ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ಏಳುಮಲೆ
ನಿರ್ಮಾಣ: ತರುಣ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ
ನಿರ್ದೇಶನ:  ಪುನೀತ್ ರಂಗಸ್ವಾಮಿ
ತಾರಾಂಗಣ: ರಾಣಾ, ಪ್ರಿಯಾಂಕಾ ಆಚಾರ್, ಕಿಶೋರ್, ನಾಗಾಭರಣ, ಜಗಪತಿ ಬಾಬು, ಜಗ್ಗಪ್ಪ ಮುಂತಾದವರು.
ರೇಟಿಂಗ್: 4/5
ಮೈಸೂರಿನ ಅನಾಥ ಯುವಕ ಹರೀಶ (ರಾಣ) ಓರ್ವ ಪ್ರವಾಸಿ ವಾಹನ ಚಾಲಕ ಇವನಿಗೆ ತಮಿಳುನಾಡಿನಿಂದ ಓದಲು ಮೈಸೂರಿಗೆ ಬಂಡ ಶ್ರೀಮಂತ ಕುಟುಂಬದ ರೇವತಿ ( ಪ್ರಿಯಾಂಕಾ  ಆಚಾರ್) ಜೊತೆ ಪ್ರೀತಿಯಾಗಿದೆ. ರೇವತಿಗೂ ಹರೀಶನೆಂದರೆ ಪ್ರಾಣ. ಈ ವಿಷಯ ತಿಳಿದ ರೇವತಿ ಮನೆಯವರು ಆಕೆಗೆ ಮದುವೆ ಗೊತ್ತು ಮಾಡುತ್ತಾರೆ. ಆದರೆ ರೇವತಿ ಮದುವೆ ಹಿಂದಿನ ರಾತ್ರಿ ಮನೆ ಬಿಟ್ಟು ಹರೀಶನನ್ನು ಸೇರಲು ಮಲೆ ಮಹದೇಶ್ವರ ಬೆಟ್ತಕ್ಕೆ ಬರುತ್ತಾಳೆ. ಅದು ಅಕ್ಟೋಬರ್ ೧೮, ೨೦೦೪ರ ರಾತ್ರಿ ಹರೀಶ ಸಹ ರೇವತಿಯನ್ನು ಕರೆದುಕೊಂಡು ಓಡಿ ಹೋಗಲು ಬೆಟ್ಟಕ್ಕೆ ಬರುತ್ತಾನೆ. ಆ ಸಮಯದಲ್ಲಿ ಕರ್ನಾಟಕ ತಮಿಳುನಾಡು ಭಾಗಗಳ ಗಡಿಯಲ್ಲಿನ ಒಂದು ಫೋಲೀಸ್ ಠಾಣೆಯಲ್ಲಿ ನಡೆಯುವ ಘಟನೆ ಹರೀಶನ ಜೀವನ ಬದಲಾಯಿಸುತ್ತದೆ. ಅವನ ಬಾಳಿನಲ್ಲಿ ಸಾವು-ಬದುಕಿನ ಸನ್ನಿವೇಶಗಳು ಎದುರಾಗುತ್ತವೆ.ಬಹುತೇಕ ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಇದಾಗಿದ್ದು ಪ್ರೇಮಿಗಳು ಒಂದಾಗುತ್ತಾರಾ ಅಥವಾ ಇಲ್ಲವಾ ಎಂಬುದೇ ‘ಏಳುಮಲೆ’ ಕಥೆಯ ಸಾರಾಂಶ.
ನಟ ರಾಣಾ ಮತ್ತು. ಹೊಸ ಪರಿಚಯ ಪ್ರಿಯಾಂಕಾ ಆಚಾರ್ ಪ್ರಧಾನ ಪಾತ್ರದಲ್ಲಿರುವ “ಏಳುಮಲೆ” ಚಿತ್ರಕ್ಕೆ ಪುನೀತ್ ರಂಗಸ್ವಾಮಿ ನಿರ್ದೇಶನ ಇದೆ. ಸಿನಿಮಾಗೆ ತರುಣ್ ಸುಧೀರ್ ಅವರು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ತರುಣ್ ಸುಧೀರ್ ಮತ್ತು ಅಟ್ಲಾಂಟ ನಾಗೇಂದ್ರ ಅವರ ನಿರ್ಮಾಣದಲ್ಲಿ ಚಿತ್ರ ತೆರೆಗೆ ಬಂದಿದೆ. 2004ರ ಕಾಲಘಟ್ಟದ ಕಥೆಯನ್ನು ನಿರ್ದೇಶಕರು ಎಲ್ಲಿಯೂ ಸಡಿಲು ಬಿಡದೆ ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿದ್ದಾರೆ. ಎರಡು ಗಂಟೆ ಹದಿಮೂರು ನಿಮಿಷದ ಸಿನಿಮಾದಲ್ಲಿ ಎಲ್ಲೂ ಅನಗತ್ಯ ದೃಶ್ಯಗಳಿಲ್ಲ. 2004ರ “ಆಪರೇಷನ್ ಕುಕೂನ್” ಎನ್ನುವ ನೈಜ ಘಟನೆಯ ಆಧಾರದಲ್ಲಿ ಈ ಕಾಲ್ಪನಿಕ ಸಿನಿಮಾ ತಯಾರಾಗಿದ್ದು ಇಲ್ಲಿ ಸಂಕಷ್ಟಕ್ಕೆ ಸಿಕ್ಕ ಪೋಲೀಸರಿದ್ದಾರೆ, ಸಂಕಟ ಪಡುವ ಪ್ರೇಮಿಗಳಿದ್ದಾರೆ ಜೊತೆಗೆ ಬಂದೂಕಿನ ಕಳ್ಳಸಾಗಣೆ ಮಾಡುವ ಖದೀಮರೂ ಇದ್ದಾರೆ.  ಃಆಗಾಗಿ ಇದು ಪ್ರೀತಿಯೊಂದಿಗೆ ಥ್ರಿಲ್ಲಿಂಗ್ ಕಥಾನಕವೂ ಹೌದು. ವೇಗವಾದ ನಿರೂಪಣೆ ಚಿತ್ರದ ಹೈಲೈಟ್.
ರಾಣಾ, ಪ್ರಿಯಾಂಕಾ ನಟನೆಯಲ್ಲಿ ಮನಸೆಳೆಯುತ್ತಾರೆ. ರಾಣಾ ಈ ಹಿಂದಿನ ಚಿತ್ರಕ್ಕಿಂತ ತುಂಬಾ ಮಾಗಿದ ಅಭಿನಯ ಕೊಟ್ಟಿದ್ದಾರೆ. ಇನ್ನುಳಿದಂತೆ ಈಗಾಗಲೇ ಅನುಭವೀ ಕಲಾವಿದರೆನ್ನಿಸಿಕೊಂಡ  ಕಿಶೋರ್, ನಾಗಾಭರಣ, ಜಗಪತಿ ಬಾಬು ಮೊದಲಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿಸಿದ್ದಾರೆ. ಕಥೆಗೆ ಪೂರಕವಾಗಿ ಚಾಮರಾಜನಗರ ಭಾಗದ ಕನ್ನಡ ಹಾಗೂ ಗಡಿನಾಡಿನ ತಮಿಳು ಭಾಷೆ ಬಳಸಿಕೊಂಡಿರುವುದು ಚಿತ್ರ ನೈಜವಾಗಿ ಮೂಡಿಬರಲು ಸಹಕಾರಿ ಆಗಿದೆ.
ಡಿ. ಇಮ್ಮಾನ್ ಅವರ ಸಂಗೀತ ಚಿತ್ರದ ಮತ್ತೊಂದು ಹೈಲೈಟ್. ಅದ್ವೈತ್ ಗುರುಮೂರ್ತಿ ಅವರ  ಛಾಯಾಗ್ರಹಣದಲ್ಲಿ ದೃಶ್ಯಗಳು ಸೂಕ್ತವಾಗಿ ಬಂದಿದೆ. ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕೆ ಮೆರುಗು ತಂದಿದೆ. ಚಿತ್ರದ ಮೂರು ಹಾಡುಗಳೂ ಸಹ ಗಮನ ಸೆಳೆಯುವಂತಿದೆ. ಒಟ್ಟಾರೆಯಾಗಿ ಒಂದು ಥ್ರಿಲ್ಲರ್ ಲವ್ ಸ್ಟೋರಿ ನೋಡಬಯಸುವರಿಗೆಲ್ಲಾ “ಏಳುಮಲೆ” ಉತ್ತಮ ಆಯ್ಕೆಯಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ