- ರಾಘವೇಂದ್ರ ಅಡಿಗ ಎಚ್ಚೆನ್.
ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾಗಳ ನಿರ್ದೇಶಕ ಹೇಮಂತ್ ಎಂ ರಾವ್ ನಿರ್ಮಾಣದ ಚೊಚ್ಚಲ ಸಿನಿಮಾ ಅಜ್ಞಾತವಾಸಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅವರು ಇದೀಗ ಸುರುಳಿ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮದೇ ದಾಕ್ಷಾಯಿಣಿ ಟಾಕೀಸ್ ನಡಿ ನಿರ್ಮಾಣಗೊಂಡಿರುವ ಈ ಕಿರುಚಿತ್ರ ಮನಮುಟ್ಟುವ ಕಥೆಯನ್ನೊಳಗೊಂಡಿದೆ. ದಾಕ್ಷಾಯಿಣಿ ಟಾಕೀಸ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ 33 ನಿಮಿಷದ ಕಿರುಚಿತ್ರ ಮಾನವೀಯತೆಯನ್ನು ತೆರೆದಿಟ್ಟಿದೆ.
ಯುವ ಸಿನಿಮೋತ್ಸಾಹಿಗಳ ಕನಸಿಗೆ ಹೇಮಂತ್ ರಾವ್ ಬೆಂಬಲವಾಗಿ ನಿಲ್ಲುವ ಕೆಲಸ ಮಾಡುತ್ತಿದ್ದಾರೆ. ತಮ್ಮ ತಾಯಿ ಹೆಸರಿನಡಿ ನಿರ್ಮಿಸಿರುವ ದಾಕ್ಷಾಯಿಣಿ ಟಾಕೀಸ್ ಪ್ರೊಡಕ್ಷನ್ ನಡಿ ವಿಭಿನ್ನ ಬಗೆಯ ಸಿನಿಮಾ ಹಾಗೂ ಕಿರುಚಿತ್ರಗಳನ್ನು ನಿರ್ಮಿಸುವ ಹಾದಿಯಲ್ಲಿದ್ದು, ಅದರ ಭಾಗವಾಗಿ ರೂಪಗೊಂಡಿರುವ ಪ್ರಯತ್ನವೇ ಸುರುಳಿ ಕಿರುಚಿತ್ರ.
ಇತ್ತೀಚೆಗೆ ಈ ಪ್ರೊಡಕ್ಷನ್ ನಡಿ ನಿರ್ಮಾಣಗೊಂಡ ಮೊದಲ ಚಿತ್ರ ಅಜ್ಞಾತವಾಸಿ ಪ್ರೇಕ್ಷಕರು ಹಾಗೂ ವಿಮರ್ಶಕರ ವಲಯದಿಂದ ಒಂದೊಳ್ಳೆ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಅದರ ಬೆನ್ನಲ್ಲೀಗ ಸುರುಳಿ ಕಿರುಚಿತ್ರವನ್ನು ನಿರ್ಮಿಸಿ, ಬಿಡುಗಡೆ ಮಾಡಿದ್ದಾರೆ. ಸುರುಳಿ ಶಾರ್ಟ್ ಮೂವೀ ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
ಸುರುಳಿ ಕಿರುಚಿತ್ರಕ್ಕೆ ಮನು ಅನುರಾಮ್ ಸಾರಥಿ. ಅವರೇ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ಪೊರೇಟ್ ಕೆಲಸ ಮಾಡಿಕೊಂಡೇ ಸಿನಿಮಾ ಗೀಳು ಬೆಳೆಸಿಕೊಂಡಿರುವ ಮನು ಅನುರಾಮ್ ಅವರು ಈಗಾಗಲೇ ಸಾಕಷ್ಟು ಕಿರುಚಿತ್ರ ಹಾಗೂ ವೆಬ್ ಸೀರೀಸ್ ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದಲ್ಲಿ ಮೂಡಿಬಂದಿರುವ ಕಿರುಚಿತ್ರಗಳು ಸಾಕಷ್ಟು ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡು, ತೀರ್ಪುಗಾರರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿವೆ. ಕಿರುಚಿತ್ರ ಸಿನಿಮೋತ್ಸವದಲ್ಲಿ ಹೇಮಂತ್ ರಾವ್ ಹಾಗೂ ಮನು ಅನುರಾಮ್ ಅವರ ಪರಿಚವಾಗುತ್ತದೆ. ಅವರ ಕಿರುಚಿತ್ರ ಇಷ್ಟಪಟ್ಟಿದ್ದ ಹೇಮಂತ್ ಇಂದು ಮನು ಅನುರಾಮ್ ನಿರ್ದೇಶನದ ಸುರುಳಿಗೆ ಜೊತೆಯಾಗಿ ನಿಂತಿದ್ದಾರೆ.
ವಿಶೇಷ ಎಂದರೆ ಸುರುಳಿಗೆ ಸಂಗೀತ ಒದಗಿಸಿರುವುದು ಚರಣ್ ರಾಜ್. ಒಂದೊಳ್ಳೆ ಅದ್ಭುತ ಮ್ಯೂಸಿಕ್ ನ್ನು ಈ ಕಿರು ಚಿತ್ರಕ್ಕೆ ಅವರು ಕೊಟ್ಟಿದ್ದಾರೆ . ಹರ್ಷಿಲ್ ಕೌಶಿಕ್, ನಿಧಿ ಹೆಗ್ಡೆ ಹಾಗೂ ವಂಶಿಧಾರ್ ಭೋಗರಾಜು ಶಾರ್ಟ್ ಮೂವೀಯಲ್ಲಿ ಅಭಿನಯಿಸಿದ್ದಾರೆ. ಅಮಲ್ ಅಂಬಿಕಾ ರಾಜೇಂದ್ರನ್ ಛಾಯಾಗ್ರಹಣ, ಸ್ಯಾಮ್ ವೆಂಕಟ್ ಹಾಗೂ ವರುಣ್ ಗೋಲಿ ಸಂಕಲನ ಕಿರುಚಿತ್ರಕ್ಕಿದೆ.
ನಮ್ಮ ಜೀವನದಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆಗಳು ನಮಗೆ ಗೊತ್ತಿಲ್ಲದೇ ಬೇರೆಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆ ಸುಳಿವು ನಮಗೆ ಇರುವುದಿಲ್ಲ. ಅಂತಹ ಕಥೆಯನ್ನು ಮನು ಅನುರಾಮ್ ಅಚ್ಚುಕಟ್ಟಾಗಿ ದೃಶ್ಯರೂಪಕ್ಕಿಳಿಸಿದ್ದು, ಮನಸ್ಸಿಗೆ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.