- ರಾಘವೇಂದ್ರ ಅಡಿಗ ಎಚ್ಚೆನ್.
ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಮಧ್ಯ ಪ್ರದೇಶದ ಪ್ರವಾಸದಲ್ಲಿದ್ದಾರೆ. ‘ರಾಮಾಯಣ’ ಸಿನಿಮಾ ಶೂಟ್ ಮುಂಬೈನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಯಶ್ ಶಿವನ ಭಕ್ತರು. ಹೀಗಾಗಿ ಈ ದೇವಸ್ಥಾನಕ್ಕೆ ತೆರಳಿ ತಮ್ಮ ಕೋರಿಕೆ ಸಲ್ಲಿಸಿದ್ದಾರೆ. ಆ ಬಳಿಕ ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಜೊತೆ ಯಶ್ ಮಾತುಕತೆ ನಡೆಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಖ್ಯಾತಿ ಹೆಚ್ಚಿದೆ. ‘ಕೆಜಿಎಫ್ 2’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ದೇಶದ ಯಾವುದೇ ಮೂಲೆಗೆ ಹೋದರೂ ಯಶ್ ಅವರನ್ನು ಗುರುತಿಸುತ್ತಾರೆ. ಕೇವಲ ದೇಶ ಮಾತ್ರವಲ್ಲ, ವಿದೇಶದಲ್ಲೂ ಯಶ್ಗೆ ಅಭಿಮಾನಿ ಬಳಗ ಇದೆ. ಇಷ್ಟೆಲ್ಲ ಜನಪ್ರಿಯತೆ ಹೊಂದಿರೋ ಯಶ್ ತಮ್ಮ ರಾಜ್ಯಕ್ಕೆ ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಭೇಟಿಗೆ ಅವಕಾಶ ಕೋರಿದ್ದಾರೆ. ಆ ಬಳಿಕ ಈ ಸೌಹಾರ್ದಯುತ ಭೇಟಿ ನಡೆದಿದೆ.
ಯಶ್ ಹಾಗೂ ಮೋಹನ್ ಯಾದವ್ ಪರಸ್ಪರ ಮಾತುಕತೆ ನಡೆಸುತ್ತಿರೋದು ಫೋಟೋದಲ್ಲಿ ಇದೆ. ಯಶ್ಗೆ ಹಸ್ತಲಾಘ ಮಾಡುವಾಗ ಮೋಹನ್ ಯಾದವ್ ಸಾಕಷ್ಟು ಹಸನ್ಮುಖಿ ಆಗಿದ್ದರು. ಯಶ್ ಅವರನ್ನು ಭೇಟಿ ಮಾಡಿದ ಖುಷಿ ಅವರಲ್ಲಿ ಇತ್ತು. ಸದ್ಯ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.
ರಾವಣನು ಶಿವನ ಭಕ್ತನಾಗಿದ್ದ. ಯಶ್ ಕೂಡ ಶಿವನ ಭಕ್ತರು. ಅವರ ಮನೆಯ ಕುಲದೇವರು ಕೂಡ ಶಿವನೇ. ಈಗ ಯಶ್ ‘ರಾಮಾಯಣ’ದಲ್ಲಿ ರಾವಣನ ಪಾತ್ರ ಮಾಡುತ್ತಿದ್ದು, ಅದಕ್ಕೂ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಯಶ್ ಅವರು ‘ಟಾಕ್ಸಿಕ್’ ಚಿತ್ರದ ಒಂದಷ್ಟು ಪೋರ್ಷನ್ನ ಶೂಟ್ ಪೂರ್ಣಗೊಳಿಸಿದ್ದಾರೆ. ಈಗ ಅವರ ಗಮನ ‘ರಾಮಾಯಣ’ ಚಿತ್ರದ ಮೇಲೆ ಇದೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ‘ಕೆಜಿಎಫ್ 3’ ಕೆಲಸಗಳು ಶೀಘ್ರವೇ ಆರಂಭ ಆಗಲಿದೆ ಎನ್ನುವ ಸೂಚನೆ ಕೊಟ್ಟಿದ್ದಾರೆ. ಈ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕ ಯಶ್ ಅವರು ‘ಕೆಜಿಎಫ್ 3’ ಕೆಲಸಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.