- ರಾಘವೇಂದ್ರ ಅಡಿಗ ಎಚ್ಚೆನ್.
ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಜೆಡಿಎಸ್ (JDS), ತನ್ನ ಸಂಘಟನಾ ಕಾರ್ಯವನ್ನು ಚುರುಕುಗೊಳಿಸಿದೆ. ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾದರು.
ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಜಾಹ್ನವಿ ಅವರು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷದ ಧ್ವಜ ಹಿಡಿದರು. ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಜಾಹ್ನವಿಗೆ ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಹಾಗೂ ಶೈಲಜಾ ರಾವ್ ಸೇರಿದಂತೆ ಹಲವು ಮಹಿಳಾ ನಾಯಕಿಯರು ಉಪಸ್ಥಿತರಿದ್ದರು. ಯುವ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ಜಾಹ್ನವಿ ಅವರ ಸೇರ್ಪಡೆ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನಲಾಗುತ್ತಿದೆ.
ಮತ್ತೊಂದೆಡೆ, ಐದು ಮಹಾನಗರ ಪಾಲಿಕೆಗಳ (GBA) ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನ ಚುನಾವಣಾ ರಣತಂತ್ರವನ್ನು ಬಿಗಿಗೊಳಿಸಿದೆ. ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಿದ್ಧತಾ ಸಭೆ ಆರಂಭವಾಗಿದೆ.
ಜೆಡಿಎಸ್ ಜಿಬಿಎ ಅಧ್ಯಕ್ಷ ರಮೇಶ್ ಗೌಡ, ಐದು ಪಾಲಿಕೆಗಳ ಅಧ್ಯಕ್ಷರು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಯಾವ ಯಾವ ವಾರ್ಡ್‌ಗಳಲ್ಲಿ ಜೆಡಿಎಸ್ ಸ್ಪರ್ಧಿಸಬೇಕು? ಎಷ್ಟು ವಾರ್ಡ್‌ಗಳಲ್ಲಿ ಗೆಲ್ಲುವ ಅವಕಾಶವಿದೆ? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯುತ್ತಿದೆ. ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದ್ದು, ಅಭ್ಯರ್ಥಿಗಳ ಆಯ್ಕೆಗೆ ಕೆಲವೊಂದು ಮಾನದಂಡಗಳನ್ನು ನಿಗದಿಪಡಿಸುವ ಸಾಧ್ಯತೆ ಇದೆ.
ಐದೂ ಪಾಲಿಕೆಗಳಲ್ಲಿ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕುಮಾರಸ್ವಾಮಿ ಅವರು ಸ್ಥಳೀಯ ನಾಯಕರಿಗೆ ಸೂಚನೆಗಳನ್ನು ನೀಡಿದ್ದಾರೆ. ಒಟ್ಟಾರೆಯಾಗಿ, ಒಂದೆಡೆ ಸಿನಿಮಾ ತಾರೆಯರ ಸೇರ್ಪಡೆ ಹಾಗೂ ಇನ್ನೊಂದೆಡೆ ಚುನಾವಣಾ ಸಿದ್ಧತೆಗಳ ಮೂಲಕ ಜೆಡಿಎಸ್ ಹಳೆ ಮೈಸೂರು ಭಾಗದ ಜೊತೆಗೆ ನಗರ ಪ್ರದೇಶಗಳಲ್ಲೂ ತನ್ನ ಶಕ್ತಿ ಪ್ರದರ್ಶಿಸಲು ಸಜ್ಜಾಗುತ್ತಿದೆ.





