ಸಿನಿಮಾರಂಗ ಸಮುದ್ರ ಇದ್ದಂತೆ, ಎಲ್ಲರನ್ನೂ ಸ್ವಾಗತಿಸುತ್ತದೆ. ಆದರೆ ಕೆಲವರನ್ನು ಮಾತ್ರ ಬಾಚಿ ತಬ್ಬಿಕೊಳ್ಳುತ್ತದೆ. ಆ ಅದೃಷ್ಟ ಪರೀಕ್ಷೆಗೆ ಪ್ರತಿನಿತ್ಯ ಸಾಕಷ್ಟು ಆಶಾವಾದಿಗಳು ಹಾಜರಾಗುತ್ತಲೇ ಇರುತ್ತಾರೆ.
ಆರಿಸಿಕೊಳ್ಳುವ ಪಾತ್ರ, ನಿರ್ದೇಶಕ, ಬ್ಯಾನರ್ ಎಲ್ಲ ಮುಖ್ಯವಾಗುತ್ತವೆ. ಕೆಲವರು ಎಷ್ಟೇ ಸೈಕಲ್ ಹೊಡೆದರೂ, ತಿಪ್ಪರಲಾಗ ಹಾಕಿದರೂ ಒಂದೊಳ್ಳೆ ಬ್ರೇಕ್ ಸಿಗುವುದಿಲ್ಲ. ಅದೃಷ್ಟ ಇರೋರಿಗೆ ಮಾತ್ರ ಅದಾಗಿ ಹುಡುಕಿಕೊಂಡು ಬರುತ್ತದೆ.
ಅಂಥ ಒಂದು ಅವಕಾಶ ಲಾಸ್ಯಾ ನಾಗರಾಜ್ ಎಂಬ ನವ ನಟಿಗೆ ಲಭಿಸಿದೆ. ಲಾಸ್ಯಾ ನೃತ್ಯ ಪಟು. ಟಿವಿ ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾಳೆ.
ಹೆಚ್ಚು ಜನಪ್ರಿಯತೆ ಸಿಕ್ಕಿದ್ದು `ತಕಧಿಮಿತ' ಹಾಗೂ `ಬಿಗ್‌ಬಾಸ್' ರಿಯಾಲಿಟಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದಂತೆ ಸಿನಿಮಾದಲ್ಲೂ ಅವಕಾಶ ಕೇಳಿಕೊಂಡು ಬಂತು.
ಈಗ `ಮಂಗಳವಾರ ರಜಾ ದಿನ' ಎಂಬ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಲಾಸ್ಯಾಳಿಗೆ ಬೋಲ್ಡ್ ಪಾತ್ರವೇ ಸಿಕ್ಕಿದೆ. ಉಪೇಂದ್ರರ ಚಿತ್ರದಲ್ಲೂ ನಟಿಸಿದ್ದು ಅದು ರಿಲೀಸ್ ಆಗಬೇಕಿದೆ.
ಎಲ್ಲರೂ ಗುರುತಿಸುವಂಥ ಪಾತ್ರ ಮಾಡಬೇಕು ಎಂಬ ಆಸೆ ಲಾಸ್ಯಾಳಿಗಿತ್ತು. ಮಲೆಯಾಳಂ ಸಿನಿಮಾ `ಹೆಲೆನ್' ಒಂದು ಸಾಧಾರಣ ಹುಡುಗಿಯ ಸುತ್ತ ಹೆಣೆದಿರುವ ಕಥೆ. ಇದು ಸಖತ್ ಛಾಲೆಂಜಿಂಗ್ ರೋಲ್ ಆಗಿದ್ದು, ಪ್ರತಿಯೊಬ್ಬ ನಟಿಯೂ ಇಷ್ಟಪಡುವಂತಹ ಪಾತ್ರವಂತೆ.
`ಹೆಲೆನ್' (ಇದು ಬಯೋಪಿಕ್ ಅಲ್ಲ). ಸಾಕಷ್ಟು ಪ್ರಶಂಸೆ ಪಡೆದಂಥ ಚಿತ್ರ, ನೈಜ ಘಟನೆ ಆಧಾರಿತ. ಈ ಚಿತ್ರ ಲಾಸ್ಯಾಳನ್ನು ಬಹಳವಾಗಿ ಕಾಡಿತ್ತು. ಕನ್ನಡದಲ್ಲಿ ರೀಮೇಕ್ ಆದರೆ ತಾನು ಆ ಪಾತ್ರ ವಹಿಸಬೇಕು ಎಂದು ಆಸೆಪಡುತ್ತಾ ಇರುವಾಗಲೇ ಕೇರಳದ ಅರುಣ್ ಕನ್ನಡ ಸಿನಿಮಾ ಮಾಡಲು ಬಂದಾಗ ಲಾಸ್ಯಾಳ ಭೇಟಿಯಾಯಿತು.
ಅವರು ಹೆಲೆನ್ ಬಗ್ಗೆ ಹೇಳಿದರು. ನೀವು ನಟಿಸುವಂತಿದ್ದರೆ ರೀಮೇಕ್ ರೈಟ್ಸ್ ತರ್ತೀನಿ ಎಂದಾಗ ಲಾಸ್ಯಾಳಿಗೆ ಆಶ್ಚರ್ಯ, ಜೊತೆಗೆ ಸಂತೋಷ! ಇವೆಲ್ಲವನ್ನೂ ಹೇಳುವಾಗ ಲಾಸ್ಯಾ ಖುಷಿಯಿಂದ ತೇಲಾಡುತ್ತಿದ್ದಳು.
ಈ ತಂಡ ಹೇಗನ್ನಿಸಿತು?
``ಇದೆಂಥ ಒಳ್ಳೆಯ ಟೀಮ್ ಅಂದ್ರೆ ನಿರ್ಮಾಪಕರು, ನಿರ್ದೇಶಕರಾದ ರೋಹಿತ್, ಟೆಕ್ನೀಶಿಯನ್ಸ್ ಎಲ್ಲರೂ ಈ ಸಿನಿಮಾ ತಯಾರಿಕೆಯಲ್ಲಿ ಮುಳುಗಿಹೋಗಿದ್ದಾರೆ. ಈ ಪಾತ್ರದ ಸಲುವಾಗಿ ನಾನು ಆ್ಯಕ್ಟಿಂಗ್ ವರ್ಕ್ ಶಾಪ್ ಅಟೆಂಡ್ ಮಾಡುತ್ತಿದ್ದೀನಿ.
``ಇಲಿ ಜೊತೆಗಿರುವ ಸೀನ್ ಇರೋದ್ರಿಂದ ನಾನೊಂದು ಇಲಿ ಸಾಕಿ ರೂಢಿಸಿಕೊಂಡು ಹೋಗುತ್ತಿದ್ದೀನಿ. ನನ್ನ ವೃತ್ತಿಯಲ್ಲಿ ಇಷ್ಟು ಬೇಗ ಇಂತಹ ಪಾತ್ರ ಬರುತ್ತದೆಂದು ಅಂದುಕೊಂಡಿರಲಿಲ್ಲ.''
ಸಿನಿಮಾ ತಾರೆ ಆಗುವ ಆಸೆ ಇತ್ತಾ?
ಬೇಸಿಕಲಿ ನಾನು ಭರತನಾಟ್ಯ, ಕಥಕ್ ಡ್ಯಾನ್ಸರ್. ನಮ್ಮದೇ ಆದ ಆರಾಧನಾ ಡ್ಯಾನ್ಸ್ ಸ್ಕೂಲ್ ಇದೆ. ನನ್ನ ಜರ್ನಿ ಶುರುವಾಗಿದ್ದು, ಸೀರಿಯಲ್ಸ್ ನಿಂದ. `ಮದುಮಗಳು, ಪದ್ಮಾವತಿ' ಧಾರಾವಾಹಿಗಳಲ್ಲಿ ನಟಿಸಿದೆ. `ಡ್ಯಾನ್ಸ್ ಡ್ಯಾನ್ಸ್, ತಕಧಿಮಿತ' ಡ್ಯಾನ್ಸ್ ಶೋಗಳಲ್ಲಿ ಭಾಗಹಿಸಿದೆ. ಹಾಗೆಯೇ ಸಿನಿಮಾದಲ್ಲೂ ಅವಕಾಶ ಕೇಳಿಕೊಂಡು ಬಂತು. `ಅಸತೋಮ ಸದ್ಗಮಯ' ಚಿತ್ರದಲ್ಲೂ ನಟಿಸಿದೆ. ದಯಾಳ್‌ರವರ `ರಂಗನಾಯಕಿ' ಸಿನಿಮಾದಲ್ಲಿ ಪ್ಯಾರಲ್ ರೋಲ್ ಮಾಡಿದೆ. ಇದೀಗ ರಿಲೀಸ್ ಆಗುತ್ತಿರುವ `ಮಂಗಳಾರ ರಜಾ ದಿನ' ಚಿತ್ರದಲ್ಲೂ ಬೋಲ್ಡ್ ಪಾತ್ರ ವಹಿಸಿದ್ದೀನಿ. ಉಪೇಂದ್ರ, ವೇದಿಕಾರವರ ಜೊತೆ `ಹೋಂ ಮಿನಿಸ್ಟರ್' ಚಿತ್ರವಿದೆ.`ಹೆಲೆನ್' ರೀಮೇಕ್ ಚಿತ್ರ ಒಂದೊಳ್ಳೆ ಬ್ರೇಕ್ ಆಗುತ್ತಾ? ಈ ವಿಷಯದಲ್ಲಿ ಮಾತ್ರ ನಾನು ತುಂಬಾ ಲಕ್ಕಿ! ನಿರ್ಮಾಪಕ, ನಿರ್ದೇಶಕ ಅರುಣ್ ಕುಮಾರ್ ಮಲೆಯಾಳಂ ಸಿನಿಮಾ ಮಾಡಬೇಕೆಂದು ನನ್ನ ಜೊತೆ ಡಿಸ್ಕಸ್ ಮಾಡುವಾಗ ನಾನು `ಹೆಲೆನ್' ಬಗ್ಗೆ ಹೇಳಿದೆ. ಕನ್ನಡದಲ್ಲಿ ಮಾಡಿದರೆ ಚೆನ್ನಾಗಿರುತ್ತದೆ ಎಂದಿದ್ದೆ. ಅವರು ಕೂಡಲೇ ರೀಮೇಕ್ ರೈಟ್ಸ್ ತರುತ್ತೇನೆ, ನೀವೇ ಆ ಪಾತ್ರ ಮಾಡಬೇಕು ಅಂದರು. ದೊಡ್ಡ ದೊಡ್ಡ ನಾಯಕಿಯರ ಹೆಸರುಗಳು ಆಗಲೇ ಬಂದು ಹೋಗಿತ್ತು. ನಿನಗೊಂದು ಒಳ್ಳೆಯ ಬ್ರೇಕ್, ಮಾಡು ಎಂದು ಪ್ರೋತ್ಸಾಹಿಸಿದರು. ನಿರ್ದೇಶನದ ಜವಾಬ್ದಾರಿ ರೋಹಿತ್ ವಹಿಸಿಕೊಂಡರು. ಅವರು `ದೇವಕಿ, ಮಮ್ಮಿ' ಸಿನಿಮಾಗಳನ್ನು ಈಗಾಗಲೇ ಕೊಟ್ಟಿದ್ದಾರೆ.