ಜಾಗೀರ್ದಾರ್*
ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ ಹಾಗೂ ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ & ರಿಷಿಕಾ ನಾಯಕ - ನಾಯಕಿಯಾಗಿ ನಟಿಸಿರುವ "ನಿದ್ರಾದೇವಿ next door" ಚಿತ್ರ ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿರುವ ಚಿತ್ರ. ಇತ್ತೀಚೆಗೆ ಬಿಡುಗಡೆಯಾಗಿದ್ದ ಈ ಚಿತ್ರದ "ಸ್ಲೀಪ್ ಲೆಸ್ ಆಂಥೆಮ್" ಹಾಡು ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈ ಹಾಡನ್ನು ದುನಿಯಾ ವಿಜಯ್ ಕುಮಾರ್ ಬಿಡುಗಡೆ ಮಾಡಿದ್ದರು. ಪ್ರಸ್ತುತ ಚಿತ್ರದ ಎರಡನೇ ಹಾಡು "ನೀ ನನ್ನ" ಎಂಬ ರೊಮ್ಯಾಂಟಿಕ್ ಸಾಂಗ್ ಇತ್ತೀಚೆಗೆ ಸರೆಗಮ ಮ್ಯೂಸಿಕ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಹಾಡನ್ನು ಅನಾವರಣ ಮಾಡಿದರು. ಪತ್ರಕರ್ತ ರಂಗನಾಥ್ ಭಾರದ್ವಾಜ್ ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಮಾತಾನಾಡಿದರು.
ನಾನು ಮೂಲತಃ ಆಡಿಟರ್. ಇದು ನನ್ನ ನಿರ್ಮಾಣದ ಮೂರನೇ ಸಿನಿಮಾ. ನಿರ್ದೇಶಕರು ಬಂದು ಕಥೆ ಹೇಳಿದಾಗ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಚಿತ್ರಕ್ಕೆ ಹಾಡುಗಳು ಇನ್ವಿಟೇಶನ್ ಇದ್ದ ಹಾಗೆ. ಹಾಡುಗಳಿಗೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ತರುವ ಶಕ್ತಿಯಿದೆ. ಹಾಗಾಗಿ ನಾನು ನಿರ್ದೇಶಕರಿಗೆ ನಮ್ಮ ಚಿತ್ರದಲ್ಲಿ ಸುಮಧುರ ಗೀತೆಗಳಿರಲಿ ಎಂದು ಹೇಳಿದ್ದೆ. ದುನಿಯಾ ವಿಜಯ್ ಅವರಿಂದ ಬಿಡುಗಡೆಯಾದ ನಮ್ಮ ಚಿತ್ರದ ಮೊದಲ ಹಾಡು ಈಗಾಗಲೇ ಜನಮನಸೂರೆಗೊಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಎರಡನೇ ಹಾಡನ್ನು ಬಿಡುಗಡೆ ಮಾಡಿರುವುದು ಬಹಳ ಖುಷಿಯಾಗಿದೆ. ಹೊಸತಂಡದ ಹೊಸಪ್ರಯತ್ನಕ್ಕೆ ಪ್ರೋತ್ಸಾಹ ನೀಡಲು ಬಂದಿರುವ ಗಣೇಶ್ ಅವರಿಗೆ ಧನ್ಯವಾದ. ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ "ನೀ ನನ್ನ" ಹಾಡನ್ನು ರಾಘವೇಂದ್ರ ಕಾಮತ್ ಅವರು ಬರೆದಿದ್ದಾರೆ. ಸೋನು ನಿಗಂ ಅವರು ಹಾಡಿದ್ದಾರೆ. ಆರು ತಿಂಗಳ ಹಿಂದೆಯೇ ಈ ಹಾಡು ಸಿದ್ದವಾಗಿತ್ತು. ಆನಂತರ ಸೋನು ನಿಗಂ ಅವರ ವಿವಾದ ನಡೆದಿದ್ದು. ಹಾಗಾಗಿ ನಮಗೂ ಕೂಡ ಎಲ್ಲದಕ್ಕಿಂತ ಭಾಷೆ ಮುಖ್ಯ. ಆ ನಿಟ್ಟಿನಲ್ಲಿ ಸೋನು ನಿಗಂ ಅವರ ಧ್ವನಿಯಲ್ಲಿ ಬಂದಿರುವ ಈ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳುವುದಿಲ್ಲ. ಬೇರೆ ಗಾಯಕರಿಂದ ಈ ಹಾಡನ್ನು ಹಾಡಿಸುತ್ತೇವೆ ಎಂದು ನಿರ್ಮಾಪಕ ಜಯರಾಮ ದೇವಸಮುದ್ರ ತಿಳಿಸಿದರು.
ಪ್ರತಿಷ್ಠಿತ ಅಕಾಡೆಮಿಯಲ್ಲಿ ಸಿನಿಮಾ ಬಗ್ಗೆ ಅಧ್ಯಯನ ಮಾಡಿದ ನನಗೆ ನನ್ನ ಮಾತೃಭಾಷೆಯಲ್ಲೇ ಮೊದಲ ಸಿನಿಮಾ ನಿರ್ದೇಶಿಸಬೇಕೆಂಬ ಆಸೆಯಿತ್ತು. ನಿರ್ಮಾಪಕ ಜಯರಾಮ್ ಅವರು ನನ್ನ ಆಸೆಗೆ ಆಸರೆಯಾದರು. ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇನ್ನೂ ಇಂದು ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಹಾಡು ರೊಮ್ಯಾಂಟಿಕ್ ಹೀರೊ ಗಣೇಶ್ ಅವರಿಂದ ಬಿಡುಗಡೆಯಾಗಿದ್ದು ಬಹಳ ಖುಷಿಯಾಗಿದೆ. ನಮ್ಮ ಚಿತ್ರಕ್ಕೆ ಪ್ರವೀರ್ ಹಾಗೂ ರಿಷಿಕಾ ಅವರನ್ನು ನಾಯಕ - ನಾಯಕಿ ಎಂದು ಆಯ್ಕೆ ಮಾಡಿದಾಗ ಸಾಕಷ್ಟು ಜನ ನನಗೆ ಈ ಜೋಡಿ ತುಂಬಾ ಚೆನ್ನಾಗಿದೆ ಎಂದರು. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಹಾಗೂ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ನಮ್ಮ ಚಿತ್ರದ ಹೈಲೆಟ್ ಎನ್ನಬಹುದು ಎಂದರು ನಿರ್ದೇಶಕ ಸುರಾಗ್.