–ಶರತ್ ಚಂದ್ರ
ಇತ್ತೀಚಿಗೆ ಹಳೆಯ ಯಶಸ್ವೀ ಚಿತ್ರಗಳ ಮರು ಬಿಡುಗಡೆ ಸ್ಯಾಂಡಲ್ ವುಡ್ ಗೆ ಹೊಸತೇನಲ್ಲ. ಹೊಸ ಕನ್ನಡ ಚಿತ್ರಗಳು ಶುಕ್ರವಾರ ಬಿಡುಗಡೆಯಾದರೆ ಸೋಮವಾರದಂದು ಚಿತ್ರಮಂದಿರದಿಂದ ಎತ್ತಂಗಡಿಯಾಗುವ ಕಾಲವಿದು. ಇಂತಹ ಸಂದರ್ಭದಲ್ಲಿ ಒಂದಷ್ಟು ಜನಪ್ರಿಯ ಸ್ಟಾರ್ ನಟರ ಚಿತ್ರಗಳನ್ನು ಮರು ಬಿಡುಗಡೆ ಮಾಡಿ, ಅವುಗಳು ಯಶಸ್ವಿಯಾಗಿ, ಹೊಸ ಚಿತ್ರಗಳಿಗಿಂತ ಹೆಚ್ಚಿನ ಕಲೆಕ್ಷನ್ ಗಳಿಸಿ ಥೀಯೇಟರ್ ಗಳಿಗೆ ಚೈತನ್ಯ ಮೂಡಿಸಿದೆ.
ಓಂ, ಕರಿಯ ಮುಂತಾದ ಚಿತ್ರಗಳು ಎಷ್ಟು ಬಾರಿ ರೀ ರಿಲೀಸ್ ಆದರೂ ಜನ ಮುಗಿ ಬಿದ್ದು ನೋಡುತ್ತಿದ್ದಾರೆ. ಇತ್ತೀಚೆಗೆ ಪುನೀತ್ ಜನ್ಮದಿನದಂದು ಬಿಡುಗಡೆಯಾದ ‘ಅಪ್ಪು ‘ ಚಿತ್ರ ಕೂಡ ಇದಕ್ಕೆ ಉದಾಹರಣೆ.
ಇದೇ ಏಪ್ರಿಲ್ 24 ರಂದು ಡಾ. ರಾಜಕುಮಾರ್ ಅವರ ಜನ್ಮದಿನೊತ್ಸವ. ದೊಡ್ಮನೆ ಅಭಿಮಾನಿಗಳಿಗೆ ಡಬಲ್ ಧಮಾಕ. ಅಣಾವ್ರ ಮೊಮ್ಮಗಳು ಹಾಗೂ ಶಿವಣ್ಣ ನ ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ನಿರ್ಮಿಸಿರುವ ‘ಫೈರ್ ಫ್ಲೈ ‘ ಹಾಗೂ ಅಣ್ಣಾವ್ರು ನಟಿಸಿದ 150ನೇ ಚಿತ್ರ ‘ಗಂಧದ ಗುಡಿ ‘ಮರು ಬಿಡುಗಡೆಯಾಗಲಿದೆ.
1973 ರಲ್ಲಿ ಎಂ. ಪಿ. ಶಂಕರ್ ನಿರ್ಮಿಸಿದ ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಸಬ್ಜೆಕ್ಟ್ ಹಾಗೂ ಚಿಕ್ಕಂದಿನಲ್ಲಿ ಬೇರ್ಪಟ್ಟು ಬೇರೆ ಬೇರೆ ಪರಿಸರದಲ್ಲಿ ಬೆಳೆಯುವ ಅಣ್ಣ ತಮ್ಮಂದಿರ ಕಥೆ ಹೊಂದಿರುವ ಈ ಚಿತ್ರ, ನಂತರ
ಬೇರೆ ಭಾಷೆಗಳಲ್ಲಿ ಕಾಡಿನ ಸಬ್ಜೆಕ್ಟ್ ಹೊಂದಿರುವ ಸಿನಿಮಾಗಳು ಬರಲು ಪ್ರೇರಣೆಯಾಯಿತು.
ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ವೀರಬಾಹುವಾಗಿ ನಟಿಸಿದ್ದ ಎಂ. ಪಿ. ಶಂಕರ್, ನಿರ್ಮಾಣಕ್ಕೆ ಹೊಸಬರಾದರೂ, ಡಾ. ರಾಜ್ ಈ ಚಿತ್ರ ನಿರ್ಮಿಸಲು ಅವರಿಗೆ ಕಾಲ್ ಶೀಟ್ ನೀಡಿ ಪ್ರೋತ್ಸಾಹ ನೀಡಿದ್ದರು.
ಡಾ. ರಾಜ್ ಅವರ ಅಪ್ಪಟ ಅಭಿಮಾನಿಯಾದ ವಿಷ್ಣುವರ್ಧನ್, ಡಾ. ರಾಜ್ ಜೊತೆ ನಟಿಸುವ ಅವಕಾಶಕ್ಕಾಗಿ ನೆಗೆಟಿವ್ ರೋಲ್ ಆದರೂ ಕೂಡ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರು.
ಆ ಅಹಿತಕರ ಘಟನೆ ನಡೆಯದೆ ಇದ್ದರೆ ಬಹುಷಃ ಈ ಕಾಂಬಿನೇಶನ್ ಲ್ಲಿ ಇನ್ನಷ್ಟು ಚಿತ್ರಗಳು ಬರ್ತಿತ್ತೋ ಏನೋ.
ನಿರ್ದೇಶಕ ವಿಜಯ್ ರೆಡ್ಡಿ ಡಾ. ರಾಜ್ ಗೆ ಆಕ್ಷನ್ ಕಟ್ ಹೇಳಿದ ಮೊದಲ ಚಿತ್ರ ಇದಾಗಿತ್ತು.
ರಾಜನ್ -ನಾಗೇಂದ್ರ ಜೋಡಿ ನೀಡಿರುವ ಹಾಡುಗಳು ಇಂದಿಗೂ ಹಚ್ಚ ಹಸಿರಾಗಿವೆ. ನಾವಾಡುವ ನುಡಿಯೇ ಕನ್ನಡ ನುಡಿ ಹಾಡಂತೂ ಈ ಸಿನಿಮಾ ಬಿಡುಗಡೆಯಾದ ನಂತರ ಕರ್ನಾಟಕದ ಅನಧಿಕೃತ ನಾಡಗೀತೆಯಾಗಿತ್ತು. ಎಂ. ಪಿ. ಶಂಕರ್ ನಿರ್ಮಿಸಿದ ಮುಂದಿನ ಎಲ್ಲಾ ಚಿತ್ರಗಳಿಗೆ ಈ ಜೋಡಿ ಖಾಯಂ ಸಂಗೀತ ನಿರ್ದೇಶಕರಾಗಿದ್ದರು.
ಒಟ್ಟಿನಲ್ಲಿ ಡಾ. ರಾಜ್ ಮತ್ತು ವಿಷ್ಣು ಅಭಿಮಾನಿಗಳು ಏಪ್ರಿಲ್ 24 ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿರುವುದಂತೂ ನಿಜ.