ದಕ್ಷಿಣಭಾರತದ ಚಿತ್ರರಂಗದಲ್ಲಿ ಸಿಂಪಲ್ ಌಂಡ್ ಬ್ಯೂಟಿಫುಲ್ ನಟಿ ಅಂತಾನೇ ಫೇಮಸ್ ಆಗಿರೋ ನಿತ್ಯಾ ಮೆನನ್ಗೆ ದಿಢೀರನೇ ಏನಾಯ್ತು..? ಕನ್ನಡ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿದ್ದ ಅವರು ಈ ನಿರ್ಧಾರ ತೆಗೆದುಕೊಂಡಿದ್ದೇಕೆ..? ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ನಲ್ಲೇನಾದ್ರೂ ಕಸಿವಿಸಿ ಆಯ್ತಾ..? ಅನ್ನೋ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಯಾಕಂದ್ರೆ, ಬಹುಭಾಷಾ ನಟಿಯಾಗಿರುವ ನಿತ್ಯಾ ಮೆನನ್ ಏಕಾಏಕಿ ಸಿನಿಮಾ ತೊರೆಯುವುದಾಗಿ ಹೇಳಿದ್ದಾರೆ. ‘ನನ್ನ ಜೀವನದಲ್ಲಿ ಸಿನಿಮಾವನ್ನೇ ಇಷ್ಟಪಡದ ವ್ಯಕ್ತಿ ನಾನು. ಎಲ್ಲರಂತೆ ಸಾಮಾನ್ಯವಾಗಿರಬೇಕು ಎಂದುಕೊಂಡಿದ್ದ ನನಗೆ ಸೆಲೆಬ್ರಟಿ ಎನಿಸಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ನಾನು ಸಿನಿಮಾ ನಟನೆ ನಿಲ್ಲಿಸುತ್ತೇನೆ’ ಎಂದು ನಟಿ ನಿತ್ಯ ಮೆನನ್ ಹೇಳಿದ್ದಾರೆ.
ಬೆಂಗಳೂರು ಮೂಲದ ನಟಿ ನಿತ್ಯ ಮೆನೆನ್ ಅವರು ಇದೀಗ ಒಂದೇ ಒಂದು ಅವಕಾಶ ಸಿಕ್ಕಿದರೆ ಸಿನಿಮಾ ರಂಗವನ್ನೇ ತೊರೆಯುವುದಾಗಿ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಬಿಹೈಂಡ್ ವುಡ್ಸ್ ತಮಿಳು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಿತ್ಯಾ ಮೆನನ್ ಈ ವಿಷಯ ಬಹಿರಂಗಪಡಿಸಿದ್ದಾರೆ.
‘ಸಿನಿಮಾವನ್ನು ಇಷ್ಟಪಡದ ವ್ಯಕ್ತಿ ನಾನು. ಈಗಲೂ ಹಾಗೆಯೇ ಇದ್ದೇನೆ. ಒಂದು ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಸಿನಿಮಾ ನಟನೆಯನ್ನು ನಿಲ್ಲಿಸುತ್ತೇನೆ. ಅದೇ ವಿಪರ್ಯಾಸ. ನಾನು ಈ ವಿಷಯ ಹೇಳಿದರೆ ನನಗೆ ಸಿನಿಮಾದ ಬಗ್ಗೆ ಕೃತಜ್ಞತೆ ಇಲ್ಲ ಎಂದು ಅನಿಸುತ್ತದೆ. ಆದ್ದರಿಂದ ಈ ಬಗ್ಗೆ ಮಾತನಾಡುವುದಿಲ್ಲ. ನನ್ನ ವ್ಯಕ್ತಿತ್ವ ಮತ್ತು ಸಿನಿಮಾ ನಡುವೆ ದೊಡ್ಡ ವ್ಯತ್ಯಾಸವಿದೆ. ನಾನು ಎಲ್ಲರಂತೆಯೂ ಸಾಮಾನ್ಯ ಜೀವನವನ್ನು ಬಯಸಿದ್ದೆ. ಯಾವುದೇ ನಿರ್ಬಂಧಗಳಿಲ್ಲದೆ ಮುಕ್ತವಾಗಿರಬೇಕೆಂದು ಬಯಸಿದ್ದೆ. ಈಗ ಅದು ಸಾಧ್ಯವಿಲ್ಲ. ನಿಜವಾಗಿ ನಾನು ಹಾಗೆಯೇ ಇದ್ದೇನೆ ಕೂಡ. ನನಗೆ ಪ್ರಯಾಣವೆಂದರೆ ಇಷ್ಟ. ಉದ್ಯಾನವನಕ್ಕೆ ಹೋಗಬೇಕು, ಮರಗಳೆಂದರೆ ಇಷ್ಟ. ಆದರೆ ಈಗ ಯಾವುದನ್ನೂ ನಾನು ಮುಕ್ತವಾಗಿ ಮಾಡುವುದಕ್ಕೆ ಅವಕಾಶಗಳು ಇಲ್ಲ. ಕೆಲವೊಮ್ಮೆ ಸಿನಿಮಾ ಬೇಕೇ ಬೇಕು ಎಂದು ಯೋಚಿಸಿದ್ದೇನೆ. ವೃತ್ತಿಯಿಂದ ನಿಧಾನವಾಗಿ ದೂರವಾಗಬಹುದು ಎಂದು ಭಾವಿಸಿದಾಗ ರಾಷ್ಟ್ರೀಯ ಪ್ರಶಸ್ತಿ (ತಿರುಚಿತ್ರಂಬಲಂ) ಸಿಕ್ಕಿತು. ಅದು ದೇವರ ನಿರ್ಧಾರ’ ಎಂದು ನಿತ್ಯಾ ಮೆನನ್ ಸಂದರ್ಶನದಲ್ಲಿ ಹೇಳಿದ್ದಾರೆ.
ಕರ್ನಾಟಕದ ಅದ್ರಲ್ಲೂ ಬೆಂಗಳೂರು ಮೂಲದ ನಿತ್ಯಾ ಮೆನನ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಾಲನಟಿಯಾಗಿ ಸಿನಿಮಾದ ವೃತ್ತಿ ಜೀವನವನ್ನು ಆರಂಭಿಸಿದವರು. ಮಲಯಾಳಿ ಕುಟುಂಬದಲ್ಲಿ 1990ರಲ್ಲಿ ಜನಿಸಿದ ಇವರ ತಂದೆ, ತಾಯಿ ಬೆಂಗಳೂರಿನಲ್ಲೇ ನೆಲೆ ನಿಂತವರು. ಆರಂಭದಲ್ಲಿ ಪೂರ್ಣಪ್ರಜ್ಞಾ ಶಾಲೆಯಲ್ಲಿ ಓದಿದ ನಿತ್ಯಾ ಮೆನನ್, ಮೌಂಟ್ಕಾರ್ಮಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಬಳಿಕ 1998 ರಲ್ಲಿ, ಮೆನೆನ್ ತನ್ನ 8 ನೇ ವಯಸ್ಸಿನಲ್ಲಿ ಹನುಮಾನ್ ಎಂಬ ಫ್ರೆಂಚ್-ಭಾರತೀಯ ಇಂಗ್ಲಿಷ್ ಚಲನಚಿತ್ರದಲ್ಲಿ ಟಬು ಪಾತ್ರಕ್ಕೆ ಕಿರಿಯ ಸಹೋದರಿಯಾಗಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ಬಳಿಕ ತಮ್ಮ 15ನೇ ವಯಸ್ಸಿನಲ್ಲಿ ಕನ್ನಡ ಚಲನಚಿತ್ರ ‘7 ಓ ಕ್ಲಾಕ್’ನಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ನಂತರ ಜೋಶ್, ಐದೊಂದ್ಲ ಐದು, ಮೈನಾ, ಕೋಟಿಗೊಬ್ಬ 2, ಸೇರಿ ಹಲವು ಸಿನಿಮಾಗಳಲ್ಲಿ ಮಾಡಿದ್ದಾರೆ. ತೆಲುಗಿನಲ್ಲಿ ಅಲಾ ಮೊದಲಿಂದಿ, ಉಸ್ತಾದ್ ಹೋಟೆಲ್, ಬೆಂಗಳೂರು ಡೇಸ್, 100 ಡೇಸ್ ಆಫ್ ಲವ್, ಜನತಾ ಗ್ಯಾರೇಜ್, ಸನ್ ಆಫ್ ಸತತ್ಯಮೂರ್ತಿ, ಗೀತಾ ಗೋವಿಂದಂ, ಗಮನಂ, ಭೀಮ್ಲಾ ನಾಯಕ್, ತಿರುಚಿತ್ರಂಬಲಂ, ತಮಿಳಿನ ಮೆರ್ಸಲ್, ಕಾಂಚನಾ 2 ಸೇರಿದಂತೆ ಮಲಯಾಳಂ ಚಿತ್ರಗಳು ಸೇರಿ ಬರೋಬ್ಬರಿ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಿತ್ಯಾ ಮೆನನ್ ಅಭಿನಯ ಚತುರೆ ಎಂದೆನಿಸಿಕೊಂಡಿದ್ದಾರೆ.