ಜಾಗೀರ್ದಾರ್*
'ಮಡ್ಡಿʼ ಚಿತ್ರದ ಮೂಲಕ ಭಾರತದ ಮೊದಲ ಮಡ್ ರೇಸಿಂಗ್ ಚಿತ್ರವನ್ನು ನಿರ್ದೇಶಿಸಿದ್ದ ಡಾ. ಪ್ರಗಭಾಲ್, ಇದೀಗ ಮತ್ತೊಂದು ವಿಶಿಷ್ಟ ಹಾಗೂ ಸಾಹಸಭರಿತ ವಿಷಯವನ್ನು ಭಾರತೀಯ ಸಿನಿಮಾ ಪ್ರೇಮಿಗಳ ಮುಂದೆ ತರಲು ಸಜ್ಜಾಗಿದ್ದಾರೆ. ನಿರ್ಮಾಪಕರಾದ ಪ್ರೇಮಾ ಕೃಷ್ಣದಾಸ್ ಮತ್ತು ಸಿ ದೇವದಾಸ್ ಅವರ ʻಪಿಕೆ7 ಸ್ಟುಡಿಯೋಸ್ʼ ಮೂಲಕ ʻಜಾಕಿʼ ಹೆಸರಿನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸಾಂಪ್ರದಾಯಿಕ ಮದುರೈ ಟಗರು ಕಾಳಗವನ್ನೇ ಆಧಾರವಾಗಿಟ್ಟುಕೊಂಡ ಕಥೆ ಇದಾಗಿರಲಿದೆ. ಅಂದಹಾಗೆ, ಇಂದು (ಸೆ. ೨೫) ಈ ಚಿತ್ರದ ಮೊದಲ ಮೋಷನ್ ಪೋಸ್ಟರ್ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ.
ಮದುರೈ ಪ್ರವಾಸದ ವೇಳೆ ಟಗರು ಕಾಳಗ ಮೊದಲ ಬಾರಿ ಕಂಡ ನಿರ್ದೇಶಕ ಪ್ರಗಭಾಲ್ ಅವರಿಗೆ ಅದು ಕೇವಲ ಕ್ರೀಡೆ ಅಲ್ಲ, ಟಗರು ಹಾಗೂ ಅದರ ಪಾಲಕರ ನಡುವಿನ ಆಳವಾದ ಬಾಂಧವ್ಯದ ಸಾಂಸ್ಕೃತಿಕ ಅಭಿವ್ಯಕ್ತಿ ಎಂದು ತಿಳಿಯಿತು. 2022ರಿಂದಲೇ ಮದುರೈಯಲ್ಲೇ ವಾಸವಿದ್ದು ಸಂಶೋಧನೆ ನಡೆಸಿ, ನೈಜ ಕಥೆಯನ್ನು ಬರೆದಿದ್ದಾರವರು.
ಚಿತ್ರದ ವಾಸ್ತವಿಕತೆಗೆ ಪಾತ್ರಧಾರಿಗಳು ಟಗರುಗಳ ಜೊತೆಗೆ ನೈಜ ಸಂಬಂಧ ಬೆಳೆಸಬೇಕಾಯಿತು. ಅದಕ್ಕಾಗಿಯೇ ಸಿನಿಮಾ ಸಲುವಾಗಿಯೇ ಒಂದಷ್ಟು ಟಗರುಗಳನ್ನು ಖರೀದಿಸಿ, ಅವುಗಳ ಜೊತೆ ದಿನನಿತ್ಯ ಬೆರೆತು, ತರಬೇತಿ ಪಡೆದಿದೆ ಚಿತ್ರತಂಡ.
ಈ ʻಜಾಕಿʼ ಸಿನಿಮಾಕ್ಕೆ ನಟರ ಆಯ್ಕೆ ದೊಡ್ಡ ಸವಾಲಾಗಿತ್ತು. ಶಾರೀರಿಕ ತರಬೇತಿ ಜೊತೆಗೆ ಗಾಯಗಳ ಭೀತಿಯೂ ಎದುರಾಗಿತ್ತು. ಯುವನ್ ಕೃಷ್ಣ ಮತ್ತು ರಿಧನ್ ಕೃಷ್ಣಾಸ್ ತಮ್ಮ ಶ್ರಮದಿಂದ ಈ ಸವಾಲನ್ನು ಸ್ವೀಕರಿಸಿ, ಮದುರೈಯಲ್ಲೇ ವಾಸವಿದ್ದು ಟಗರುಗಳ ಜೊತೆ ತರಬೇತಿ ಪಡೆದಿದ್ದಾರೆ. ಅಮ್ಮು ಅಭಿರಾಮಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಮಧುಸೂಧನ್ ರಾವ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಚಿತ್ರದ ನೈಜತೆಗೆ ಮದುರೈ ಸ್ಥಳೀಯರು ಹಾಗೂ ಟಗರುಗಳ ಮಾಲೀಕರೂ ಚಿತ್ರತಂಡಕ್ಕೆ ಸಹಕಾರ ನೀಡಿದ್ದಾರೆ. ಹೀರೋ ಹಾಗೂ ಅವನ ಟಗರಿನ ನಡುವಿನ ಬಾಂಧವ್ಯ ಕಥೆಯ ಹೃದಯವಾಗಿದ್ದು, ಖಳನಾಯಕನ ಪಾತ್ರವೂ ಅದೇ ಮಟ್ಟಿಗೆ ಬಲಿಷ್ಠವಾಗಿದೆ. ಮೂರು ಆಡುಗಳನ್ನು ಕೈಯಲ್ಲಿ ಹಿಡಿದು ಅವನು ಎದುರಾಗುವ ಸನ್ನಿವೇಶಗಳು ಚಿತ್ರಕ್ಕೆ ಹೆಚ್ಚುವರಿ ತೂಕ ನೀಡುತ್ತವೆ.
ಇದೀಗ ಮೂರು ವರ್ಷಗಳ ಪರಿಶ್ರಮದ ಫಲವಾಗಿ ಮೂಡಿಬಂದಿರುವ ʻಜಾಕಿʼ ಸಿನಿಮಾ, ಟಗರು ಕಾಳಗದ ಪೈಪೋಟಿ ಜೊತೆಗೆ ಮದುರೈ ಸಂಸ್ಕೃತಿಯನ್ನ ವಿಶ್ವದ ಮುಂದೆ ತೆರೆದಿಡುವ ಪ್ರಯತ್ನವೂ ಆಗಲಿದೆ. ಸದ್ಯ ಬಿಡುಗಡೆ ಆಗಿರುವ ಮೋಷನ್ ಪೋಸ್ಟರ್, ಕುತೂಹಲಕ್ಕೆ ಒಗ್ಗರಣೆ ಹಾಕಿದ್ದು, ಮುಂದಿನ ದಿನಗಳಲ್ಲಿ ಇದೇ ಚಿತ್ರದ ಮತ್ತಷ್ಟು ವಿಶೇಷತೆಗಳು ಹೊರಬೀಳಲಿವೆ.
*ತಾಂತ್ರಿಕ ಬಳಗ*
ನಿರ್ಮಾಪಕರು: ಪ್ರೇಮಾ ಕೃಷ್ಣದಾಸ್ ಮತ್ತು ಸಿ ದೇವದಾಸ್
ನಿರ್ದೇಶನ: ಡಾ. ಪ್ರಗಭಾಲ್
ಛಾಯಾಗ್ರಹಣ: ಉದಯಕುಮಾರ ಮತ್ತು ತಂಡ
ಸಂಕಲನ : ಶ್ರೀಕಾಂತ್
ಸಂಗೀತ: ಶಕ್ತಿ ಬಾಲಾಜಿ
ಕಲಾ ನಿರ್ದೇಶನ: ಸಿ. ಉದಯಕುಮಾರ (ನೈಜ ಮದುರೈ ಮನೆಗಳು, ಸೆಟ್ ಇಲ್ಲದೆ)
ಧ್ವನಿ: ಪ್ರಶಸ್ತಿ ವಿಜೇತ ರಾಜಾ ಕೃಷ್ಣನ್
ಫೈಟ್ ಮಾಸ್ಟರ್: ಜಾಕಿ ಪ್ರಭು
ವಸ್ತ್ರ ವಿನ್ಯಾಸ: ಜೋಷುವಾ ಮ್ಯಾಕ್ಸ್‌ವೆಲ್