂದು ತೆರೆಕಾಣಲಿದ್ದು, ಅದು ಅವರ ಕೊನೆಯ ಚಿತ್ರ ಎನ್ನಿಸಿಕೊಳ್ಳಲಿದೆ. ಬಾಲಿವುಡ್‌ನ ದಂತಕಥೆ ಧರ್ಮೇಂದ್ರ, ತಮ್ಮ ಸಿನಿಪಯಣದಲ್ಲಿ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರು ಪತ್ನಿ ಹೇಮಾ ಮಾಲಿನಿ ಮತ್ತು ಮಕ್ಕಳಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಇಶಾ ಡಿಯೋಲ್, ಅಹಾನಾ ಡಿಯೋಲ್, ಹಾಗೂ ಅಜೀತಾ ಮತ್ತು ವಿಜೇತಾ ಸೇರಿದಂತೆ ಆರು ಮಕ್ಕಳನ್ನು ಅಗಲಿದ್ದಾರೆ.
ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಧರ್ಮೇಂದ್ರ, 1960 ರಲ್ಲಿ 'ದಿಲ್ ಭಿ ತೇರಾ ಹಮ್ ಭಿ ತೇರೆ' ಚಿತ್ರದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದರು. 2012 ರಲ್ಲಿ ಅವರಿಗೆ 'ಪದ್ಮಭೂಷಣ' ನೀಡಿ ಗೌರವಿಸಲಾಗಿತ್ತು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 'ಯಾದೋಂ ಕೀ ಬಾರಾತ್', 'ಮೇರಾ ಗಾಂವ್ ಮೇರಾ ದೇಶ್', 'ನೌಕರ್ ಬೀವಿ ಕಾ', 'ಫೂಲ್ ಔರ್ ಪತ್ಥರ್', 'ಬೇತಾಬ್' ಮತ್ತು 'ಘಾಯಲ್' ನಂತಹ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಪಂಜಾಬ್‌ನ ಲುಧಿಯಾನ ಜಿಲ್ಲೆಯ ಹಳ್ಳಿಯೊಂದರಲ್ಲಿ ಧರ್ಮೇಂದ್ರ ಕೇವಲ್ ಕೃಷ್ಣ ಡಿಯೋಲ್ ಆಗಿ ಜನಿಸಿದ ಅವರು, ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು 1954 ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು. ನಂತರ, ನಟಿ ಹೇಮಾ ಮಾಲಿನಿ ಅವರನ್ನು ಮದುವೆಯಾದರು.
ಧರ್ಮೇಂದ್ರ ತಮ್ಮ ಇಳಿ ವಯಸ್ಸಿನಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಆರೋಗ್ಯಕರ ಜೀವನ, ಸಾವಯವ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ವೀಡಿಯೊಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದರು. ಟ್ರ್ಯಾಕ್ಟರ್ ಓಡಿಸುವುದು, ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಸರಳ ಜೀವನ ಪಾಠಗಳು, ಕೃಷಿ ಸಲಹೆಗಳನ್ನು ನೀಡುವುದು ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಕಂಡುಬರುತ್ತಿತ್ತು.





