ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರ: ನಮೋ ವೆಂಕಟೇಶ
ನಿರ್ಮಾಣ: ಆರುಶ್ ಪಿಕ್ಚರ್ಸ,  ಶ್ರೀನಿವಾಸ ಗೆಜ್ಜಲಗೆರೆ
ನಿರ್ದೇಶನ: ವಿಜಯ್ ಭಾರದ್ವಾಜ್
ತಾರಾಂಗಣ: ವಿಜಯ್ ಭಾರದ್ವಾಜ್,  ಅನ್ವಿತಾ ಸಾಗರ್ (ಪಾರ್ವತಿ), ಶ್ಯಾಮ್ ಸುಂದರ್, ನಾಗರಾಜ ರಾವ್, ರವಿ ಕುಮಾರ್, ದೀಪಾ, ಮಂಜುನಾಥ್ ಹೆಗಡೆ, ಸುಧಾ ಪ್ರಸನ್ನ ಮತ್ತಿತರರು
ರೇಟಿಂಗ್: 4/5

ಹಲವಾರು ವರ್ಷಗಳಿಂದ ಕಿರುತೆರೆ, ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ವಿಜಯ್ ಭಾರದ್ವಾಜ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶಿಸಿರುವ ‘ನಮೋ ವೆಂಕಟೇಶ’ ಚಿತ್ರ ಈ ವಾರ (ಸೆ. 5) ಬಿಡುಗಡೆ ಆಗಿದೆ. ಈ ಚಿತ್ರಕ್ಕೂ ತಿರುಪತಿಯ ಶ್ರೀನಿವಾಸ ದೇವನಿಗೂ ಯಾವುದೇ ಸಂಬಂಧವಿಲ್ಲ, ಇಂದಿನ ಕಾಲದಲ್ಲಿ  ನಡೆಯೋ ಅಪ್ಪಟ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರ. ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ‘ನಮೋ ವೆಂಕಟೇಶ’ ಎಂಬ ಟೈಟಲ್ ಇಟ್ಟಿದೆ. ನವಿರಾದ ಹಾಸ್ಯದ ಜೊತೆಗೊಂದು   ಪ್ರೇಮಕಥೆಯನ್ನು ಹೇಳುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಿದ್ದು,  ಆರುಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ ಗೆಜ್ಜಲಗೆರೆ ಈ ಚಿತ್ರ ನಿರ್ಮಿಸಿದ್ದಾರೆ. ವಿಜಯ್ ಭಾರದ್ವಾಜ್ ಈ  ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.. ‘ಗಟ್ಟಿಮೇಳ’ ಧಾರಾವಾಹಿಯ ಆದ್ಯ ಪಾತ್ರದಿಂದ ಹೆಸರಾದ ಅನ್ವಿತಾ ಸಾಗರ್ (ಪಾರ್ವತಿ) ‘ನಮೋ ವೆಂಕಟೇಶ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಶ್ಯಾಮ್ ಸುಂದರ್, ನಾಗರಾಜ ರಾವ್, ರವಿ ಕುಮಾರ್, ದೀಪಾ, ಮಂಜುನಾಥ್ ಹೆಗಡೆ, ಸುಧಾ ಪ್ರಸನ್ನ ಹಾಗೂ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶರತ್ ಆರೋಹಣ  ಸಂಗೀತ ಸಂಯೋಜಿಸಿದ್ದಾರೆ. ಹಾಗಿದ್ದರೆ ಈ ಸಿನಿಮಾ ನಿಜಕ್ಕೂ ಹೇಗಿದೆ ತಿಳಿಯಲು ಮುಂದೆ ಓದಿ-

venkatesh 1

ಹಳ್ಳಿಯೊಂದರಲ್ಲಿ ಸಂಪ್ರದಾಯಸ್ಥ ಮನೆತನದ ಹುಡುಗಿ ನಗರದ ಒಂದು ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿ ಸೇರಿಕೊಂಡು ಇಂಟರ್ನ್ ಮಾಡುತ್ತಾಳೆ. ಆಗ ಆ ಸಂಸ್ಥೆಯ ಮಾಲೀಕರ ಮಗನನ್ನೇ ಪ್ರೀತಿಸುವ ಅವಳು ಕಡೆಗೆ ಇಂಟರ್ನ್ ಮುಗಿಯುತ್ತಿದ್ದಂತೆ ತನ್ನ ಮನೆ, ಸಂಪ್ರದಾಯದ ನೆಪವೊಡ್ಡಿ ಅವನಿಂದ ದೂರವಾಗುತ್ತಾಳೆ. ಆದರೆ ನಾಯಕನಿಗೆ ಅದಾಗಲೇ ಅವಳಲ್ಲಿ ಪ್ರೇಮ ಮೂಡಿದ್ದ ಕಾರಣ ಅವನು ತನ್ನ ಸಂಸ್ಥೆಯಿಂದ ರದ್ದಾಗಿದ್ದ ಪ್ರಾಜೆಕ್ಟ್ ಒಂದನ್ನು ಮತ್ತೆ ಪ್ರಾರಂಭಿಸುವ ನೆಪದಲ್ಲಿ ನಾಯಕಿಯ ಊರು ಸೇರುತ್ತಾನೆ. ಅಲ್ಲಿ ಅವಳ ಮನೆಯವರನ್ನೊಪ್ಪಿಸಿ ಅವಳನ್ನು ಮದುವೆ ಆಗುತ್ತಾನೆಯೆ? ಈ ಪ್ರೀತಿಸುವ ಜೀವಗಳು ಒಂದಾಗಲು ಹೇಗೆಲ್ಲಾ ಪರಿಪಾಟಲು ಪಡುತ್ತದೆ ಎನ್ನುವುದೇ  ‘ನಮೋ ವೆಂಕಟೇಶ’ ಚಿತ್ರದ ಕಥಾ ಸಾರಾಂಶ.

venkatesh 2

ಕನ್ನಡದಲ್ಲಿ ಇತ್ತೀಚೆಗೆ ಬಂದ ಚಿತ್ರಗಳಲ್ಲಿ ಉತ್ತಮವಾದ ಕೌಟುಂಬಿಕ ಚಿತ್ರ. ಇಡೀ ಕುಟುಂಬ ಸಮೇತರಾಗಿ ಯಾವುದೇ ಮುಜುಗರವಿಲ್ಲದಂತೆ ಕುಳಿತು ನೋಡಬಹುದಾದ ಫ್ಯಾಮಿಲಿ ಎಂಟರ್ಟೈನರ್. ಹಾಸ್ಯವು ಚೆನ್ನಾಗಿದೆ, ಭಾವನಾತ್ಮಕವಾಗಿಯೂ ಬಹಳ ಮನಮುಟ್ಟುವಂತಹ ಚಿತ್ರ. ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದ ಯಾರಿಗೂ ಕಾಣದಂತೆ ಬಚಿಟ್ಟ ಹೆಣ್ಣಿನ ಮನದಾಳದ ನೋವುಗಳು ಹಾಗೂ ತ್ಯಾಗದ ಬಗ್ಗೆ ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ಪ್ರತಿಯೊಂದು ಪಾತ್ರದ ಸ್ವಾಭಾವಿಕ ನಟನೆ ಚಿತ್ರದ ಹೈ ಲೈಟ್ಸ್.

ಪಾತ್ರದ ವಿಷಯದಲ್ಲಿ ನಿರ್ದೇಶಕರಾಗಿ ನಾಯಕರೂ ಆಗಿರುವ ವಿಜಯ್ ಭಾರದ್ವಾಜ್ ನಾಯಕಿ ಅನ್ವಿತಾ ಸಾಗರ್ (ಪಾರ್ವತಿ)  ಅಭಿನಯ ಚಿತ್ರದುದ್ದಕ್ಕೂ ತೂಗಿಸಿಕೊಂಡು ಹೋಗಿದೆ. ಇದಲ್ಲದೆ  ಶ್ಯಾಮ್ ಸುಂದರ್ ಅವರ ಹಾಸ್ಯ ಚಿತ್ರಕ್ಕೆ ಮತ್ತಷ್ಟು ಕಳೆ ತಂದಿದೆ. ಉಳಿದ ಪಾತ್ರವರ್ಗದವರೂ ಸಹ ತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ.

ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದ್ದು ಚಿತ್ರದಲ್ಲಿ ಬರುವ ಹಾಡುಗಳು ಸಹ ಕಥೆಯೊಂಗಿಗೆ ಜೋಡಿಸಿಕೊಂಡು ನೋಡಿಸಿಕೊಂಡು ಹೋಗುತ್ತದೆ. ಛಾಯಾಗ್ರಹಣ ಉತ್ತಮವಾಗಿದ್ದು ಹಳ್ಳಿ ಮನೆಯ ದೃಶ್ಯಗಳನ್ನು ನೈಜವಾಗಿ ತೋರಿಸಿದ್ದಾರೆ.

ಒಟ್ಟಾರೆ ಯಾವ ಮುಜುಗರವಿಲ್ಲದೆ ಕುಟುಂಬ ಸಮೇತವಾಗಿ ಒಂದು ಮನರಂಜನಾತ್ಮಕ ಚಿತ್ರ ವೀಕ್ಷಿಸುವ  ಇಚ್ಚೆ ಇರುವವರು ಈ ವಾರ “ನಮೋ ವೆಂಕಟೇಶ” ಚಿತ್ರವನ್ನು ವೀಕ್ಷಿಸಬಹುದಾಗಿದೆ.

 

 

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ