ಭಾರತದಲ್ಲಿ ಚಿತ್ರ ನಿರ್ಮಾಣ ಅಂತ ಆರಂಭಗೊಂಡಿದ್ದೇ 1913ರಲ್ಲಿ. ಮೊದಲ ಮೂಕಿ ಕಪ್ಪುಬಿಳುಪು ಚಿತ್ರ `ರಾಜ ಹರಿಶ್ಚಂದ್ರ’ ಭಾರತೀಯ ಸಿನಿಮಾಗಳಲ್ಲಿ ಆರಂಭದಿಂದಲೇ ಬೆಳ್ಳಿಪರದೆಯಲ್ಲಿ ಭಾರತೀಯ ಹೆಣ್ಣನ್ನು ಬಲು ಅಸಹಾಯಕಿ, ಶೋಷಿತೆ, ಕಣ್ಣೀರು ಹರಿಸುವವಳು, ದೈನ್ಯ ಮೂರ್ತಿ, ಅಪಾರ ದೈಭಕ್ತಿಯುಳ್ಳವಳು, ಸದಾ ಸಂಪ್ರದಾಯಸ್ಥೆ, ಅತ್ತೆಯ ಅಡಿಯಾಳಾಗಿ ಬದುಕುವವಳು, ಎಂಥ ಅಪಮಾನವಾದರೂ ಸಹಿಸಿ ತೆಪ್ಪಗಿರುವಳು….. ಗಂಡ, ಮನೆ, ಮಕ್ಕಳಷ್ಟೇ ತನ್ನ ಪ್ರಪಂಚ ಎಂಬಂತೆ ಅವಳನ್ನು ಬಿಂಬಿಸಲಾಗಿತ್ತು. ಆದರೆ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮ್ಮ ಭಾರತೀಯ ಸಮಾಜದಲ್ಲಿ, ದೇಶದ ಸ್ವಾತಂತ್ರ್ಯ ಚಳುವಳಿಗಾಗಿ ಗಂಡಸರಿಗಿಂತ 2 ಹೆಜ್ಜೆ ಸದಾ ಮುಂದಿರುತ್ತಿದ್ದ ಹೆಂಗಸರಿಗೇನೂ ಕೊರತೆ ಇರಲಿಲ್ಲ.
ರಾಣಿ ಲಕ್ಷ್ಮೀಭಾಯಿ, ಬೇಗಂ ಹಝರತ್ ಮೆಹಲ್, ಸಾವಿತ್ರಿ ಬಾಯಿಪುಲೆ, ಕಸ್ತೂರಬಾ ಗಾಂಧಿ, ವಿಜಯಲಕ್ಷ್ಮಿ ಪಂಡಿತ್, ಕಮಲಾ ನೆಹರೂ, ದುರ್ಗಾಬಾಯಿ ದೇಶ್ ಮುಖ್, ಸುಚೇತಾ ಕೃಪಾನಿ, ಅರುಣಾ ಆಸಿಫ್, ಸರೋಜಿನಿ ನಾಯ್ಡು……. ಹೀಗೆ ನಾಡಿನುದ್ದಕ್ಕೂ ಹೇಳುತ್ತಲೇ ಹೋಗಬಹುದು. ಇವರುಗಳ ಸಂಘರ್ಷಮಯ ಜೀವನವನ್ನು ಅವರ ವೀರತೆಯನ್ನು ಬೆಳ್ಳಿ ಪರದೆಯಲ್ಲಿ ಆ ಕಾಲದಲ್ಲೇ ತೋರಿಸಬೇಕಿತ್ತು, ಆಗ ಇಡೀ ದೇಶ ಈ ವೀರ ನಾರಿಯರ ಕುರಿತಾಗಿ ಸ್ಪಷ್ಟ ಅರಿವು ಹೊಂದಲು ಸಾಧ್ಯವಾಗುತ್ತಿತ್ತು, ಆದರೆ ಹಾಗೇನೂ ಆಗಲಿಲ್ಲ. ಕನ್ನಡದಲ್ಲೂ ಕಿತ್ತೂರು ಚನ್ನಮ್ಮ ಬಿಟ್ಟರೆ ಬೇರೆ ಚಿತ್ರಗಳೇ, ಇಲ್ಲ ಎನ್ನಬಹುದು. ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮನನ್ನು ಯಾರೂ ನೆನೆಸಿಕೊಳ್ಳಲೇ ಇಲ್ಲ.
1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಮೊದಲ ಮಹಿಳೆ ಎಂದರೆ ಬೇಗಂ ಹಝರತ್ ಮೆಹಲ್. ಈಕೆ ಇಡೀ ಅರ್ಧ ಪ್ರದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ್ದಳು. ಆದರೆ ಈಕೆ ಕುರಿತು ಇದುವರೆಗೂ ಚಿತ್ರ ಬರಲೇ ಇಲ್ಲ. ರಾಣಿ ಲಕ್ಷ್ಮಿಬಾಯಿ ಬಗ್ಗೆ ದೇಶಕ್ಕೆ ಸ್ವಾತಂತ್ರ್ಯ ದೊರೆತ 7 ದಶಕಗಳ ಬಳಿಕ `ಮಣಿಕರ್ಣಿಕಾ’ ಸಿದ್ಧವಾಯಿತಷ್ಟೆ.
ಹೆಣ್ಣಿನ ಹೀನಾಯ ಸ್ಥಿತಿ
ಒಂದು ವಿಷಯವಂತೂ ನಿಜ, ಭಾರತದಲ್ಲಿ ಸಿನಿಮಾ ಅಂತ ಶುರುವಾದಾಗ, ಜನ ಬಹಳ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರು. ಹೆಂಗಸರ ಸ್ಥಿತಿಯಂತೂ ಶೋಚನೀಯವಾಗಿತ್ತು ಎಂದೇ ಹೇಳಬೇಕು. ಸಾಮಾನ್ಯ ಹೆಣ್ಣು ಕೇವಲ ಅಡುಗೆಮನೆ, ಮನೆಗೆಲಸ, ಮಕ್ಕಳ ಪಾಲನೆ, ಹಿರಿಯರ ಸೇವೆ….. ಇಷ್ಟಕ್ಕೆ ಸೀಮಿತವಾಗಿತ್ತು. ಹೆಣ್ಣು ಊರ ಗೌಡನ, ಅತಿ ಶ್ರೀಮಂತನ ದೌರ್ಜನ್ಯಗಳಿಗೆ ಒಳಗಾಗಿ, ರೇಪ್ ಆಗುತ್ತಿದ್ದಳು. ಅಂದಿನ ಸಾಂಸಾರಿಕ ಚಿತ್ರಗಳಲ್ಲಿ ಹೆಣ್ಣನ್ನು ಈ ಸ್ಥಿತಿಯಲ್ಲೇ ತೋರಿಸಲಾಗಿತ್ತು.
ಬದಲಾವಣೆಯ ಆರಂಭ
ಸ್ವಾತಂತ್ರಾ ನಂತರ 1957ರಲ್ಲಿ `ಮದರ್ ಇಂಡಿಯಾ’ ಚಿತ್ರದಲ್ಲಿ ಹೆಣ್ಣಿನ ಭಾವುಕತೆ, ಪರಿಶ್ರಮ, ಆಕ್ರೋಶಗಳನ್ನು ಪದರ ಪದರವಾಗಿ ಬಿಂಬಿಸಲಾಗಿತ್ತು. ಈ ಚಿತ್ರ ಭಾರತೀಯ ಸಿನಿಮಾಗಳ ಆರಂಭಿಕ ಸ್ತ್ರೀಪ್ರಧಾನ ಕ್ಲಾಸಿಕ್ ಚಿತ್ರ ಎನಿಸಿತು. ಈ ಚಿತ್ರದಲ್ಲಿ ನಟಿ ನರ್ಗಿಸ್ ಒಬ್ಬ ಬಡ ರೈತ ಮಹಿಳೆ ರಾಧಾಳ ಪಾತ್ರ ನಿರ್ವಹಿಸಿದ್ದರು. ತನ್ನ ಇಬ್ಬರು ಮಕ್ಕಳನ್ನು ಸಾಕಿಸಲಹಲು ರಾಧಾ ಪಡುವ ಪಾಡು ಅಷ್ಟಿಷ್ಟಲ್ಲ. ಅದಕ್ಕಾಗಿ ಇಡೀ ಪ್ರಪಂಚದ ವಿರುದ್ಧ ತಿರುಗಿ ಬೀಳುತ್ತಾಳೆ. ಕೊನೆಗೆ ಹಳ್ಳಿಯವರು ಅವಳನ್ನು ನ್ಯಾಯ, ಸತ್ಯಗಳ ದೇವಿ ಎಂದೇ ಭಾವಿಸುತ್ತಾರೆ.
ಕೊನೆಗೆ ಅವಳು ತನ್ನ ನಂಬಿಕೆಗಳಿಗೆ ಕಟ್ಟುಬಿದ್ದು, ದಾರಿ ತಪ್ಪಿದ ಹೆತ್ತ ಮಗನನ್ನೇ ಗುಂಡಿಟ್ಟು ಕೊಂದುಬಿಡುತ್ತಾಳೆ.
`ಮದರ ಇಂಡಿಯಾ’ ಚಿತ್ರ ಹೆಣ್ಣಿನ `ಅಬಲೆ’ ಎಂಬ ಛವಿ ಹೊಡೆದುಹಾಕಿ, ಅನ್ಯಾಯ, ಶೋಷಣೆಗಳ ವಿರುದ್ಧ ಸಿಡಿದೇಳುವ ಅವಳ ಹೊಸ ರೂಪವನ್ನು ಇಲ್ಲಿ ಪರಿಚಯಿಸಿತು. ಈ ಚಿತ್ರ ಇಂದಿಗೂ ಪ್ರಸ್ತುತ, ನೋಡುಗರ ಮೈ ನವಿರೇಳುವಂತೆ ಮಾಡಬಲ್ಲದು. ಈ ಚಿತ್ರದಲ್ಲೇನೋ ನರ್ಗಿಸ್ ಪಾತ್ರಕ್ಕೆ ನ್ಯಾಯ ದೊರಕಿದಂತೆ ತೋರಿಸಲಾಗಿದೆ. ಕೊನೆಯಲ್ಲಿ ಅನಿವಾರ್ಯ ಎಂಬಂತೆ, ಹೆಣ್ಣು ಎಂಥದೇ ವರ್ಣ ವ್ಯವಸ್ಥೆ ಇರಲಿ, ಅದನ್ನು ಸಶಕ್ತಗೊಳಿಸಲೇಬೇಕು, ಅದಕ್ಕಾಗಿ ಅವಳು ತನ್ನ ಮಗನನ್ನೇ ಕೊನೆಗಾಣಿಸಿದರೂ ಪರವಾಗಿಲ್ಲ, ಆಕೆ ಮಹಾನ್ ಎನಿಸುತ್ತಾಳೆ.
ಮುಂದುವರಿದ ಹೆಣ್ಣಿನ ಸಂಘರ್ಷಗಳು
ನಿಧಾನವಾಗಿ ಸ್ತ್ರೀಪ್ರಧಾನ ಚಿತ್ರಗಳು ಎಲ್ಲಾ ಭಾಷೆಗಳಲ್ಲೂ ಬರತೊಡಗಿದವು. ಹಾಗಾಗಿಯೇ ಕನ್ನಡದಲ್ಲಿ ನಿರ್ದೇಶಕ ಪುಟ್ಟಣ್ಣ, ಮಹಿಳಾ ಕಾದಂಬರಿ ಆಧಾರಿತ ಕಥೆಗಳನ್ನೇ ಮೂಲಾಧಾರ ಆಗಿರಿಸಿಕೊಂಡು, ನಾಯಕಿ ಪ್ರಧಾನ ಚಿತ್ರಗಳಿಗೆ ಒತ್ತು ನೀಡುತ್ತಾ ಗೆಜ್ಜೆಪೂಜೆ, ಬೆಳ್ಳಿಮೋಡ, ಕಪ್ಪುಬಿಳುಪು, ಶುಭಮಂಗಳಾ, ಶರಪಂಜರ, ಕಥಾಸಂಗಮ, ರಂಗನಾಯಕಿಯಂಥ ಸಾಲು ಸಾಲು ಸ್ತ್ರೀಪ್ರಧಾನ ಚಿತ್ರ ನೀಡುವಲ್ಲಿ ಅಗ್ರಗಣ್ಯ ಎನಿಸಿದರು.
1993ರಲ್ಲಿ ಬಾಲಿವುಡ್ ನಲ್ಲಿ `ದಾಮಿನಿ’ ಚಿತ್ರ ಹೊಸ ದಾಖಲೆಯನ್ನೇ ನಿರ್ಮಿಸಿತು. ನಾಯಕಿ ಪಾತ್ರವನ್ನು ಮೀನಾಕ್ಷಿ ಶೇಷಾದ್ರಿ ನಿರ್ವಹಿಸಿದ್ದಳು. ಇಲ್ಲಿ ನಾಯಕಿ ಶ್ರೀಮಂತ ಕುಟುಂಬದ ಸೊಸೆ. ತನ್ನ ಮೈದುನ ಕೆಲಸದವಳನ್ನು ರೇಪ್ ಮಾಡಿದ್ದನ್ನು ಈಕೆ ಆಕಸ್ಮಿಕವಾಗಿ ನೋಡಿಬಿಡುತ್ತಾಳೆ. ಆ ಬಡ ಹೆಣ್ಣಿಗೆ ನ್ಯಾಯ ದೊರಕಬೇಕು, ಅಪರಾಧಿಗೆ ಶಿಕ್ಷೆ ಆಗಲೇಬೇಕು ಎಂದು ದುಷ್ಟ ವಿಚಾರಗಳನ್ನು ದಮನ ಮಾಡಲು ಮುಂದಾಗುತ್ತಾಳೆ ಈ ದಾಮಿನಿ.
ಆದರೆ ಅವಳ ಕುಟುಂಬದವರೆಲ್ಲ ಇದಕ್ಕೆ ವಿರುದ್ಧ ತಿರುಗಿಬೀಳುತ್ತಾರೆ. ತನ್ನ ಮದುವೆಯೇ ಮುರಿದುಬಿದ್ದರೂ ಸರಿ, ತಾನು ನ್ಯಾಯ ಮಾರ್ಗ ಬಿಡಲಾರೆ ಎಂಬುದು ಇವಳ ಅಚಲ ನಿರ್ಧಾರ, ಮನೆ ಬಿಟ್ಟು ಹೊರ ಬರುತ್ತಾಳೆ. ಆದರೆ ಅತ್ಯಾಚಾರಕ್ಕೆ ಒಳಗಾದ ಆ ಹೆಣ್ಣು ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಯಲ್ಲೇ ಸಾಯುತ್ತಾಳೆ. ಆದರೂ ಒಬ್ಬ ವಕೀಲರ ನೆರವಿನಿಂದ, ಅಪರಾಧಿ ಕಂಬಿ ಎಣಿಸುವಂತೆ ಮಾಡುವಲ್ಲಿ ದಾಮಿನಿ ಯಶಸ್ವಿ ಆಗುತ್ತಾಳೆ. ಅದೇ ರೀತಿ ಹೆಣ್ಣು ಕೋಮಲೆ, ಅಬಲೆ, ಅಳುಬುರುಕಿ ಎಂಬ ಸಂಕೋಲೆ ಮುರಿಯಲೆಂದೇ ಬಂದ ಚಿತ್ರ 1994ರ `ಬ್ಯಾಂಡಿಟ್ ಕ್ವೀನ್.’ ಮಹಿಳಾ ಡಾಕು, ಲೂಟಿ ಮಾಡುವ ಫೂಲನ್ ದೇವಿಯ ನೈಜ ಜೀವನದ ಕಥೆ ಆಧರಿಸಿದ ಚಿತ್ರವಿದು. ಸೀಮಾ ಬಿಸ್ವಾಸ್ ಇಲ್ಲಿ ಫೂಲನ್ ದೇವಿಯ ಪಾತ್ರ ನಿರ್ವಹಿಸಿದ್ದಳು. ಮೊದಲ ಬಾರಿ ಭಾರತೀಯ ಹೆಣ್ಣೊಬ್ಬಳು ಪರದೆಯಲ್ಲಿ ಅವಾಚ್ಯ ಶಬ್ದ ಬಳಸುತ್ತಾ, ಲೂಟಿ, ದಂಗೆಯಲ್ಲಿ ಮುಳುಗಿ ಕಂಡಲ್ಲಿ ಗುಂಡಿಕ್ಕುವ ಚಿತ್ರ ಕಾಣುವಂತಾಯಿತು.
ಚದುರಿದ ಚಿತ್ರಗಳ ಹೆಣ್ಣಿನ ಕಥೆ
ಆಂಧ್ರ ಮೂಲದ ಹಳ್ಳಿಯೊಂದರಿಂದ ಬಂದ ಕಪ್ಪು ಚೆಲುವೆ ಸಿಸ್ಕ್ ಸ್ಮಿತಾ, ತನ್ನ ಬಡತನ ನಿವಾರಣೆಗಾಗಿ ಚಿತ್ರರಂಗ ಪ್ರವೇಶಿಸಿ ಕ್ಯಾಬರೆ ಹಾಡುಗಳ ಸೆಕ್ಸ್ ಬಾಂಬ್ ಎನಿಸಿ, ಇಡೀ ದಕ್ಷಿಣ ಚಿತ್ರರಂಗದ ನಿರ್ಮಾಪಕರನ್ನು ಬೆರಳ ತುದಿಯಲ್ಲಿ ಕುಣಿಸುವ ಮಟ್ಟಕ್ಕೆ ಮೇಲೇರಿದಳು. ಇವಳದೇ ಬಯೋಪಿಕ್ `ಡರ್ಟಿ ಪಿಕ್ಚರ್’ ಆಗಿ ಚಿತ್ರವಾದಾಗ, ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾಳ ಸಂಘರ್ಷವನ್ನು ಯಥಾವತ್ತಾಗಿ ಬೆಳ್ಳಿ ತೆರೆಗೆ ತರುವಲ್ಲಿ ಯಶಸ್ವಿ ಆಗಿದ್ದಳು. ಕೊನೆಗೆ ಮದಿರೆಗೆ ದಾಸಿಯಾಗಿ ಸ್ಮಿತಾ ದಾರುಣವಾಗಿ ಸಾವು ಕಂಡದ್ದನ್ನೂ ಇಲ್ಲಿ ಯಥಾವತ್ತಾಗಿ ತೋರಿಸಲಾಗಿತ್ತು.
ಈ ಚಿತ್ರ ಸ್ತ್ರೀ ಪ್ರಧಾನವಾಗಿದ್ದರೂ ಒಬ್ಬ ಹತಾಶ ಹೆಣ್ಣಿನ, ಮುರಿದ ಮನಸ್ಸಿನ, ಸೇಡು ಪ್ರತೀಕಾರಗಳ ಜ್ವಾಲೆಯಲ್ಲಿ ಉರಿಯುತ್ತಿರುವ ಹೆಣ್ಣಿನ ತುಡಿತಗಳಾಗಿವೆ. ಬಹುತೇಕ ಸ್ತ್ರೀ ಪ್ರಧಾನ ಚಿತ್ರಗಳಲ್ಲಿ ಹೆಣ್ಣನ್ನು ಹತಾಶಳನ್ನಾಗಿ ಚಿತ್ರಿಸಿ ಸಾವು ಕಂಡಳು ಎಂದೇ ತೋರಿಸಲಾಗಿದೆ, ಇಡೀ ಚಿತ್ರದಲ್ಲಿ ಅವಳು ಗೆಲುವು ಸಾಧಿಸಿರಬಹುದು, ಅದು ಬೇರೆ ಮಾತು.
ಅದೇ ತರಹ ವಿದ್ಯಾಳ ಮತ್ತೊಂದು ಚಿತ್ರ `ಬೇಬಿ ಜಾಸೂಸ್’ನಲ್ಲಿ ಈಕೆ ಲೇಡಿ ಡಿಟೆಕ್ಟಿವ್ ಆಗಿದ್ದಳು. ಮದುವೆಯಾಗಿ ಗಂಡನ ಮನೆ ಬೆಳಗಲಷ್ಟೇ ಅಲ್ಲ ಹೆಣ್ಣು ಎಂದು, ಇಲ್ಲಿ ಇವಳು ಮನೆಯಿಂದ ಹೊರ ಹೊರಟು ಪತ್ತೇದಾರಿಕೆ ನಡೆಸಿ, ಯಶಸ್ವಿಯಾಗಿ ಹಣ, ಹೆಸರು ಗಳಿಸುತ್ತಾಳೆ. ಮಹಿಳಾ ಪತ್ತೇದಾರಿಕೆಯ ಕುರಿತ ಏಕೈಕ ಹಿಂದಿ ಚಿತ್ರವಾದ ಇದು, ಸಡಿಲ ಜಾಳು ಜಾಳಾದ ಕಥಾ ಹಂದರದಿಂದಾಗಿ ಸಕ್ಸೆಸ್ ಆಗಲಿಲ್ಲ. ವಿದ್ಯಾ ಇಂಥ ಚಿತ್ರ ಮತ್ತೆ ಒಪ್ಪಲಿಲ್ಲ.
ನಿರ್ಲಕ್ಷ್ಯ ಧೋರಣೆ
ಬಾಲಿವುಡ್ ನಲ್ಲಿ ತಯಾರಾದ ಹೆಣ್ಣಿನ ಸಂಘರ್ಷಗಳ ಆಧಾರಿತ ಚಿತ್ರಗಳು ಕೇವಲ ಬೆರಳೆಣಿಕೆಯಷ್ಟು. ಅಬಲೆಯ ಅವತಾರ ಕಳಚಿಟ್ಟು ಪರಂಪರಾಗತ ಸಂಪ್ರದಾಯದ ಸಂಕೋಲೆ ಮುರಿದು, ತಮ್ಮದೇ ಗಟ್ಟಿ ನಿಲುವಿನಲ್ಲಿ ನಿಲ್ಲುವಂಥ ಹೆಣ್ಣಿನ ಚಿತ್ರಗಳು ಕ್ರಮೇಣ ಮುಂದುವರಿದವು, ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದವು. ಹೆಂಗಸರಿಗೆ ಇಂಥ ಚಿತ್ರಗಳು ಸ್ಛೂರ್ತಿದಾಯಕ ಎನಿಸಿದವು. ಈ ನಿಟ್ಟಿನಲ್ಲಿ ಗಟ್ಟಿಯಾಗಿ ನಿಲ್ಲುವ ಕನ್ನಡದ ಚಿತ್ರ `ಫಣಿಯಮ್ಮ.’ ಮೂಲ ಕಥೆ ಎಂ.ಕೆ. ಇಂದಿರಾ, ಫಣಿಯಮ್ಮನ ಗಟ್ಟಿ ಪಾತ್ರದಲ್ಲಿ ನಟಿಸಿದವರು ಎಲ್.ವಿ. ಶಾರದಾ, ಇಡೀ ಚಿತ್ರದ ಹೊಣೆ ಹೊತ್ತ ನಿರ್ದೇಶಕಿ ಪ್ರೇಮಾ ಕಾರಂತ್! ಎಲ್ಲವನ್ನೂ ಹೆಣ್ಣೇ ನಿರ್ವಹಿಸಬಲ್ಲಳು ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಯಿತು.
ಲೇಡಿ ರೆಸ್ಲರ್ ಕಥೆ ಆಧರಿಸಿದ `ದಬಂಗ್’ ಚಿತ್ರದಲ್ಲಿ ಇಬ್ಬರು ಹೆಣ್ಣುಮಕ್ಕಳು ಹಾಗೂ ಅವರ ತಂದೆಯ ಸಂಘರ್ಷವನ್ನು ತೋರಿಸಲಾಗಿದೆ. ಈ ಚಿತ್ರ ಗೀತಾಬಬಿತಾರ ನಿಜ ಜೀವನದ ಕಥೆ ಆಧರಿಸಿದ್ದು. ಈ ಪಾತ್ರಗಳನ್ನು ಫಾತಿಮಾ ಸನಾ ಹಾಗೂ ಸಾನ್ಯಾ ಮಲ್ಹೋತ್ರಾ ನಿಭಾಯಿಸಿದ್ದರು. ಆಮೀರ್ ಖಾನ್ ಇವರ ತಂದೆ.
ಸಮಸ್ಯೆ ಪರಿಹಾರ
`ಶೇರನಿ’ ಕಳೆದ ವರ್ಷ OTTಯಲ್ಲಿ ಉತ್ತಮ ಹೆಸರು ಗಳಿಸಿದ ಚಿತ್ರ. ವಿದ್ಯಾಬಾಲನ್ ಈ ಚಿತ್ರದ ನಾಯಕಿ. ಈ ಚಿತ್ರ ಮಾನವ ಪ್ರಾಣಿಗಳ ಸಂಘರ್ಷದ ಕುರಿತಾದುದು. ಇದರಲ್ಲಿ ವಿದ್ಯಾ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದು, ಮಹಾ ಅಪಾಯಕಾರಿ ನರಭಕ್ಷಕ ಹುಲಿಯೊಂದನ್ನು ಹಿಡಿದು ಹಾಕುವ ಸವಾಲೆನಿಸುವ ಪಾತ್ರದಲ್ಲಿ ಗೆದ್ದಿದ್ದಾಳೆ. ಅದಂತೂ ಹಲವು ಜನರ ಆಹುತಿ ತೆಗೆದುಕೊಂಡಿತ್ತು. ಆದರೂ ಅದನ್ನು ಸಾಯಿಸಬಾರದು ಎಂಬುದು ಈಕೆಯ ನಿಲುವು. ಅದನ್ನು ಜೀವಂತ ಹಿಡಿಯಲು ಉಪಾಯ ಹೂಡುತ್ತಾಳೆ. ಯಾವ ಹುಲಿ, ಸಿಂಹಗಳೂ ತಂತಾವೇ ನರಭಕ್ಷಕ ಆಗುವುದಿಲ್ಲ, ಬಹಳ ಹಸಿದಿರುತ್ತವೆ ಎನ್ನುತ್ತಾಳೆ. ಒಬ್ಬ ಅರಣ್ಯಾಧಿಕಾರಿಯಾಗಿ, ಪ್ರಾಣಿಗಳ ಜೀವ ಉಳಿಸಲು, ಹುಲಿ, ಚಿರತೆಗಳು ನರಭಕ್ಷಕಗಳಾಗುವುದಿಲ್ಲ ಎಂಬ ವಾದ ಸರಿ. ಹಸಿವು ತೀರಲು ಬೇರೆ ದಾರಿಯೇ ಇಲ್ಲದಾಗ ಮಾತ್ರ, ಅದು ಹತ್ತಿರದ ಮನುಷ್ಯರನ್ನು ಕಬಳಿಸಬಲ್ಲದು. ಕಾಡು ಪ್ರಾಣಿಗಳಿಂದ ಅದರ ಕಾಡನ್ನು ಕಿತ್ತುಕೊಳ್ಳದಿದ್ದರೆ, ಕಾಡು ನಾಡು ಎರಡೂ ಸುರಕ್ಷಿತ ಎಂಬುದೇ ಇಲ್ಲಿನ ಟ್ಯಾಗ್ ಲೈನ್.
ಮಹಿಳಾ ಅರಣ್ಯಾಧಿಕಾರಿಯಾಗಿ ವಿದ್ಯಾ ಇಲ್ಲಿ ಮಿಂಚಿದ್ದಾಳೆ! ಆಕೆ ಇಲ್ಲಿ ಸಾರ್ವಜನಿಕರ ದೂರು, ಬೇಟೆಗಾರರ ಕಿರುಕುಳ, ಹಳ್ಳಿಯ ರಾಜಕೀಯ, ಇಲಾಖೆಯ ರಾಜನೀತಿ, ಪುರುಷ ಸಮಾಜದ ವ್ಯಂಗ್ಯೋಕ್ತಿ….. ಇತ್ಯಾದಿಗಳನ್ನು ಸಹಿಸುತ್ತಲೇ ತನ್ನ ಕರ್ತವ್ಯ, ನಿಷ್ಠೆ ಮೆರೆಯಬೇಕಿದೆ. ಅಂತರ್ಮುಖಿ ಆದರೂ ಈಕೆ ಅಬಲೆಯಲ್ಲ. ಇವಳೂ ಕಾಡಿನಲ್ಲಿದ್ದು ಇದ್ದೂ, ಹೆಣ್ಣು ಹುಲಿಯೇ ಆಗಿಹೋಗಿರುತ್ತಾಳೆ! ಹೆಣ್ಣು ಹುಲಿಗೆ ತಾನು ಮುಂದುವರಿಯಬೇಕಾದ ಮಾರ್ಗ ಗೊತ್ತು, ಆದರೆ ಮಾನವರ ಕಿರುಕುಳ ಎದುರಿಸಲೇಬೇಕು. ಸಾಮಾಜಿಕ, ರಾಜಕೀಯದ ಸಮಸ್ಯೆಗಳನ್ನು ಇವಳು ಎದುರಿಸಿದ್ದು ಹೇಗೆ…..? ಈ ಎಲ್ಲದರ ಉತ್ತರವೇ ಈ ಚಿತ್ರ. ಇದೇ ತರಹ ವಿದ್ಯಾಳಿಗೆ ಹೆಸರು ತಂದುಕೊಟ್ಟ ಮತ್ತೊಂದು ಯಶಸ್ವಿ ಚಿತ್ರ `ಶಕುಂತಸಾ ದೇವಿ.’ ಭಾರತದ ಹ್ಯೂಮನ್ ಕಂಪ್ಯೂಟರ್ ಎನಿಸಿದ್ದ ಬೆಂಗಳೂರಿನ ಮಹಾ ಗಣಿತಜ್ಞೆ ಶಕುಂತಲಾರ ಕುರಿತ ಬಯೋಪಿಕ್ ಇದು.
ಕನಸು ನನಸಾಗಿಸುವ ಕಥೆ
ಕಂಗನಾ ರಾಣಾವತ್ ನಟಿಸಿದ ತಮಿಳುನಾಡಿನ ರಾಜಕೀಯದ ಕೈಗನ್ನಡಿಯಾದ ಜಯಲಲಿತಾರ ಬಯೋಪಿಕ್ ಆಧರಿಸಿದ `ತಲೈವಿ’ ಚಿತ್ರ ಉತ್ತಮ ಯಶಸ್ವೀ ಚಿತ್ರ ಎನಿಸಿತು. ಜಯಲಲಿತಾರ ಜೀವನದ ಎಲ್ಲಾ ಏರಿಳಿತಗಳನ್ನೂ ಇದು ಸ್ಪಷ್ಟವಾಗಿ ತೋರಿಸುತ್ತದೆ. ಭಾರತದ ರಾಜಕೀಯದಲ್ಲಿ ಹೆಣ್ಣು ಯಶಸ್ವಿಯಾಗಲು ಏನೆಲ್ಲ ಪಾಡುಪಡಬೇಕು ಎಂದು ಸಕಾರಾತ್ಮಕವಾಗಿ ಇಲ್ಲಿ ತೋರಿಸಲಾಗಿದೆ.
`ಸೈನಾ’ ಚಿತ್ರ ಸಹ ಭಾರತದ ಉನ್ನತ ಕ್ರೀಡಾಪಟು ಸೈನಾ ನೇಹ್ವಾಲ್ ರ ಜೀವನ ಆಧರಿಸಿದ ಬಯೋಪಿಕ್, ಕಳೆದ ವರ್ಷದ ಮತ್ತೊಂದು ಯಶಸ್ವಿ ಚಿತ್ರ. ಇಲ್ಲಿ ಪರಿಣೀತಿ ಚೋಪ್ರಾ ಸೈನಾ ಆಗಿದ್ದಳು. ಪದ್ಮಶ್ರೀ, ಅರ್ಜುನ ಅವಾರ್ಡ್, ರಾಜೀವ್ ಗಾಂಧಿ ಖೇಲ್ ರತ್ನಗಳಂಥ ಪ್ರಶಸ್ತಿಗಳನ್ನು ಪಡೆದ ಸೈನಾ, ಇಡೀ ವಿಶ್ವಾದ್ಯಂತ ಭಾರತೀಯ ಮಹಿಳಾ ಕ್ರೀಡಾಪಟುಗಳು ತಲೆಯೆತ್ತಿ ನಿಲ್ಲುವಂತೆ ಮಾಡಿದ ಹೆಣ್ಣು ಎಂದರೆ ಉತ್ಪ್ರೇಕ್ಷೆಯಲ್ಲ.
ಅದೇ ತರಹ ಆ್ಯಸಿಡ್ ಅಟ್ಯಾಕ್ ಸಂತ್ರಸ್ತೆಯ ಕುರಿತಾದ `ಛಪಾಕ್’ ಚಿತ್ರ 2020ರ ಉತ್ತಮ ಚಿತ್ರ ಎನಿಸಿತು. ಇಲ್ಲಿ ದೀಪಿಕಾ ಪಡುಕೋಣೆ ಆ್ಯಸಿಡ್ ಅಟ್ಯಾಕ್ ವಿಕ್ಟಿಮ್ ಲಕ್ಷ್ಮಿಯ ಸಂಘರ್ಷವನ್ನು ನೈಜವಾಗಿ ಬಿಂಬಿಸಿದ್ದಾಳೆ. 15ರ ಬಾಲೆ ಲಕ್ಷ್ಮಿಯ ಮೇಲೆ ತಲೆ ಕೆಟ್ಟವನೊಬ್ಬ ಎಸೆದ ಆ್ಯಸಿಡ್ ದಾಳಿಯಿಂದಾಗಿ ಆಕೆ ಜೀವನವಿಡೀ ಹೇಗೆ ಹೋರಾಡ ಬೇಕಾಯಿತು ಎಂದು ಇಲ್ಲಿ ತೋರಿಸಲಾಗಿದೆ. ಸಾವಿನ ಅಂಚು ಕಂಡಿದ್ದ ಲಕ್ಷ್ಮಿ, ಬದುಕಿ ಆಸ್ಪತ್ರೆಯಿಂದ ಸಾಮಾಜಿಕ ಜೀವನ ಕಂಡಿದ್ದೇ ಹೆಚ್ಚು. ಅಲ್ಲಿಂದ ಸಾಮಾಜಿಕ ಕಷ್ಟಕೋಟಲೆ ಎದುರಿಸುತ್ತಾ, ಕೋರ್ಟಿನ ಕಟಕಟೆ ಏರಿ ನ್ಯಾಯಕ್ಕಾಗಿ ಹೋರಾಡುತ್ತಾ ಬದುಕು ಕಂಡಳು. ಈ ಚಿತ್ರದಲ್ಲಿ ಈಕೆ ಎದುರಿಸಿದ ಪಡಿಪಾಟಲು ಕಂಡ ನಂತರ, ಇಡೀ ದೇಶದಲ್ಲಿ ಎಲ್ಲೂ ಹಿಂದಿನಂತೆ ಫ್ರೀಯಾಗಿ ಆ್ಯಸಿಡ್ ಮಾರಾಟಕ್ಕೆ ಅವಕಾಶವಿಲ್ಲದೆ, ಎಷ್ಟೋ ಹೆಣ್ಣುಮಕ್ಕಳು ಬಚಾವಾದರು.
ಅದೇ ವರ್ಷ ತೆರೆಕಂಡ ಮತ್ತೊಂದು ಚಿತ್ರವೇ `ಗುಂಜನ್ ಸಕ್ಸೆನಾ.’ ಒಬ್ಬ ದಿಟ್ಟ, ಕರ್ತವ್ಯನಿಷ್ಠ, ವಾಯುಸೇನಾ ಅಧಿಕಾರಿ ಗುಂಜನ್ ರ ಕಥೆ ಇದು. ಮಾಜಿ ಹೆಲಿಕಾಪ್ಟರ್ ಪೈಲಟ್ ಆದ ಈಕೆ `ಕಾರ್ಗಿಲ್ ಗರ್ಲ್’ ಎಂದೇ ಪ್ರಸಿದ್ಧಿ. 1994ರಲ್ಲಿ ಇಂಡಿಯನ್‌ಏರ್ ಫೋರ್ಸ್ ಸೇರಿದ ಈಕೆ, 1999ರ ಕಾರ್ಗಿಲ್ ಯುದ್ಧದಲ್ಲಿ ಏಕಮಾತ್ರ ಮಹಿಳೆಯಾಗಿ ಭಾಗವಹಿಸಿದ್ದರು. ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಇಲ್ಲಿ ಗುಂಜನ್ ಪಾತ್ರವನ್ನು ಸಲೀಸಾಗಿ ನಿರ್ವಹಿಸಿ ಸೈ ಎನಿಸಿದಳು.
ಪ್ರೇರಣೆಯಾಗುವ ಚಿತ್ರಗಳು
ಸತತ 5 ಸಲ ವಿಶ್ವ ಚಾಂಪಿಯನ್ ಎನಿಸಿದ ಎಂ.ಸಿ. ಮೇರಿಕೋಮ್ ರ ಜೀವನಾಧಾರಿತ `ಮೇರಿ ಕೋಮ್’ ಚಿತ್ರ ಮತ್ತೊಂದು ಹೋರಾಟದ ಚಿತ್ರವೆನಿಸಿದೆ. ಪ್ರಿಯಾಂಕಾ ಚೋಪ್ರಾ ಇಲ್ಲಿ ಮೇರಿ ಆಗಿ ಮಿಂಚಿದ್ದಳು. ಈ ಚಿತ್ರದ ಮೂಲಕ ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಸತತ ಎದುರಿಸುವ ಹೋರಾಟಗಳ ಬಗ್ಗೆ ಚರ್ಚಿಸಲಾಯಿತು. ಅನೇಕ ಪ್ರಶಸ್ತಿಗಳ ಗರಿ ಬಾಚಿಕೊಂಡಿರುವ ಮೇರಿ ಕೋಮ್…. ಪದ್ಮಭೂಷಣ, ಅರ್ಜುನ ಅವಾರ್ಡ್, ಪದ್ಮಶ್ರೀ, ಖೇಲ್ ರತ್ನಗಳಿಂದ ಸುಶೋಭಿತೆ.
ಕಳೆದ ಒಂದು ಶತಮಾನದಿಂದ ಭಾರತೀಯ ಹೆಣ್ಣು ಸಮಾಜದಲ್ಲಿ ಎದುರಿಸುತ್ತಿರುವ ಸತತ ಸಂಘರ್ಷಗಳ ಚಿತ್ರಣವನ್ನು ಬಾಲಿವುಡ್ ಕಟ್ಟಿಕೊಡಲು ಯತ್ನಿಸಿದೆ. ಹೆಣ್ಣಿನ ಒಂದು ಅಚಲ ವಿಶ್ವಾಸ, ನಂಬಿಕೆ, ಅನೇಕ ಕ್ಷೇತ್ರಗಳಲ್ಲಿ ತನ್ನ ದೃಢ ನಿಲುವು ತಳೆಯಲು ಸಾಧ್ಯವಾಗಿದೆ. ಆದರೆ ಅವಳ ಈ ವಿಜಯ ದಿನಪತ್ರಿಕೆಗಳ ಒಳಪುಟಗಳಲ್ಲಿ, ಕೆಲವು ಸಾಲುಗಳ ಸುದ್ದಿಯಾಗಿ ಹಾಗೇ ಕಣ್ಮರೆ ಆಗಿಹೋಗುತ್ತದೆ. ಆಕೆಯ ಈ ಯಶಸ್ಸನ್ನು ಈ ರೀತಿ ಬೆಳ್ಳಿಪರದೆ ಮೇಲೆ ಲಕ್ಷಾಂತರ ಮಂದಿ ನೋಡಿ ಗುರುತಿಸುವಂತಾದರೆ ಮಾತ್ರ, ಆಕೆಯ ಶ್ರಮ ಎಷ್ಟೋ ಸಾರ್ಥಕ! ಇದರಿಂದ ಸಾಧಾರಣ ಹೆಣ್ಣುಮಕ್ಕಳಿಗೆ ಎಷ್ಟೋ ಪ್ರೇರಣೆ, ಪ್ರೋತ್ಸಾಹ, ಉತ್ಸಾಹ ಸಿಗುತ್ತದೆ.
ಇಂದು ಹೆಣ್ಣು ತನ್ನ ಮನೆ ಮಂದಿಯೊಡನೆ ಚಿತ್ರ ನೋಡಲು ಥಿಯೇಟರ್ ಗೆ ಹೋದಾಗ, ಆಕೆ ಮುಂದೆ ಸದಾ ಅತ್ತು ಗೋಳಾಡುವ, ಕೌಟುಂಬಿಕ ಕಥಾ ಹಂದರಗಳ ಅಥವಾ ಪುರುಷಪ್ರಧಾನ ಮಾರಾಮಾರಿ ಚಿತ್ರಗಳಷ್ಟೇ ಉಳಿದಿಲ್ಲ. ಅಪರೂಪವಾದರೂ ಅಲ್ಲೊಂದು ಇಲ್ಲೊಂದು ಇಂಥ ಸ್ತ್ರೀ ಪ್ರಧಾನ ಚಿತ್ರಗಳು ಅವಳ ಗಮನ ಸೆಳೆಯುತ್ತವೆ. ಆದರೆ ಕಡಿಮೆ ಬಜೆಟ್, ಹೆಚ್ಚು ಪ್ರಚಾರ ಇಲ್ಲದ ಕಾರಣ ಈ ಚಿತ್ರಗಳು ಸಹಜವಾಗಿ ಸೋಲುತ್ತವೆ.
ಹೆಣ್ಣಿನ ಸಂಘರ್ಷಗಳನ್ನು ಪರದೆಯಲ್ಲಿ ಹೆಚ್ಚು ತೋರಿಸದೆ, ಸದಾ ಅವಳನ್ನು ರೊಮ್ಯಾಂಟಿಕ್, ಗ್ಲಾಮರಸ್ ಗೊಂಬೆ ಆಗಿಸಿ ಕೂರಿಸುವ ಬಾಲಿವುಡ್ ಗೆ ತನ್ನದೇ ಆದ ಆರ್ಥಿಕ ನೀತಿ ಇದೆ. ಬಾಲಿವುಡ್ ನಲ್ಲಿ ಮಹಿಳಾ ಫಿಲ್ಮ್ ರೈಟರ್, ನಿರ್ಮಾಪಕಿ, ನಿರ್ದೇಶಕಿಯರ ಸಂಖ್ಯೆ ಬಹಳ ಬಹಳ ಕಡಿಮೆ. ಗಂಡಸರ ತಮಗೆ ಬೇಕಾದ ಕಹಳೆ ಉದುತ್ತಾರೆಂಬುದು ಗೊತ್ತಿರುವ ವಿಚಾರ. ಇಂಥ ಚಿತ್ರಗಳಲ್ಲಿ ಹೆಣ್ಣು ಇಂದಿಗೂ ಅಬಲೆಯೇ ಆಗಿರುತ್ತಾಳೆ.
– ಪ್ರತಿನಿಧಿ