ರಾಘವೇಂದ್ರ ಅಡಿಗ ಎಚ್ಚೆನ್.

ಹಿರಿಯ ಪತ್ರಕರ್ತರಾದ ಟಿ.ಜೆ.ಎಸ್. ಜಾರ್ಜ್ ಅವರು ಸುದ್ದಿ ಮನೆಗೆ ಘನತೆ ತಂದರೆ, ಸಂಜೆವಾಣಿ ಅ.ಚ.ಶಿವಣ್ಣ ಅವರು ಸ್ಕೂಪ್ ಮತ್ತು ಬ್ರೇಕಿಂಗ್ ನ್ಯೂಸ್‌ಗಳಿಗೆ ಹೊಸ ಮೆರಗು ಕೊಟ್ಟರು ಎಂದು ಕೆಯುಡಬ್ಲೂಜೆ ಶ್ಲಾಘಿಸಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯೂಡಬ್ಲ್ಯೂಜೆ)ವತಿಯಿಂದ ಅಗಲಿದ ಹಿರಿಯ ಪತ್ರಕರ್ತರಾದ ಟಿಜೆಎಸ್ ಜಾರ್ಜ್, ಅ.ಚ.ಶಿವಣ್ಣ ಅವರಿಗೆ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಆರಂಭದಲ್ಲಿ ಇಬ್ಬರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಒಂದು ನಿಮಿಶ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

FB_IMG_1764995964207

ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಹಿರಿಯ ಪತ್ರಕರ್ತರಾದ ಟಿಜೆಎಸ್ ಜಾರ್ಜ್, ಅ.ಚ.ಶಿವಣ್ಣ ಅವರಲ್ಲಿದ್ದ ಸಮಗ್ರ ಒಳನೋಟ ಮತ್ತು ದೂರದೃಷ್ಟಿಯಿಂದಾಗಿ ಸುದ್ದಿಮನೆಗೆ ಆ ಕಾಲಘಟ್ಟದಲ್ಲಿ ತನ್ನದೇ ಆದ ಮಹತ್ವ ತುಂಬಿತ್ತು ಎಂದು ಹೇಳಿದರು.
ಇಂದು ನಾವು ಕಾಣುತ್ತಿರುವ ಪತ್ರಿಕೋದ್ಯಮದಲ್ಲಿ ಒಂದಷ್ಟು ವೃತ್ತಿ ಬದ್ದತೆಯ ಬೆಳವಣಿಗೆಗೆ ಅಂದು ಅವರಲ್ಲಿದ್ದ ಕೆಲ ಮೌಲ್ಯಗಳು ಪೂರಕವಾಗಿದ್ದವು ಎಂದು ಅಭಿಪ್ರಾಯಪಟ್ಟರು.
ಕಳೆದ ಇಪ್ಪತ್ತೈದು ವರ್ಷಗಳಿಂದ ಪತ್ರಿಕೋದ್ಯಮವು ತಂತ್ರಜ್ಞಾನದ ಬದಲಾವಣೆಗೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿದೆ. ಟಿ.ಜೆ.ಎಸ್ ಮತ್ತು ಶಿವಣ್ಣರವರು ತಮ್ಮ ವೃತ್ತಿಜೀವನದಲ್ಲಿ ಮಾಧ್ಯಮದಲ್ಲಿ ಆದ ಬದಲಾವಣೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಂಡು ಉಳಿದ ಪತ್ರಕರ್ತರಿಗೆ ಮಾದರಿಯಾದರು ಎಂದು ಹೇಳಿದರು.

FB_IMG_1764995958333

ಸಂಯುಕ್ತ ಕರ್ನಾಟಕ ಪತ್ರಿಕೆಯ ಹುಣಸವಾಡಿ ರಾಜನ್ ಮಾತನಾಡಿ, ಟಿಜೆಎಸ್ ಜಾರ್ಜ್ ಮತ್ತು ಅ.ಚ.ಶಿವಣ್ಣ ಇಬ್ಬರೂ ವೃತ್ತಿ ಬದ್ಧತೆಯನ್ನು ಮೆರೆದವರು. ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾದವರು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಘವು ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮದಲ್ಲಿ ಟಿಜೆಎಸ್ ಜಾಜರ್ ಹಾಗೂ ಅ.ಚ ಶಿವಣ್ಣ ಅವರನ್ನು ಅವರ ಮನೆಯಂಗಳದಲ್ಲಿ ಸನ್ಮಾನಿಸಿದ್ದು ಹೆಮ್ಮೆಯ ಸಂಗತಿಯಾಗಿತ್ತು. ನಮ್ಮನ್ನಗಲಿದ ಈ ಇಬ್ಬರೂ ಪತ್ರಕರ್ತರ ಬದ್ಧತೆ ಮತ್ತು ಸಾಮರ್ಥ್ಯ ನಿಜಕ್ಕೂ ಇಂದಿನ ಪತ್ರಕರ್ತರಿಗೆ ಮಾದರಿ ಎಂದರು.

FB_IMG_1764995961369

ಐಎ್ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಜಾಜರ್ ಹಾಗೂ ಶಿವಣ್ಣ ವಿಶಿಷ್ಟ ದೃಷ್ಟಿಕೋನ ಹೊಂದಿದ್ದ ಪತ್ರಕರ್ತರಾಗಿದ್ದರು. ಅವರಿಬ್ಬರ ಪತ್ರಿಕೋದ್ಯಮ ಸೇವೆ ಎಂದೆಂದಿಗೂ ಪತ್ರಿಕೋದ್ಯಮದಲ್ಲಿ ನೆನಪಿನಲ್ಲಿ ಇಡುವಂತಾದ್ದಾಗಿದೆ ಎಂದರು.
ಹಿರಿಯ ಪತ್ರಕರ್ತರಾದ ಡಿ.ಮಹಾದೇವಪ್ಪ ಅವರು ಮಾತನಾಡಿ, ಜಾರ್ಜ್ ಅವರೊಬ್ಬ ಸಂತನಂತೆ ಸುದ್ದಿಮನೆಯಲ್ಲಿ ಗಮನ ಸೆಳೆದರು. ಅ.ಚ.ಶಿವಣ್ಣ ಅವರು ಸುದ್ದಿ ಗ್ರಹಿಸಿ ಬರೆಯುವುದರಲ್ಲಿ ಪ್ರಾವಿಣ್ಯತೆ ಹೊಂದಿದ್ದರು ಎಂದು ಇಬ್ಬರು ಪತ್ರಕರ್ತರ ಗುಣಗಾನ ಮಾಡಿದರು.
ಅ.ಚ.ಶಿವಣ್ಣ ಅವರ ಪುತ್ರ ಡಾ.ದೀಪಕ್ ಶಿವಣ್ಣ ಮಾತನಾಡಿ, ಅಪ್ಪನ ಬಗ್ಗೆ ಈಗಲೂ ಸುದ್ದಿಮನೆಯಲ್ಲಿ ಇಷ್ಟೊಂದು ಗೌರವ ಇಟ್ಟುಕೊಂಡಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಬೆಂಗಳೂರು ನಗರ ಜಿಲ್ಲಾ ಘಟದ ಸದಸ್ಯರು, ಗ್ರಾಮಾಂತರ ಘಟಕದ ಪದಾಧಿಕಾರಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಸ್.ಸೋಮಶೇಖರ ಗಾಂಧಿ ವಂದಿಸಿದರು

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ