- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ‘ಕೆಡಿ – ದ ಡೆವಿಲ್’ ಸಿನಿಮಾದ ‘ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡಿಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಅಶ್ಲೀಲತೆ ಆರೋಪದ ಬೆನ್ನಲ್ಲೇ ಈ ಹಾಡಿನ ಪ್ರದರ್ಶನವನ್ನು ನಿಷೇಧಿಸುವ ಕ್ರಮ ಕೈಗೊಳ್ಳಲಾಗಿದೆ.
ಜೋಗಿ ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ಅಭಿನಯದ ಈ ಚಿತ್ರದಲ್ಲಿನ ಹಾಡು ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಲೋಕಸಭೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್, ಭಾರತದಲ್ಲಿ ವಾಕ್ ಸ್ವಾತಂತ್ರ್ಯವು ಸಂವಿಧಾನಾತ್ಮಕ ಮಿತಿಗಳಿಗೆ ಒಳಪಟ್ಟಿದ್ದು, ಅಭಿವ್ಯಕ್ತಿಯು ಸಮಂಜಸ ನಿರ್ಬಂಧಗಳ ಅಡಿಯಲ್ಲಿ ಇರಬೇಕೆಂದು ಸ್ಪಷ್ಟಪಡಿಸಿದರು. ಸರ್ಕಾರ ಈಗಾಗಲೇ ಹಾಡಿನ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಇದರ ಮಧ್ಯೆ, ವಿವಾದ ಗಂಭೀರ ರೂಪ ಪಡೆದ ಹಿನ್ನೆಲೆ, ಜಯಮಾಲಾ (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ) ನಿರ್ದೇಶಕ ಪ್ರೇಮ್, ನಿರ್ಮಾಪಕರು ಹಾಗೂ ಆನಂದ್ ಆಡಿಯೋ ಪ್ರತಿನಿಧಿಗಳನ್ನು ಸಭೆಗೆ ಕರೆಯಲಾಗಿದೆ. ಸಭೆಯಲ್ಲಿ ಹಾಡಿನ ವಿರೋಧಾತ್ಮಕ ಅಂಶಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಹಾಡು ಮಹಿಳೆಯರ ಘನತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಮಹಿಳಾ ಆಯೋಗ ಕೂಡ ಫಿಲ್ಮ್ ಚೇಂಬರ್‌ಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತ್ತು.
ಒಟ್ಟಿನಲ್ಲಿ, ‘ಸರ್ಸೆ ಸರ್ಸೆ’ ಹಾಡಿನ ವಿವಾದ ಇದೀಗ ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಕಾದುನೋಡುವಂತಾಗಿದೆ.





