ಯುಗಾದಿ ಹಬ್ಬ ಬಂತೆಂದರೆ ಮಾವಿನಕಾಯಿ ಚಿತ್ರಾನ್ನ, ಬೇಳೆ ಹೋಳಿಗೆ, ಶ್ಯಾವಿಗೆ ಪಾಯಸ, ಹುಗ್ಗಿ, ಕೋಸಂಬರಿ ಇರುವಂತೆ, ಅತಿ ಪ್ರಮುಖವಾದುದೆಂದರೆ ಬೇವು ಬೆಲ್ಲ, ಬೇವು ಬೆಲ್ಲದಲ್ಲಿ ದೇಹದ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಪೌಷ್ಟಿಕಾಂಶಗಳು ಅಧಿಕವಾಗಿವೆ. ಪ್ರಕೃತಿಯಿಂದ ಸಿಗುವ ಮಾವಿನಕಾಯಿ, ಮಾವು, ಬೇವು, ವೀಳ್ಯದೆಲೆ ಇವುಗಳ ಸವಿ ರುಚಿಗಳು ಇಲ್ಲಿವೆ. ಉತ್ತಮ ಆರೋಗ್ಯಕ್ಕೆ ಇವೆಲ್ಲ ಪೂರಕವಾದದ್ದು!

ಬೇಳೆ ಒಬ್ಬಟ್ಟು
ಸಾಮಗ್ರಿ : 4 ಕಪ್ ತೊಗರಿಬೇಳೆ, 1 ಕಪ್ ಕಡಲೆಬೇಳೆ, 1 ತೆಂಗಿನಕಾಯಿ, 3 ಅಚ್ಚು ದಪ್ಪ ಬೆಲ್ಲ, 2 ಏಲಕ್ಕಿ, 4 ಕಪ್ ಮೈದಾ ಹಿಟ್ಟು.
ವಿಧಾನ : ಮೈದಾ ಹಿಟ್ಟನ್ನು ಕಣಕದ ರೀತಿಯಲ್ಲಿ ಕಲಸಿಕೊಂಡು, ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಪಾತ್ರೆಗೆ 6 ಕಪ್ಪು ನೀರು ಹಾಕಿ ಒಲೆಯ ಮೇಲಿಟ್ಟು ಕುದಿ ಬಂದ ಮೇಲೆ ಬೇಳೆಯನ್ನು ತೊಳೆದು ಹಾಕಿ. ಬೇಳೆ ಬೆಂದ ಮೇಲೆ ನೀರನ್ನು ಪಾತ್ರೆಗೆ ಬಗ್ಗಿಸಿ, ಬೇಳೆಯನ್ನು ಬೇರೆ ತೆಗೆದಿಟ್ಟುಕೊಳ್ಳಿ. ಸ್ವಲ್ಪ ಆರಿದ ನಂತರ ಬೇಳೆ ರುಬ್ಬಿಕೊಳ್ಳಿ, ತೆಂಗಿನಕಾಯಿ ತುರಿದು ರುಬ್ಬಿಟ್ಟುಕೊಳ್ಳಿ. ಪಾತ್ರೆಗೆ ಬೆಲ್ಲ ಹಾಕಿ ನಾಲ್ಕು ಕಪ್ ನೀರು ಹಾಕಿ ಪಾಕ ತಯಾರಿಸಿ. ಇದಕ್ಕೆ ರುಬ್ಬಿದ ತೆಂಗಿನ ತುರಿ, ಏಲಕ್ಕಿ ಪುಡಿ ಹಾಕಿ. ಸುವಾಸನೆ ಪಾಕ ಬಂದಾಗ ರುಬ್ಬಿದ ಬೇಳೆಯನ್ನು ಹಾಕಿ ಕೈಯಾಡಿಸಿ. ಗಟ್ಟಿಯಾದಾಗ ಕೆಳಗೆ ಇಳಿಸಿ ಉಂಡೆ ಮಾಡಿ. ಮೈದಾಹಿಟ್ಟಿನ ಜೊತೆ ಸೇರಿಸಿ ಒಬ್ಬಟ್ಟು ತಟ್ಟಿ, ಕಾವಲಿಯ ಮೇಲೆ ಎಣ್ಣೆ ಹಾಕಿ ಬೇಯಿಸಿ, ಸವಿಯಲು ಕೊಡಿ.

ಕಾಯಿ ಒಬ್ಬಟ್ಟು
ಸಾಮಗ್ರಿ : 1 ದಪ್ಪ ತೆಂಗಿನಕಾಯಿ, 4 ಕಪ್ ಸಕ್ಕರೆ, 4 ಏಲಕ್ಕಿ, 4 ಕಪ್ ಮೈದಾಹಿಟ್ಟು.
ವಿಧಾನ : ಮೈದಾಹಿಟ್ಟಿಗೆ ಸ್ವಲ್ಪ ನೀರು ಹಾಕಿ ಕಣಕ ಕಲಸಿಟ್ಟುಕೊಳ್ಳಿ. ತೆಂಗಿನಕಾಯಿಯನ್ನು ಬೆಳ್ಳಗೆ ತುರಿದು ನುಣ್ಣಗೆ ರುಬ್ಬಿಕೊಳ್ಳಿ. 4 ಕಪ್ ಸಕ್ಕರೆಗೆ 1 ಕಪ್ ನೀರನ್ನು ಹಾಕಿ ಎಳೆ ಪಾಕ ಬರುವವರೆಗೂ ಕುದಿಸಿ. ರುಬ್ಬಿದ ಕಾಯಿತುರಿ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಕೈಯಾಡಿಸಿ. ಉಂಡೆ ಪಾಕ ಬರುವವರೆಗೆ ಕೈಯಾಡಿಸುತ್ತಿರಿ. ನಂತರ ಕೆಳಗಿಳಿಸಿ ಉಂಡೆ ಮಾಡಿ ಮೈದಾ ಹಿಟ್ಟಿನ ಜೊತೆ ಸೇರಿಸಿ ಒಬ್ಬಟ್ಟು ತಟ್ಟಿ ಕಾವಲಿಯ ಮೇಲೆ ಹಾಕಿ ಎಣ್ಣೆ ಹಾಕುತ್ತಾ ಎರಡೂ ಬದಿ ಬೇಯಿಸಿ, ಸವಿಯಲು ಕೊಡಿ.

ಮಾವಿನಕಾಯಿ ಚಿತ್ರಾನ್ನ
ಸಾಮಗ್ರಿ : 4 ಕಪ್ ಅಕ್ಕಿ, 1 ದಪ್ಪ ಮಾವಿನಕಾಯಿ, 8 ಮೆಣಸಿನಕಾಯಿ, 2 ಚಮಚ ಧನಿಯಾ, ಅರ್ಧ ಚಮಚ ಜೀರಿಗೆ, 2-2 ಚಕ್ಕೆ, ಲವಂಗ, 2 ಮೊಗ್ಗು, 8 ಚಮಚ ಕಡಲೆಬೇಳೆ, 4 ಚಮಚ ಉದ್ದಿನಬೇಳೆ, ಅರ್ಧ ಕಪ್ ರೀಫೈನಡ್ ಎಣ್ಣೆ, ತುಸು ಸಾಸುವೆ, ಅರ್ಧ ಗಿಟುಕು ಕೊಬ್ಬರಿ ಅಥವಾ 1 ಹೋಳು ಕಾಯಿ, ಚಿಟಕಿ ಇಂಗು, ಅರಿಶಿನ, 8-10 ಗೋಡಂಬಿ, ಕೊ.ಸೊಪ್ಪು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.




