ಸರಸ್ವತಿ *
ಭಜರಂಗ ಸಿನೆಮಾ ಲಾಂಛನದಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ಹಾಗೂ ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ "KITE ಬ್ರದರ್ಸ್" ಚಿತ್ರ ನವೆಂಬರ್ 14ರಂದು ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

"kite ಬ್ರದರ್ಸ್" ಮಕ್ಕಳ ಚಿತ್ರವಾದರೂ, ಎಲ್ಲಾ ವಯಸ್ಸಿನವರೂ ನೋಡಬೇಕಾದ ಉತ್ತಮ ಸಂದೇಶವಿರುವ ಚಿತ್ರ ಎಂದು ಮಾತನಾಡಿದ ನಿರ್ದೇಶಕ ವಿರೇನ್ ಸಾಗರ್ ಬಗಾಡೆ, ಹಳೆಯ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ದುರಸ್ತಿ ಮಾಡಿಸಲಿ ಎಂದು ಸಮಾಜ ಕಾಯಬಾರದು. ಆ ಶಾಲೆಯಲ್ಲಿ ಕಲಿತವರು ಸಶಕ್ತರಾಗಿ ಬದುಕು ರೂಪಿಸಿಕೊಂಡಾಗ ಆ ಶಾಲೆಯ ನಿಸ್ಸಹಾಯಕ ಉಪಾಧ್ಯಯರ ಬೆಂಬಲಕ್ಕೆ ನಿಂತು ಆ ಶಾಲೆಯನ್ನು ಸರಿಪಡಿಸಿ ಮುಂದಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು. ಈ ರೀತಿ ಮನಸ್ಸಿನ ಜನರು ನಮ್ಮ ಸುತ್ತ ಸಾಕಷ್ಟು ಜನರು ಇದ್ದಾರೆ. ಇದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಇನ್ನು ಶೀರ್ಷಿಕೆಯ ಬಗ್ಗೆ ಹೇಳಬೇಕಾದರೆ, ರೈಟ್ ಬ್ರದರ್ಸ್ ಅವರು ಫ್ಲೈಟ್ ಇಂಜಿನಿಯರಿಂಗ್ ನಲ್ಲಿ ಆವಿಷ್ಕಾರ ಮಾಡಿದರೆ ಇಲ್ಲಿ ಇಬ್ಬರು ವಿದ್ಯಾರ್ಥಿಗಳು ದೂರದ ಅಹಮದಾಬಾದ್ ನಲ್ಲಿ ನಡೆಯುವ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಕೈಟ್ ನಲ್ಲಿ ಮಾಡುವ ಎಂಜಿನಿಯರಿಂಗ್ ನಿಂದಾಗಿ ಪಡೆಯುವ ಒಂದು ರೋಚಕ ಗೆಲುವಿನ ಕಾರಣ ಕೈಟ್ ಬ್ರದರ್ಸ್ ಎನಿಸಿಕೊಂಡು ಅದರಿಂದ ಬಂದ ಹಣದಿಂದ ಶಾಲೆಯ ದುರಸ್ತಿ ಮಾಡಿಸುತ್ತಾರೆ. ಹಾಗಾಗಿ ಚಿತ್ರಕ್ಕೆ "KITE ಬ್ರದರ್ಸ್" ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರದಲ್ಲಿ ಪ್ರಣಿಲ್ ನಾಡಗೀರ್, ಸಮರ್ಥ ಆಶಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ, ರಾಜೀವ್ ಸಿಂಗ್ ಹಲವಾಯಿ ಮತ್ತು ಇತರ ಧಾರವಾಡದ ಹೊಸ ಪ್ರತಿಭೆಗಳೆ ಅಭಿನಯಿಸಿದ್ದಾರೆ. ಮೂರು ಹಾಡುಗಳಿದ್ದು, ವಿಜಯ್ ಭರಮಸಾಗರ, ಸಿಂಪಲ್ ಸುನಿ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ಅನೀಶ್ ಚೆರಿಯನ್ ಸಂಗೀತ ನೀಡಿದ್ದಾರೆ. ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಮಂಜುನಾಥ ಬಗಾಡೆ, ರಜನಿಕಾಂತ್ ರಾವ್ ದಳವಿ ಹಾಗೂ ಮಂಜುನಾಥ್ ಬಿ.ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧಾರಾವಾಡದಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ನವೆಂಬರ್ 14 ಮಕ್ಕಳ ದಿನಾಚರಣೆಯ ದಿನದಂದೆ ನಮ್ಮ ಚಿತ್ರ ತೆರೆ ಕಾಣುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲವಿರಲಿ ಎಂದರು.
ನಾನು ಈವರೆಗೂ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದೇನೆ. ಅದರಲ್ಲಿ ಮೊದಲ ನಿರ್ದೇಶಕರ ಚಿತ್ರಗಳಿಗೆ ಹೆಚ್ಚು ಕೆಲಸ ಮಾಡಿರುವುದು ವಿರೇನ್ ಸಾಗರ್ ಬಗಾಡೆ ಅವರು ಕೂಡ ಉತ್ತಮ ನಿರ್ದೇಶಕರು. ಒಳ್ಳೆಯ ಕಥೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ಛಾಯಾಗ್ರಾಹಕ ಅಶೋಕ್ ಕಶ್ಯಪ್ ತಿಳಿಸಿದರು.
ಕಾರ್ಯಕಾರಿ ನಿರ್ಮಾಪಕರಾದ ವಿನೋದ್ ಬಗಾಡೆ ಮತ್ತು ನಿರ್ಮಾಪಕ ಬಿ.ಎಸ್ ಮಂಜುನಾಥ್ ಚಿತ್ರದ ಕುರಿತು ಮಾತನಾಡಿದರು. ಹಾಡುಗಳ ಬಗ್ಗೆ ಅನೀಶ್ ಚೆರಿಯನ್ ಮಾಹಿತಿ ನೀಡಿದರು. ನಿರ್ದೇಶಕ ಅರವಿಂದ್ ಕೌಶಿಕ್ ಚಿತ್ರಕ್ಕೆ ಶುಭ ಕೋರಿದರು. ಸಂತೋಷ್ ರಾಧಾಕೃಷ್ಣನ್ ಹಾಗೂ ಗೀತರಚನೆಕಾರ ವಿಜಯ್ ಭರಮಸಾಗರ ಪತ್ರಿಕಾಗೋಷ್ಠಿಯಲ್ಲಿದ್ದರು.





