- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಕಿರುತೆರೆಯಲ್ಲಿ ಹೊಸ-ಹೊಸ ಕಥೆಗಳು ಆರಂಭವಾಗುವುದು ಸರ್ವೇ ಸಾಮಾನ್ಯ. ಆದರೆ ವೀಕ್ಷಕರಿಗೆ ಮನಮುಟ್ಟುವ ಕಥೆಗಳನ್ನು ನೀಡುತ್ತಾ ಬಂದಿರುವ ಹೆಗ್ಗಳಿಕೆ ಸ್ಟಾರ್ ಸುವರ್ಣ ವಾಹಿನಿಗೆ ಸಲ್ಲುತ್ತದೆ. ಇದೀಗ ಸ್ಟಾರ್ ಸುವರ್ಣ ಪ್ರಸ್ತುತ ಪಡಿಸುತ್ತಿದೆ ವಿಭಿನ್ನ ಕಥಾ ಹಂದರದ ಹೊಸ ಕಥೆ ಜೈ ಲಲಿತಾ. ಶ್ರೀ ಭ್ರಮರೀ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀನಿಧಿ ಡಿ ಎಸ್ ನಿರ್ಮಾಣ ಮಾಡುತ್ತಿದ್ದು, ದರ್ಶಿತ್ ಭಟ್ ಈ ಧಾರಾವಾಹಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹೊಸ ಕಥೆ ಡಿಸೆಂಬರ್ 8ರಿಂದ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.

ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು…ಆದರೆ ಒಳ್ಳೆ ಕೆಲ್ಸ ಸಿಗತ್ತೆ ಅಂತ ಅಲ್ಲ- ಮದ್ವೆ ಆಗೋದಕ್ಕೆ ಒಳ್ಳೇ ಹುಡ್ಗ ಸಿಗ್ತಾನೆ ಅನ್ನೋ ಆಸೆ. ನಟ ರಾಕಿಂಗ್ ಸ್ಟಾರ್ ಯಶ್ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ.

ಥಿಯೇಟರ್ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನ್, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು. ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡೋ ಶೂರ.

ಅಚಾನಕ್ ಆಗಿ ಪಾಲಿಟಿಕ್ಸ್ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಈ ಕಥೆಯ ಮುಖ್ಯ ಹಂದರ.

ಧಾರಾವಾಹಿಯ ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದಲ್ಲದೆ ಇತ್ತೀಚೆಗೆ ನಮ್ಮನ್ನು ಅಗಲಿದ ಕಲಾವಿದ ಯಶವಂತ್ ಸರದೇಶಪಾಂಡೆ ಸಹ ಒಂದು ವಿಶೇಷ ಪಾತ್ರದಲ್ಲಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಟಿ ಮಾಳವಿಕಾ ಸಹ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.





