– ರಾಘವೇಂದ್ರ ಅಡಿಗ ಎಚ್ಚೆನ್.
ನಟರೂ, ರಾಜಕಾರಣಿಯೂ ಆದ ಕುಮಾರ್ ಬಂಗಾರಪ್ಪ ಹಾಗೂ ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಅಂತಿಮ ಹಂತದ ಚುತ್ರೀಕರಣ ಮಾತ್ರವೇ ಉಳಿದಿರುವಾಗ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಕೊಡುವುದಕ್ಕಾಗಿ ಪತ್ರಿಕಾಗೋಷ್ಟಿ ಆಯೋಜಿಸಿದೆ. ಅಲ್ಲದೆ ಇದೇ ಸಮಯದಲ್ಲಿ ಚಿತ್ರದ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಆಗಿದೆ.
ಸಾರ್ವಜನಿಕ ಪಡಿತರ ವ್ಯವಸ್ಥೆಯ ಸುತ್ತ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಪಡಿತರ ವಿತರಣೆಯಲ್ಲಿ ನಡೆಯುವ ಆಗು-ಹೋಗುಗಳ ಬಗ್ಗೆ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಆದರೆ ಇಷ್ಟೂ ದಿನ ಮಾಡರ್ನ್ ಹಾಗೂ ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಾಗಿಣಿ ಇದು ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದಾರೆ. ಅವರು ಪಾರ್ವತಿ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ.
” ಹಳ್ಳಿ ಹುಡುಗಿಯೊಬ್ಬಳು ಊರಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುವ ಭ್ರಷ್ಟ ವ್ಯವಸ್ಥೆಯ ವಿರುದ್ದ ಹೇಗೆ ಹೋರಾಡುತ್ತಾಳೆ ಎಂಬುದೇ ಸಿನಿಮಾದ ಕಥೆ. ಮಂಡ್ಯದ ಹಳ್ಳಿಯ ಪರಿಸರದಲ್ಲಿ ಸಿನಿಮಾ ಮೂಡಿಬರುತ್ತಿದೆ. ಗ್ರಾಮೀಣ ಜನರಿಗೆ ಖಂಡಿತ ಈ ಸಿನಿಮಾ ಇಷ್ಟವಾಗುತ್ತದೆ.” ಎನ್ನುವುದು ನಟಿ ರಾಗಿಣಿ ಅವರ ಮಾತು.
ತಾವು ಪಾರ್ವತಿ ಎನ್ನುವ ಪಾತ್ರ ನಿರ್ವಹಿಸುತ್ತಿದ್ದು ಪಾರ್ವತಿ ಎಂದರೆ ಶಕ್ತಿ ದೇವತೆಯ ಹೆಸರು. ಜೀವನದಲ್ಲಿ ಬರುವ ಹೋರಾಟವನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ಶಕ್ತಿ ದೇವತೆ ಹಾಗಾಗಿ ಈ ಪಾತ್ರವೂ ಹಾಗೆಯೇ ಚಿತ್ರಿತವಾಗಿದ್ದು ಅದೇ ಹೆಸರಿನಲ್ಲಿದೆ ಎನ್ನುವುದು ರಾಗಿಣಿ ಅವರ ನುಡಿ.
“ಹಳ್ಳಿಯ ಜನರಿಗೆ ಇಷ್ಟವಾಗುವ ಕಥೆ ಈ ಚಿತ್ರದಲ್ಲಿದೆ. ಪಡಿತರ ವ್ಯವಸ್ಥೆಯ ಲೋಪಗಳನ್ನು ಬಹುತೇಕ ಜನರು ಅನುಭವಿಸಿರುತ್ತಾರೆ. ಅಂತಹ ಎಲ್ಲರಿಗೂ ಈ ಸಿನಿಮಾ ಮನ ಮುಟ್ಟುತ್ತದೆ. ಬಹಳ ಸಮಯದ ಬಳಿಕ ನಾನು ಈ ಸಿನಿಮಾದಲ್ಲಿ ಹಳ್ಳಿಯ ಜನಸಾಮಾನ್ಯ ವ್ಯಕ್ತಿಯ ಪಾತ್ರ ಮಾಡಿದ್ದೇನೆ. ಸಿನಿಮಾ ಬಹಳ ಚೆನ್ನಾಗಿ ತೆರೆಮೇಲೆ ಬರುತ್ತಿದೆ. ಆಹಾರ ಭದ್ರತೆಯ ಮೇಲೆ ಮಾಡಿರುವ ಈ ಸಿನಿಮಾದಲ್ಲಿ ಉತ್ತಮ ಸಂದೇಶವಿದೆ.” ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಈ ಹಿಂದೆ “ತಾಯವ್ವ” ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಸಾತ್ವಿಕ ಪವನ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಛಾಯಾಗ್ರಹಣವನ್ನೂ ನೆರವೇರಿಸಿದ್ದಾರೆ. . ‘ಜಯಶಂಕರ ಟಾಕೀಸ್’ ಸಂಸ್ಥೆಯ ಮೂಲಕ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಅವರು ಬಂಡವಾಳ ಹೂಡಿದ್ದಾರೆ. ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.
ಈ ಸಿನಿಮಾದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ನೀಡಿದಾರೆ. ಹಿರಿಯ ರಾಜಕಾರಣಿ ಶಿವರಾಮೇಗೌಡ ಸಹ ಈ ಚಿತ್ರ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಸುತ್ತಮುತ್ತ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಚಿತ್ರೀಕರಣ ಸಾಗಿದ್ದು ಇದೇ ವರ್ಷದ ಅಂತ್ಯದಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.