ಶರತ್ ಚಂದ್ರ
ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಜಾಸ್ತಿಯಾಗುತ್ತಿದೆ.ಪ್ರೇಮಾ ಕಾರಂತರ ಆದಿಯಾಗಿ ಒಂದಷ್ಟು ಮಹಿಳಾ ನಿರ್ದೇಶಕರು ಈ ಸಾಹಸಕ್ಕೆ ಕೈ ಹಾಕಿದನ್ನು ನಾವು ನೋಡಿದ್ದೇವೆ. ಆದರೆ ಒಂದಷ್ಟು ಮಹಿಳಾ ನಿರ್ದೇಶಕಿಯರು ಆಕ್ಷನ್ ಕಟ್ ಹೇಳಲು ಮುಂದೆ ಬರುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಬಿಡುಗಡೆ ಯಾದ ‘ಆಚಾರ್ ಅಂಡ್ ಕೊ’ ಚಿತ್ರದಲ್ಲಿ ಭರವಸೆ ಮೂಡಿಸಿದ ಸಿಂಧೂ ಶ್ರೀನಿವಾಸ್ ಮೂರ್ತಿ, ಈ ಹಿಂದೆ ರಾಜ್. ಬಿ. ಶೆಟ್ಟಿ ಪ್ರಮುಖ ಪಾತ್ರ ವಹಿಸಿದ ‘ಅಮ್ಮಚ್ಚಿಯೆಂಬ ನೆನಪು’ ನಿರ್ದೇಶಿಸಿದ ಚಂಪಾ ಶೆಟ್ಟಿ ಅವರ ಡೈರೆಕ್ಷನ್ ನಲ್ಲಿ ಬಂದ ಕಳೆದ ವರ್ಷ ಬಂದ ‘ಕೋಳಿ ಎಸ್ರು ‘ ಚಿತ್ರ ಕೂಡ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ತಮಿಳು ಮಲಯಾಳಂ ನಲ್ಲಿ ಈಗಾಗಲೇ ಸುಧಾ ಕೊಂಗಾರಾ ಮತ್ತು ಗೀತು ಮೋಹನ್ ದಾಸ್ ರಾಷ್ಟ್ರ ಪ್ರಶಸ್ತಿ ಕೂಡ ಪಡೆದು ಕೊಂಡಿದ್ದಾರೆ. ಗೀತು ಮೋಹನ್ ದಾಸ್ ಯಶ್ ನಟಿಸುತ್ತಿರುವ ಈ ವರ್ಷ ಮಾರ್ಚ್ ನಲ್ಲಿ ಬಿಡುಗಡೆಯಾಗುತ್ತಿರುವ ಟಾಕ್ಸಿಕ್ ನಂತಹ ಅತೀ ದೊಡ್ಡ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ ನಮ್ಮಲ್ಲಿ ನಟಿಯರು ನಿರ್ದೇಶನಕ್ಕೆ ಇಳಿದಿರುವುದು ಬಹಳ ಕಡಿಮೆ. ಜೂಲಿ ಲಷ್ಮಿ ‘ಮಕ್ಕಳ ಸೈನ್ಯ ‘ ನಿರ್ದೇಶಿಸಿದ್ದು ಬಿಟ್ಟರೆ ಇತ್ತೀಚೆಗೆ ರಂಜನಿ ರಾಘವನ್ ‘ಡೀ ಡಿ ಡಿಕ್ಕಿ ‘ ಎಂಬ ಚಿತ್ರ ನಿರ್ದೇಶಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಇತ್ತೀಚೆಗೆ ಕನ್ನಡದ ಯುವ ನಟಿ ಐಶಾನಿ ಶೆಟ್ಟಿ ಈ ಸಾಲಿಗೆ ಸೇರಿದ್ದಾರೆ’. ನಡುವೆ ಅಂತರವಿರಲಿ ‘ ಚಿತ್ರದ ನಂತರ ಕನ್ನಡದ ಶಾಕುಂತಲೆಯೆಂದು ಹೆಸರುವಾಸಿಯಾದ ಐಶಾನಿ ಶೆಟ್ಟಿ ತನ್ನದೇ ಆದ ಶಾಕುಂತಲೇ ಸಿನಿಮಾಸ್ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿ ‘ಕಾಜಾಣ ‘ ಎಂಬ ಚಿತ್ರವನ್ನು ಪ್ರಪ್ರಥಮ ಬಾರಿಗೆ ನಿರ್ದೇಶಿ ಸುತ್ತಿದ್ದಾರೆ. ಈ ಹಿಂದೆ’ ಕಾಜಿ’ ಎಂಬ ಕಿರು ಚಿತ್ರ ನಿರ್ದೇಶಿಸಿ ಅನುಭವ ಇರುವ ಐಶಾನಿ ಅವರ ಕಾಜಾಣ ಚಿತ್ರದ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ.’

ವಾಸ್ತು ಪ್ರಕಾರ’, ‘ಧರಣಿ ಮಂಡಲ ಮಧ್ಯದೊಳಗೆ’,’ ಹೊಂದಿಸಿ ಬರೆಯಿರಿ ‘ ಚಿತ್ರಗಳ ಅಭಿನಯದ ಮೂಲಕ ಭರವಸೆ ಮೂಡಿಸಿದ ಐಶಾನಿ ಮೈಸೂರ್ ಸ್ಯಾಂಡಲ್ ಸೋಪಿನ ರಾಯಭಾರಿ ಕೂಡ.ಮಂಗಳೂರು ಸುತ್ತ ಮುತ್ತ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಶಾಖಾಹಾರಿ ಖ್ಯಾತಿಯ ವಿಶ್ವಜಿತ್ ಛಾಯಾಗ್ರಹಣ ಈ ಚಿತ್ರಕ್ಕಿದೆ.ನಿರ್ದೇಶಕಿಯಾಗಿ ಐಶಾನಿ ಅವರ ಪ್ರಥಮ ಪ್ರಯತ್ನ ಆಕೆಗೆ ಯಶಸ್ಸು ತರಲಿ ಎಂದು ನಮ್ಮ ಹಾರೈಕೆ.





