ಈ ಮಾನವ ಜಗತ್ತು ನಿಜಕ್ಕೂ ವೈವಿಧ್ಯತೆಗಳ, ವಿಸ್ಮಯ ಲೋಕ! ಇಲ್ಲಿ ವಿಭಿನ್ನ ವ್ಯಕ್ತಿತ್ವಗಳ ಜನ ಒಂದಾಗಿದ್ದಾರೆ. ಅದೆಷ್ಟೋ ಘಟನೆಗಳು ತಂತಾನೇ ಅಥವಾ ಕೆಲವು ತಿಳಿಯುವಂತೆ ಘಟಿಸುತ್ತವೆ. ಎಷ್ಟೋ ಸಲ ಇವೆಲ್ಲ ಘಟನೆಗಳೂ ಎಲ್ಲ ಜನರಿಗೂ ನೇರ ತಲುಪುವುದಿಲ್ಲ. ಈ ಲೇಖನದ ಮೂಲಕ ನಾವು ನಮ್ಮ ಎಲ್ಲಾ ಭಾರತೀಯ ಭಾಷೆಗಳ ವೈವಿಧ್ಯಮಯ ಘಟನೆಗಳನ್ನು ಆಯಾ ಸಿನಿಮಾಗಳ ಮೂಲಕ ನಮ್ಮ ಓದುಗರಿಗೆ ತಲುಪಿಸುವ ಸಣ್ಣದೊಂದು ಪ್ರಯತ್ನ ನಡೆಸಿದ್ದೇವೆ. ಇಡೀ ದೇಶದ ಈ ಎಲ್ಲಾ ಸಿನಿಮಾಗಳ ಕುರಿತ ಮಾಹಿತಿ ಪಡೆಯೋಣವೇ....?
ಕನ್ನಡ : ಲವ್ ಯೂ ಮುದ್ದು
`ಪ್ರೀತಿಯನ್ನು ಪಡೆದುಕೊಳ್ಳುವ ಶಕ್ತಿ ಇಲ್ಲದೇ ಇದ್ರೆ ಪ್ರೀತಿ ಮಾಡಬಾರದು,' ಎಂಬ ಎಳೆಯೊಂದಿಗೆ ಕನ್ನಡ ಚಿತ್ರರಂಗದಲ್ಲೊಂದು `ಲವ್ ಯೂ ಮುದ್ದು' ಹೆಸರಿನ ಸಿನಿಮಾ ಮೂಡಿಬಂದಿದ್ದು, ಯಶಸ್ವಿಯಾಗಿ ಇಪ್ಪತ್ತೈದನೇ ದಿನದತ್ತ ಸಾಗಿದೆ. ಟೈಟಲ್ ಹಾಗೂ ತನ್ನ ಕಂಟೆಂಟ್ ಮೂಲಕ ಪ್ರೇಕ್ಷಕ ವಲಯದಲ್ಲಿ ಮೂಡಿಸಿದ್ದ ಈ ಚಿತ್ರ ಕುತೂಹಲ ಮೂಡಿಸಿತ್ತು. ಮೊದಲ ದಿನದಂದು ಪ್ರದರ್ಶನ ಮಾತ್ರವಲ್ಲ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರೂ ಸಹ ಚಿತ್ರದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರೊಡನೆ ಬಹುಸಂಖ್ಯೆಯ ಚಿತ್ರಗಳ ಬಿಡುಗಡೆಯ ಸಾಲಿನ ನಡುವೆಯೂ ಸಹ `ಲವ್ ಯೂ ಮುದ್ದು' ಪ್ರೇಕ್ಷಕ ಪ್ರಭುಗಳ ಮನ ಗೆದ್ದು ಚಿತ್ರಮಂದಿರದಲ್ಲಿ ಮುಂದೆ ಸಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ಫೇಮ್ಸ್ ಆದ ಅಂಜಲಿ ಬಾಯಿ ಶಿಂಧಿ ಹಾಗೂ ಆಕಾಶ್ ದಂಪತಿಯ ವಿಡಿಯೋಗಳನ್ನು ಕೋಟ್ಯಂತರ ಮಂದಿ ನೋಡಿರುತ್ತಾರೆ. ಈ ದಂಪತಿಯ ಕಥೆ ಎಲ್ಲ ಪ್ರೇಮಿಗಳಿಗೂ ಸ್ಛೂರ್ತಿ ಆಗುವಂಥದ್ದು. ಯಾವುದೇ ಸಂದರ್ಭ ಬಂದರೂ ಪ್ರೀತಿಸಿದವರನ್ನು ಕೈಬಿಡಬಾರದು ಎಂಬುದನ್ನು ಈ ಜೋಡಿಯನ್ನು ನೋಡಿ ಕಲಿಯಬೇಕು. ಆಕಾಶ್ ಹಾಗೂ ಅಂಜಲಿ ಪ್ರೀತಿಯೇ ಸರ್ವಸ್ವ, ಪ್ರೀತಿಯೇ ಸಕಲ ಅನ್ನೋದನ್ನು ಸಾಬೀತುಪಡಿಸಿದ ಜೋಡಿ. ಅವರ ಜೀವನದಲ್ಲಾದ ಏಳಬೀಳಿನ ಕಥೆಯನ್ನು ಕುಮಾರ್ ತಮ್ಮ ಸಿನಿಮಾದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪ್ರೀತಿಸಿ ಮದುವೆಯಾದ ನವಜೋಡಿ ದೇವರ ದರ್ಶನ ಪಡೆಯಲು ಹೋದಾಗ ಊಹಿಸಲಾಗದ ಘಟನೆ ನಡೆಯಿತು. ಅದು ಏನು....? ಅವರಿಬ್ಬರ ಬಾಳಲ್ಲಿ ನಡೆದ ಘೋರ ದುರಂತವೇನು....? ಅದರ ನಂತರ ಏನಾಯಿತು ಎನ್ನುವುದೇ ಸಿನಿಮಾದ ಕಥೆ.
ಇದೇ ಮೊದಲ ಬಾರಿಗೆ ನಿರ್ದೇಶಕ ಕುಮಾರ್ ಲವ್ ಸ್ಟೋರಿ ನಿರ್ದೇಶಿಸಿದ್ದಾರೆ. ಚಿತ್ರವನ್ನು ಕಿಶನ್ ಎಂಟರ್ ಟೇನ್ ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಟಿ.ಎಸ್. ತಂಡದ ಭಾಗವಾಗಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ ಶಾಸ್ತ್ರೀಯ ಸಂಗೀತ ನಿರ್ದೇಶನ ಹಾಗೂ ಸಿ.ಎನ್. ದೀಪು ಸಂಕಲನ ನಿರ್ವಹಿಸಿದ್ದಾರೆ. ನಿಜ ಜೀವನದ ಆಕಾಶ್ ಅಂಜಲಿ ದಂಪತಿ ಪಾತ್ರಗಳಿಗೆ ಸಿದ್ದು ಮೂಲಿಮನಿ ಹಾಗೂ ಯುವ ನಟಿ ರೇಷ್ಮಾ ಅಭಿನಯಿಸಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ತಬಲ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಸ್ವಾತಿ ತಾರಾಬಳಗದಲ್ಲಿದ್ದಾರೆ.





