ಜಾಗೀರ್ದಾರ್*
ಕಿರೀಟಿ ನಟನೆಯ ಚೊಚ್ಚಲ ಸಿನಿಮಾ ಇದೇ ತಿಂಗಳ 18ರಂದು ತೆರೆಗೆ ಬರ್ತಿದೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ತನ್ನ ಕಂಟೆಂಟ್ ಮೂಲಕ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ನಿನ್ನೆ ಚಿತ್ರತಂಡ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜೂನಿಯರ್ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ವಿಶೇಷ ಅತಿಥಿಯಾಗಿ ಆಗಮಿಸಿ, ಕಿರೀಟಿ ಚಿತ್ರಕ್ಕೆ ಸಪೋರ್ಟ್ ಕೊಟ್ಟರು. ಜನಾರ್ದನ ರೆಡ್ಡಿ, ನಟಿ ಜೆನಿಲಿಯಾ ಡಿಸೋಜಾ, ರವಿಚಂದ್ರನ್, ಶ್ರೀಲೀಲಾ ಇನ್ನೂ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರದ ಕುರಿತು ತಾರಾಬಳಗ ಮಾಹಿತಿ ಹಂಚಿಕೊಂಡಿದೆ.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಶಿವಣ್ಣ ಮಾತನಾಡಿ, ನಾನು ಮಾಧುರಿ ದೀಕ್ಷಿತ್ ಅಭಿಮಾನಿ ಈಗ ಶ್ರೀಲೀಲಾ ಅಭಿಮಾನಿ ಆಗಿದ್ದೀನಿ. ‘ಕಿರೀಟಿಯ ಡ್ಯಾನ್ಸ್ ನೋಡಿದರೆ ಅಪ್ಪು ಡ್ಯಾನ್ಸ್ ನೋಡಿದಂತೆ ಅನಿಸುತ್ತದೆ. ಅವರಿಗೆ ಒಳ್ಳೆಯದಾಗಲಿ. ಇವರಿಬ್ಬರು ಜೂನಿಯರ್ ಅಲ್ಲ..ಸೂಪರ್ ಸೀನಿಯರ್. ನಟ ರವಿಚಂದ್ರನ್ ಹಾಗೂ ನನ್ನದು ಎರಡು ದೇಹ ಒಂದೇ ಆತ್ಮ. ನಿರ್ದೇಶಕರು ಅವರ ಕೆಲಸ ಮಾಡಿದ್ದಾರೆ. ದೇವಿಶ್ರೀ ಪ್ರಸಾದ್ ಬಗ್ಗೆ ಮಾತನಾಡುವ ಆಗಿಲ್ಲ. ಇದು ನನ್ನ ಕುಟುಂಬ ಸಿನಿಮಾ ನೋಡುತ್ತೇನೆ ಎಂದು ಹೇಳಿದರು.
ರವಿಚಂದ್ರನ್ ಮಾತನಾಡಿ, ಶಿವ ಇರುವಾಗ ನನಗೆ ಏಕೆ ಭಯ. ಇವತ್ತು ಎಮೋಷನಲ್ ಅನಿಸುತ್ತದೆ. ಈ ಸಿನಿಮಾ ಅಪ್ಪನ ಕನಸು. ಇದು ತೆರೆಹಿಂದಿನ ಕಥೆ. ಆನ್ ಸ್ಕ್ರೀನ್ ನನ್ನ ಜೂನಿಯರ್. ನನ್ನ ಕನಸು. ಈ ಸಿನಿಮಾ ಮೂರು ವರ್ಷದ ಜರ್ನಿ. ಅಷ್ಟು ಸಿಂಪಲ್ ಆಗಿ ನಡೆದ ಸಿನಿಮಾವಲ್ಲ. ಪ್ರತಿ ಕುಟುಂಬದಲ್ಲಿ ನಡೆದ ಎಮೋಷನ್, ನೋವು ಇದೆ. ಈ ಸಿನಿಮಾವನ್ನು ಮೊನ್ನೆ ಪತ್ನಿ ಜೊತೆ ನೋಡಿದೆ. ಈ ಚಿತ್ರ ನೋಡಿದಾಗ ಮಾಣಿಕ್ಯ ನೆನಪಾಯ್ತು. ನಾನು ಈ ಚಿತ್ರದಲ್ಲಿ ತಂದೆ ರೋಲ್ ಪ್ಲೇ ಮಾಡಿದ್ದೇನೆ. ಈ ಚಿತ್ರ ಆಕಾಶದಷ್ಟು ಎತ್ತರಕ್ಕೆ ಬೆಳೆಯಲಿ. ತಂದೆ ಮಗನ ಎಮೋಷನ್ ಈ ಚಿತ್ರ ಮೂಲಕ ತಲುಪುತ್ತದೆ. ಈ ಚಿತ್ರ ಕಣ್ಣೀರು ಹಾಕುತ್ತದೆ. ಕಿರೀಟಿ ನೂರಷ್ಟು ಎಫರ್ಟ್ ಹಾಕಿದ್ದಾನೆ. ಎಂದಿಗೂ ಜನಾರ್ಧನ ರೆಡ್ಡಿ ಮಗ ತರ ವರ್ತನೆ ಮಾಡಿಲ್ಲ. ಅವನು ತನ್ನ ಪಾತ್ರದಲ್ಲಿ ಜೀವಿಸಿದ್ದಾನೆ ಎಂದು ಹೇಳಿದರು.
ನಾಯಕ ಕಿರೀಟಿ ಮಾತನಾಡಿ, ‘ಜೋಗಿ’ ಸಿನಿಮಾದ ಹೊಡಿ ಮಗ ಸಾಂಗ್ ನಾನು ಮೊದಲು ಡಾನ್ಸ್ ಮಾಡಿದ್ದು. , ‘ನನಗೆ ಅಪ್ಪು ಅವರ ‘ಜಾಕಿ’ ಸಿನಿಮಾ ನಟನಾಗಲು ಸ್ಫೂರ್ತಿ ಕೊಟ್ಟಿತು. 13 ವರ್ಷ ಆದ್ಮೇಲೆ ಕನ್ನಡಕ್ಕೆ ಜೆನಿಲಿಯ ಕಮ್ ಬ್ಯಾಕ್ ಮಾಡಿದ್ದಾರೆ. ಗಿರಿಜಾ ಲೋಕೇಶ್ ಅವರು ಒಳ್ಳೆ ಪಾತ್ರ ಮಾಡಿದ್ದಾರೆ. ನಮ್ಮ ತಂದೆ ನನಗೋಸ್ಕರ ತುಂಬಾ ತ್ಯಾಗ ಮಾಡಿದ್ದಾರೆ. ನನಲ್ಲಿ ಛಲ ತುಂಬಿದ್ದೆ ನನ್ನ ತಂದೆ, ಅದ್ಭುತವಾದ ತಂದೆಗೆ ಮಗನಾಗಿ ಹುಟ್ಟಿದ್ದು ನನ್ನ ಪುಣ್ಯ, ಅಣ್ಣನ ಸಮಾನ ಯುವ ಅವರ ಎಕ್ಕ ಸಿನಿಮಾ ದಿನನೇ ನಮ್ಮ ಸಿನಿಮಾ ರಿಲೀಸ್ ಆಗ್ತಿದೆ. ಅವರ ಸಿನಿಮಾಗೂ ಕನ್ನಡಿಗರ ಆಶೀರ್ವಾದ ಇರಲಿ. ತಾಯಿ ಸಮಾ ಅಶ್ವಿನಿ ಮೇಡಂ ಆಶೀರ್ವಾದ ನನ್ನ ಮೇಲಿದೆ’ ಎಂದು ಹೇಳಿದರು.
ನಾಯಕಿ ಶ್ರೀಲೀಲಾ ಮಾತನಾಡಿ, ‘ನಾನು ಮೊದಲ ವರ್ಷ ಎಂಬಿಬಿಎಸ್ ವಿದ್ಯಾರ್ಥಿ ಆಗಿದ್ದಾಗ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಯ್ತು, ಈಗ ನಾನು ಡಾಕ್ಟರ್ ಈಗ ಬಿಡುಗಡೆ ಆಗುತ್ತಿದೆ. ಸಿನಿಮಾದ ನಿರ್ದೇಶಕರು ನಿಧಾನವಾಗಿ ಆದರೆ ಒಳ್ಳೆ ಸಿನಿಮಾ ಮಾಡಿದ್ದಾರೆ. ಆರು ತಿಂಗಳಿಗೆ ಒಂದಾದರೂ ಕನ್ನಡ ಸಿನಿಮಾ ಆಫರ್ಗಳು ನನಗೆ ಸಿಗಲಿ ಎಂಬುದು ನನ್ನ ಆಸೆ. ನಾನು ಆ ಕಾಲದಲ್ಲಿ ಇದ್ದಿದ್ರೆ ರವಿಚಂದ್ರನ್ ಅವರಿಗೆ ನಾಯಕಿ ಆಗುತ್ತಿದ್ದೆ. ಇನ್ನು ಶಿವರಾಜ್ ಕುಮಾರ್ ಅವರ ಸಿನಿಮಾದಲ್ಲಿ ನಟಿಸಿಯೇ ನಟಿಸುತ್ತೀನಿ ಎಂದರು.
ನಟಿ ಜೆನಿಲಿಯಾ, ‘ನನ್ನ ಮೊದಲ ಕನ್ನಡ ಸಿನಿಮಾ ಶಿವರಾಜ್ ಕುಮಾರ್ ಅವರ ಜೊತೆಗೆ ನಟಿಸಿದ ‘ಸತ್ಯ ಇನ್ ಲವ್’. ಈಗ 13 ವರ್ಷದ ಬಳಿಕ ಕನ್ನಡ ಸಿನಿಮಾ ಮಾಡಿದ್ದೀನಿ. ಕನ್ನಡ ಚಿತ್ರರಂಗ ಬಹಳ ಲಕ್ಕಿ ಏಕೆಂದರೆ ಅವರಿಗೆ ಕಿರೀಟಿ ಅಂಥಹಾ ನಾಯಕ ನಟ ಸಿಕ್ಕಿದ್ದಾರೆ. ‘ಜೂನಿಯರ್’ ಸಿನಿಮಾ ಜುಲೈ 18 ರಂದು ಬಿಡುಗಡೆ ಆಗಲಿದೆ ಎಂದು ಹೇಳಿದರು.
ಜೂನಿಯರ್ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಅಂತಹ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ ಸೆಂಥಿಲ್ ಕುಮಾರ್ ಕೆಲಸ ಮಾಡಿದ್ದಾರೆ.
ಸಿನಿಮಾಕ್ಕೆ ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಆಕ್ಷನ್ ನೀಡಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಾರಂಭವಾದಾಗ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ಶುಭಾಶಯ ತಿಳಿಸಿದ್ದರು. ಜುಲೈ 18ಕ್ಕೆ ಜೂನಿಯರ್ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.