ಹಿಂದೆಲ್ಲಾ ಭಜನೆ, ಹರಿಕಥೆ ಮತ್ತು ನಾಟಕಗಳ ಮೂಲಕ ಕಥೆಗಳನ್ನು ಜನರಿಗೆ ಹೇಳುವುದರೊಂದಿಗೆ ಮನರಂಜನೆಯನ್ನು ತಲುಪಿಸುವ ಪ್ರಯತ್ನವಾಗಿತ್ತು. ನಂತರ ಕತ್ತಲು ಮತ್ತು ಬೆಳಕಿನ ಸಂಕೀರ್ಣದಲ್ಲಿ ಛಾಯಾಚಿತ್ರಗಳನ್ನು ತೆಗೆಯುವ ಕಲೆಯನ್ನು ರೂಡಿಸಿಕೊಂಡ ನಂತರ ಅದೇ ತಂತ್ರಜ್ಞಾನದ ಮೂಲಕ ಮೂಕಿ ಚಿತ್ರಗಳು ಆರಂಭವಾಗಿ ನಂತರ ಅದರ ಜೊತೆ ಶಬ್ಧವನ್ನೂ ಅಳವಡಿಸುವ ಕಲೆ ಕರಗತವಾದಾಗ ಟಾಕೀ ಸಿನಿಮಾಗಳ ಜನರನ್ನು ಮನರಂಜಿಸಲಾರಂಭಿಸಿದವು.

ಆನಂತರ ಕಪ್ಪು ಬಿಳುಪಿನ ಜಾಗದಲ್ಲಿ ಬಗೆ ಬಗೆಯ ವರ್ಣ ಚಿತ್ರಗಳು ಆರಂಭವಾಗಿ ಈಗ ಎಲ್ಲವೂ ಡಿಜಟಲೀಕರಣಗೊಂಡು ಸಿನಿಮಾ ರೀಲ್ ಗಳ ಬದಲಾಗಿ ಇಂಟರ್ನೆಟ್ ಸಹಾಯದಿಂದ ಒಂದೇ ಕಡೆಯಿಂದ ಏಕ ಕಾಲಕ್ಕೆ ಸಾವಿರಾರು ಚಿತ್ರಮಂದಿರಗಳನ್ನು ಲಕ್ಷಾಂತರ ಪ್ರೇಕ್ಷರನ್ನು ರಂಜಿಸುವ ತಂತ್ರಜ್ಞಾನ ಬಂದಿದ್ದು, ಈ ಕ್ಷೇತ್ರದಲ್ಲಿ ನಿರಂತರವಾಗಿ ಹೊಸಾ ಹೊಸಾ ಆವಿಷ್ಕಾರಗಳು ನಡೆಯುತ್ತಲೇ ಬಂದಿವೆ.

ಸಿನಿಮಾ ಮಂದಿರ ಕತ್ತಲಿನಲ್ಲಿ ಕುಳಿತು ಬೆಳಕಿನ ದೃಶ್ಯ ಮತ್ತು ಆಡಿಯೊಗಳಿಂದ ಸಂಯೋಜಿತವಾದ ಕಥೆಗಳನ್ನು ನೋಡುವ ಎನ್ನುವುದಕ್ಕಿಂತಲೂ ಆ ಕಥೆಯಲ್ಲಿರುವ ಭಾವನೆಗಳನ್ನು ಅರ್ಥೈಸಿಕೊಳ್ಳುವ ಇಲ್ಲವೆ ಕುಳಿತಲ್ಲಿಂದಲೇ ಅನುಭವಿಸುವ ಕೇಂದ್ರವಾಗಿದೆ. ಹಾಗಾಗಿಯೇ ಬೆಂಗಳೂರಿನ ಹೃದಯಭಾಗವಾದ ಗಾಂಧಿನಗರದಲ್ಲಿ ಸುಬೇದಾರ್ ರಸ್ತೆಯಲ್ಲಿ ಏಶಿಯಾದಲ್ಲೇ ಮೊಟ್ಟಮೊದಲ ಬಾರಿಗೆ ಅತಿದೊಡ್ಡ ಅಂದರೆ ಸುಮಾರು 1465 ಸೀಟ್‌ಗಳ ಕಪಾಲಿ ಚಿತ್ರಮಂದಿರವನ್ನು ಶ್ರೀ ರಾಜಗೋಪಾಲ್ ರವರು 1965ರಲ್ಲಿ ಕಟ್ಟಲು ಆರಂಭಿಸಿ 1968ರಲ್ಲಿ ಅದು ಸಂಪೂರ್ಣವಾಗಿ ಆ ಚಿತ್ರಮಂದಿರದಲ್ಲಿ ಮೊಟ್ಟಮೊದಲ ಚಿತ್ರವಾಗಿ ಆಂಗ್ಲ ಭಾಷೆಯ Seven Wonders of the World ಬಿಡುಗಡೆ ಮಾಡಲು ಮುಂದಾದಾಗ, ಅಂದಿನ ಕನ್ನಡ ಸಂಘಟನೆಗಳ ಒತ್ತಾಯಕ್ಕೆ ಮಣಿದು, ಕಲ್ಪನ ಮತ್ತು ಗಂಗಾಧರ್ ಅಭಿನಯದ ಚೌಕದ ದೀಪ ಎಂಬ ಕನ್ನಡ ಚಿತ್ರ ಮೊಟ್ಟ ಮೊದಲ ಪ್ರದರ್ಶನಗೊಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
1968ರಲ್ಲೇ ಗೀತಪ್ರಿಯ ಅವರ ಚೊಚ್ಚಲ ನಿರ್ದೇಶನದ ಡಾ. ರಾಜಕುಮಾರ್ ಮತ್ತು ಕಲ್ಪನಾ ಅಭಿನಯದ ಮಣ್ಣಿನ ಮಗ ಕಪಾಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಎಂಬ ಹೆಸರಿಗೆ ಪಾತ್ರವಾಯಿತು. ಅಷ್ಟು ದೊಡ್ಡ ಆಸನದ ಸಾಮರ್ಥ್ಯದ ಕಪಾಲಿ ಚಿತ್ರಮಂದಿರದಲ್ಲಿ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರಿದ್ದರೂ ಸಹ ಚಿತ್ರಮಂದಿರ ಖಾಲಿಯಾಗಿ ಕಾಣುತ್ತದೆ ಎಂಬ ಭಯದಿಂದ ಅನೇಕ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಅನೇಕ ಚಲನಚಿತ್ರ ಹಿಂಜರಿಯುತ್ತಿದ್ದರು. ಅಂತಹ ಬೃಹತ್ ಚಿತ್ರಮಂದಿರಲ್ಲಿ ತುಂಬಿದ ಗೃಹದಲ್ಲಿ 100 ದಿನಗಳಿಗೂ ಹೆಚ್ಚು ಕಾಲ ಯಶಸ್ವಿಯಾಗಿ ಪ್ರದರ್ಶನಗೊಂಡು, ಕಪಾಲಿ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಿ ಶತದಿನೋತ್ಸವ ಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆಗೂ ಮಣ್ಣಿನ ಮಗ ಪಾತ್ರವಾಯಿತು. ಇಂತಹ ಬೃಹತ್ ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ರಿಲೀಸ್ ಆಗಿ ಅದು ಹೌಸ್ ಫುಲ್ ಪ್ರದರ್ಶನ ಕಂಡರೆ ತನ್ನ ಜೀವನ ಸಾರ್ಥಕ ಎಂಬ ಆಶಯ ಅಂದಿನ ಪ್ರತಿಯೊಬ್ಬ ಕಲಾವಿದನಿಗಿತ್ತು.

1983ರಲ್ಲಿ ಇದೇ ಕಪಾಲಿ ಚಿತ್ರಮಂದಿರದಲ್ಲಿ ರಾಜಕುಮಾರ್ ಮತ್ತು ಲೋಹಿತ್ (ಪುನೀತ್ ರಾಜಕುಮಾರ್) ಅಭಿನಯದ ಭಕ್ತಪ್ರಹ್ಲಾದ ಚಿತ್ರ ಪ್ರದರ್ಶನ ಆಗುತ್ತಿದ್ದಂತಹ ಸಮಯದಲ್ಲೇ ಕಪಾಲಿ ಚಿತ್ರಮಂದಿರದ ಪಕ್ಕದಲ್ಲೇ ನಿರ್ಮಾಣವಾಗುತ್ತಿದ್ದ ಏಳು ಅಂತಸ್ತಿನ ಗಂಗಾರಾಮ್ಸ್ ಕಟ್ಟಡ ಕುಸಿದು ಸುಮಾರು 123 ಜನರು ಸಾವನ್ನಪ್ಪಿದರೆ, 120 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ದುರಂತದ ನಂತರ ಕಾಕತಾಳೀಯವೋ ಎನ್ನುವಂತೆ ಕಪಾಲಿ ಚಿತ್ರಮಂದಿರಕ್ಕೆ ಗರಬಡಿದಂತಾಗಿ ಆದಾದ ನಂತರ ಅಲ್ಲೊಂದು ಇಲ್ಲೊಂದು ತುಂಬಿದಗೃಹದ ಪ್ರದರ್ಶನಗಳು ಕಾಣುವಂತಾಗಿ ಕನ್ನಡ ಚಲನಚಿತ್ರ ನಿರ್ದೇಶಕರು/ ನಿರ್ಮಾಪಕರ ತಾತ್ಸಾರದಿಂದಾಗಿ ಕಪಾಲಿ ಸಿನಿಮಾ ಹಿಂದಿನ ಮೋಡಿ ಕಳೆದುಕೊಳ್ಳುವಂತಾಯಿತು.





