ಕನ್ನಡ ಚಿತ್ರರಂಗಕ್ಕ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ಅಮೇರಿಕಾದ ಒರ್ಲಾಂಡೋ ಕನ್ನಡ ಸಂಘದವರು 'ತಾರಾಲೋಕ' ಎಂಬ ವಿನೂತನ ಕಾರ್ಯಕ್ರಮವನ್ನ, 8ನೇ ನಾವಿಕ ಸಮಾವೇಶದಾಗ ಪ್ರಸ್ತುತಿ ಮಾಡಿದರು. ಬೆಂಗಳೂರಿನಿಂದ ಬಂದಂತಹ ತಾರಾದಂಪತಿ ನಮಿತಾ ರಾವ್ ಮತ್ತ ವಿಕ್ರಂ ಸೂರಿ ಅವರ ನಿರ್ದೇಶನದಾಗ ರಂಗಕ್ಕೆ ಬಂದ 67 ಜನ ಅಮೆರಿಕೆಯ ಕನ್ನಡಿಗರು, ಅವರವರಿಗೆ ನೀಡಿದ ಪಾತ್ರಗಳಿಗೆ ಜೀವ ತುಂಬಿದರು... ಅಮೆರಿಕಾದಾಗ ಡಾಕ್ಟರಕಿ, ಇಂಜಿನಿಯರ್, ವ್ಯವಹಾರ - ವ್ಯಾಪಾರ ಮಾಡುವ, ಓದುವ, ಮನೆಗೆಲಸ ಮಾಡಿಕೊಂಡಿರುವ ಕನ್ನಡಿಗರು ಎಲ್ಲಾ ಮರೆತು ಕುಣಿದು ಕುಪ್ಪಳಿಸಿ ಆನಂದಿಸಿ ರಂಗದ ಮ್ಯಾಲೆ ಕನ್ನಡತವನ್ನ ಮೆರೆದರು, ಮತ್ತ ತುಂಬಿದ ಪ್ರೇಕ್ಷಾಗೃಹದಲ್ಲಿಯ ಪ್ರತಿಯೊಬ್ಬರಿಗೂ ಕನ್ನಡ ಚಿತ್ರರಂಗದ ಸವಿ ನೆನಪುಗಳನ್ನ ಕೆದಕಿ ಕೊಟ್ಟರು.
ಒಟ್ಟ 65 ಮಿನಿಟಿನ ಪ್ರಸ್ತುತಿಯೊಳಗ, ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕ ಸಂಬಂಧ ಕಲ್ಪಿಸುವುದರೊಳಗ ನಿರ್ದೇಶಕ ಯಶಸ್ವಿ ಆಗ್ಯಾರ... ಡಾ ರಾಜ್, ಡಾ ವಿಷ್ಣು, ಡಾ ಅಂಬರೀಷ್, ನಾಗ್ ಸಹೋದರರ, ಡ್ವಾರ್ಕಿಷಜಿ ರವಿಚಂದ್ರನ್, ಭಾರತಿ, ಜಯಂತಿ, ಮಂಜುಳಾ, ಸೌಂದರ್ಯ, ಎಂಬಂತಹ ಹಿರಿಯ ಕಲಾವಿದರ ಲುಕ್ ಅಲೈಕ್ ಗಳನ್ನ ಹುಡುಕಿ, ಅವರಿಗೆ ತಕ್ಕದಾದ ವೇಷಭೂಷಣ ತೊಡಿಸಿ, ತಾಲೀಮ ಮಾಡಿಸಿ, ಯೋಗ್ಯ ರಂಗಪರಿಕಗಳೊಂದಿಗೆ ರಂಗಕ್ಕ ತಂದದ್ದರ ಹಿರಿಮೆ ಒರ್ಲಾಂಡೋ ಕನ್ನಡ ಸಂಘದ ಸಕಲರಿಗೂ ಸಲ್ಲತದ.... ಇದರಾಗ ತಾರಾದಂಪತಿಗಳ ನೇತೃತ್ವ ಹಿರೇತನ ಎದ್ದು ಕಾಣತದ.
ಸಿಕ್ಕಿರುವ ಅವಕಾಶ ಸದುಪಯೋಗ ಪಡಿಸಿಕೊಂಡು, ಕನ್ನಡ ಚಿತ್ರರಂಗದ ಸೂಕ್ಶ್ಮ ಮಾಹಿತಿಯನ್ನ ಮುಂದಿನ ಪೀಳಿಗೆಗೆ ತಲುಪಿಸುವ ಈ ಶ್ರಮ ಶ್ಲಾಘನೀಯ... ಇನ್ನು ನಾಲ್ಕಾರು ಕಡೆ ಈ ಪ್ರದರ್ಶನ ಆದರ, ಕಲಾವಿದರ - ನಿರ್ದೇಶಕ ದ್ವಯರ ಪರಿಶ್ರಮಕ್ಕ ಹೆಚ್ಚಿನ ಮಾನ್ಯತೆ - ಗೌರವ ಸಿಕ್ಕಂಗ ಆಗತದ... ವೇದಿಕೆಗೆ ಬಂದ ಶಂಕರನಾಗ, ವಿಷ್ಣುವರ್ಧನ್, ದ್ವಾರಕೀಶ್, ಅಂಬರೀಷ, ಜಯಂತಿ, ಸೌಂದರ್ಯ, ಹಿರಣ್ಯ ಕಚ್ಕ್ಯಾಪ್ ಮತ್ತ ಗಂಧದಗುಡಿಯ ಡಾ ರಾಜ್, ಸಂಪತ್ತಿಗೆ ಸವಾಲ್ ಚಿತ್ರದ ಮಂಜುಳಾ, ಓಬವ್ವನ ಪಾತ್ರ, ಬಂಗಾರದ ಮನುಷ್ಯದ ಭಾರತಿ, ಆಪ್ತಮಿತ್ರದ ಸೌಂದರ್ಯ, ಪಾತ್ರಧಾರಿಗಳ ಅಭಿನಯ ಭಾಳ ದಿನ ನೆನಪಿಡುವಂತಹವು. ಇಂದಿನ ಕಾಲದ ಅವಸರ, ಗಡಬಡಿ, ಕೆಲಸದೊತ್ತಡ, ಫ್ಯಾಮಿಲಿ ಟೆನ್ಷನ್ ಗಳ ನಡುವ ಟೈಮ್ ಹೊಂದಿಸಿ 67 ಅನಿವಾಸಿ ಕಲಾವಿದರು ಒಂದಾಗಿ, ಕೆಲವಷ್ಟು ದಿನ ರಿಹರ್ಸಲ್ ಮಾಡಿ, ಒಂದು ಸಾರ್ಥಕ ರಂಗಪ್ರಯೋಗ ಮಾಡಿದ್ದು ಹೆಮ್ಮೆಯ ವಿಷಯ... ಭಾಗವಹಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು...
- ಡಾ ಯಶವಂತ ಸರದೇಶಪಾಂಡೆ