ಸರಸ್ವತಿ*
ಸರಳವಾದ ಲವ್ ಸ್ಟೋರಿಗಳನ್ನು ಕಟ್ಟುವುದರಲ್ಲಿ ಎತ್ತಿದ ಕೈಯ್ಯಾಗಿರುವ ಸಿಂಪಲ್ ಸುನಿ, ಹೊಸ ಪ್ರತಿಭೆಗಳನ್ನು ಬೆಳ್ಳಿಪರದೆಗೆ ಪರಿಚಯಿಸುವುದರಲ್ಲಿಯೂ ಪಂಟರ್. ಗತವೈಭವ ಸಿನಿಮಾ ಮೂಲಕ ಸುನಿ ಅವರು ಮತ್ತೊಬ್ಬ ಯುವ ನಟನನ್ನು ಕನ್ನಡ ಪ್ರೇಕ್ಷಕರಿಗೆ ಮಡಿಲಿಗೆ ಹಾಕುತ್ತಿದ್ದಾರೆ. ಅವರೇ ದುಷ್ಯಂತ್.

ತುಮಕೂರಿನ ಪ್ರತಿಭೆ ದುಷ್ಯಂತ್,
ಟೆಂಟ್ ಸಿನಿಮಾ ಅಭಿನಯ ಶಾಲೆಯಲ್ಲಿ ಅಭಿನಯ ತರಬೇತಿ ಹಾಗು ಸಿನಿಮಾ ಸಂಬಂಧಿತ ವಿಷಯಗಳನ್ನು ಕಲಿತಿದ್ದಾರೆ. ಬೀದಿ ನಾಟಕ, ಕಿರುಚಿತ್ರ, ಮ್ಯೂಸಿಕ್ ವಿಡಿಯೋ ಹೀಗೆ ನಟನೆಗೆ ಒತ್ತು ಕೊಡುವಂತಹ ಹಲವು ಕೆಲಸಗಳನ್ನು ಅವರು ಮಾಡಿದ್ದಾರೆ. 2019ರಲ್ಲಿ ರಂಗಕರ್ಮಿ ಕೃಷ್ಣ ಅವರ ಆ್ಯಕ್ಟಿಂಗ್ ವರ್ಕ್ ಶಾಪ್ ನಲ್ಲೂ ಭಾಗಿ, ಪುಷ್ಕರ್ ಆ್ಯಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆ ಕಲಿತಿರುವ ದುಷ್ಯಂತ್, ನೀನಾಸಂನ ಧನಂಜಯ ಅವರ ಬಳಿಯೂ ಒಂದಷ್ಟು ದಿನಗಳ ಕಾಲ ನಟನಾ ಪಟ್ಟುಗಳನ್ನು ತಿಳಿದುಕೊಂಡಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಸುಮಾರು 20 kg ಗಳಷ್ಟು ತೂಕ ಇಳಿಸಿಕೊಂಡು, ಡಾನ್ಸ್ ಪ್ರಾಕ್ಟೀಸ್, ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಸೇರಿದಂತೆ ಒಬ್ಬ ನಾಯಕ ಏನೇನು ಕಲಿತಿರಬೇಕೋ ಅವೆಲ್ಲವನ್ನೂ ಕಲಿತು ನಂತರ ಗತವೈಭವ ಸಿನಿಮಾ ಮೂಲಕ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
‘ಗತವೈಭವ, ಸಂಪೂರ್ಣ ಪ್ರೇಮಕಥೆ. ಪ್ಯಾಂಟಸಿ ಹಾಗು ಸನಾತನ ಧರ್ಮದ ಕಥೆಯನ್ನು ಈ ಸಿನಿಮಾದಲ್ಲಿ ಸುನಿ ಅವರು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ದುಷ್ಯಂತ್ ಗೆ ಜೋಡಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಈವರೆಗೂ 19 ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ತ್ರಿಭಾಷಾ ನಟಿ ಆಶಿಕಾ ರಂಗನಾಥ್ ತಮ್ಮ ಸಿನಿ ಜರ್ನಿ ಯಲ್ಲಿ ನೆನಪಿನಲ್ಲಿ ಉಳಿಯುವಂತ ಪಾತ್ರ ಮಾಡಿರುವುದಾಗಿ ಹೇಳಿದ್ದಾರೆ, ಸಹ ನಟ ದುಷ್ಯಂತ್ ಬಗ್ಗೆ ಮಾತನಾಡಿರುವ ನಟಿ “ದುಷ್ಯಂತ್ ಕನ್ನಡ ಚಿತ್ರರಂಗಕ್ಕೆ ಅಲ್ಲ ಇಡೀ ಭಾರತ ಚಿತ್ರೋದ್ಯಮಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ ” ಎಂದು ಹೇಳಿರುವುದು ಯುವ ನಟನ ನಟನೆ ಹಾಗು ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿದೆ.
ನಟ ಶಿವರಾಜಕುಮಾರ್ ದುಷ್ಯಂತ್ ಕುರಿತಾಗಿ ಮಾತಾಡಿದ ಮಾತುಗಳು ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸಿದೆ.
ಸೇರ್ವೇಗಾರ ಸಿಲ್ವರ್ ಸ್ಕ್ರೀನ್ಸ್ ಮತ್ತು ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಕ್ ಹಾಗೂ ಸಿಂಪಲ್ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ವಿಕ್ರಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ. ಸಿನಿಮಾದ ಟೀಸರ್, ಹಾಡುಗಳಾದ ವರ್ಣಮಾಲೆ, ಹಾಗು ಶಿಪ್ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ ಇದೇ ತಿಂಗಳ 14ಕ್ಕೆ ಗತವೈಭವ ಕನ್ನಡ ಹಾಗು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವುದು ವಿಶೇಷ.





