ಜಾಗೀರ್ದಾರ್*

ಬಹುನಿರೀಕ್ಷಿತ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಪ್ಯಾನ್-ಇಂಡಿಯಾ ಚಿತ್ರ ‘ದಿ ರಾಜಾಸಾಬ್’ ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ಥ್ರಿಲ್‌ ನೀಡುವುದರ ಜತೆಗೆ ಅಚ್ಚರಿಗೆ ದೂಡಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಭಾಸ್‌ ಕಾಣಿಸಿಕೊಂಡಿದ್ದಾರೆ. ಹಾರರ್‌ ಕಾಮಿಡಿ ಶೈಲಿಯ ಈ ಸಿನಿಮಾದಲ್ಲಿ, ಹೃದಯಸ್ಪರ್ಶಿ ಭಾವನೆಗಳನ್ನೂ ಬೆರೆಸಿದ್ದಾರೆ ನಿರ್ದೇಶಕ ಮಾರುತಿ.

*ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ*

ಭಾರತದ ಅತಿದೊಡ್ಡ ಹಾರರ್ ಫ್ಯಾಂಟಸಿ ಡ್ರಾಮಾ ಎಂದು ಬಿಂಬಿಸಲಾಗಿರುವ ‘ದಿ ರಾಜಾಸಾಬ್’, ಮೇಕಿಂಗ್‌, ದೊಡ್ಡ ಕ್ಯಾನ್ವಾಸ್‌ ಮೂಲಕವೇ ಎಲ್ಲರನ್ನು ನಿಬ್ಬೆರಗಾಗಿಸಿದೆ. ಈ ಚಿತ್ರವು ಭಾರತದಲ್ಲಿ ಇದುವರೆಗೆ ಕಾಣದ ಅತಿದೊಡ್ಡ ಹಾರರ್ ಸೆಟ್ ಹೊಂದಿದೆ. ನೋಡುಗರನ್ನು ಭಯಕ್ಕೆ ಕೆಡವುದರ ಜತೆಗೆ ಆ ದೃಶ್ಯ ವೈಭವವನ್ನು ಮೀರಿ, ಪ್ರೀತಿ, ಕುಟುಂಬ ಮತ್ತು ಪೂರ್ವಜರ ಪರಂಪರೆಯ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳಿದ್ದಾರೆ ನಿರ್ದೇಶಕರು. ಬ್ಲಾಕ್ಬಸ್ಟರ್ ಸಿನಿಮಾ ‘ಕಲ್ಕಿ 2898 ಎಡಿ’ ನಂತರ ಮತ್ತೆ ದೊಡ್ಡ ಪರದೆಗೆ ಮರಳುತ್ತಿದ್ದಾರೆ ಪ್ರಭಾಸ್ . ಅವರ ನಟನಾ ಮೋಡಿ, ಮೈನವಿರೇಳಿಸುವ ಆಕ್ಷನ್‌ ಮಿಶ್ರಣ, ಹೊಸ ಪ್ರಭಾಸ್‌ ಎದುರಾಗುವ ಸೂಚನೆ ನೀಡಿದಂತಿದೆ.

prabhas

*ದಾಖಲೆ ಸೃಷ್ಟಿಸಿದ ಟ್ರೈಲರ್ ಬಿಡುಗಡೆ*

ಸಿನಿಮಾ ಬಿಡುಗಡೆಗೆ ಸುಮಾರು ಮೂರು ತಿಂಗಳ ಮುಂಚೆಯೇ 3 ನಿಮಿಷಗಳಿಗಿಂತ ಹೆಚ್ಚಿನ ಅವಧಿಯ ಟ್ರೇಲರ್‌ಅನ್ನು ಬಿಡುಗಡೆ ಮಾಡುವ ಮೂಲಕ ನಿರ್ಮಾಪಕರು ಚಿತ್ರದ ಭವ್ಯತೆಯ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಟ್ರೈಲರ್ ಬಿಡುಗಡೆಯನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದ 105 ಚಿತ್ರಮಂದಿರಗಳಲ್ಲಿ ಸಾಮೂಹಿಕ ಪ್ರದರ್ಶನಗಳೊಂದಿಗೆ ಸೆಲೆಬ್ರೇಟ್‌ ಮಾಡಲಾಯಿತು. ಅಭಿಮಾನಿಗಳು ಹರ್ಷೋದ್ಗಾರ ಮತ್ತು ಶಿಳ್ಳೆಗಳ ನಡುವೆ ಟ್ರೈಲರ್ ಅನಾವರಣವಾಯಿತು. ಟ್ರೈಲರ್ ಏಕಕಾಲದಲ್ಲಿ ಪೀಪಲ್ ಮೀಡಿಯಾ ಫ್ಯಾಕ್ಟರಿಯ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆಯಾಗಿ, ವಿಶ್ವಾದ್ಯಂತ ಅಭಿಮಾನಿಗಳಿಗೆ ಉತ್ಸಾಹಕ್ಕೆ ಒಗ್ಗರಣೆ ಹಾಕಿದೆ.

*ನಿರ್ದೇಶಕ ಮತ್ತು ನಿರ್ಮಾಪಕರ ಅಭಿಪ್ರಾಯ*

‘ದಿ ರಾಜಾಸಾಬ್’ ಟ್ರೈಲರ್ ಬಿಡುಗಡೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಮಾರುತಿ, “ದಿ ರಾಜಾಸಾಬ್‌” ಚಿತ್ರದೊಂದಿಗೆ, ನಾವು ಪ್ರತಿ ಅರ್ಥದಲ್ಲಿಯೂ ಭವ್ಯವಾದ, ಭಾವನಾತ್ಮಕವಾದ ಮತ್ತು ಮನರಂಜನೆಯ ಪ್ರಪಂಚವನ್ನು ಸೃಷ್ಟಿಸಲು ಬಯಸಿದ್ದೇವೆ. ಟ್ರೈಲರ್ ಕೇವಲ ಸಣ್ಣ ಝಲಕ್‌ ಮಾತ್ರ. ಪ್ರಭಾಸ್ ಈ ಪಾತ್ರಕ್ಕೆ ಸಾಟಿಯಿಲ್ಲದ ಶಕ್ತಿಯಾಗಿದ್ದಾರೆ ಎಂದಿದ್ದಾರೆ.

ಪೀಪಲ್ ಮೀಡಿಯಾ ಫ್ಯಾಕ್ಟರಿಯ ಟಿಜಿ ವಿಶ್ವ ಪ್ರಸಾದ್ ಮಾತನಾಡಿ, “ಭಾರತದ ಅತಿದೊಡ್ಡ ಹಾರರ್ ಸೆಟ್ ನಿರ್ಮಿಸುವುದರಿಂದ ಹಿಡಿದು ರೆಬೆಲ್ ಸ್ಟಾರ್ ಪ್ರಭಾಸ್‌ ಅವರ ಹೊಸ ಅವತಾರ ಸೃಷ್ಟಿಸುವುದು ನಿಜಕ್ಕೂ ಒಂದು ಸ್ಮರಣೀಯ ಅನುಭವ. ಈ ಪ್ಯಾನ್-ಇಂಡಿಯಾ ವೈಭವವನ್ನು ನೋಡುಗ ಪ್ರತಿಯೊಬ್ಬರಿಗೂ ಉಣಬಡಿಸುವುದು ನಮ್ಮ ಗುರಿಯಾಗಿದೆ. ಆನ್‌ಲೈನ್‌ನಲ್ಲಿ ಮತ್ತು ಚಿತ್ರಮಂದಿರಗಳಲ್ಲಿ ಟ್ರೈಲರ್‌ಗೆ ಸಿಕ್ಕಿರುವ ಅಗಾಧ ಪ್ರತಿಕ್ರಿಯೆ, ಈ ಚಿತ್ರವು ಎಲ್ಲೆಡೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ ಎಂಬ ನಮ್ಮ ನಂಬಿಕೆಯಿದೆ ಎಂದಿದ್ದಾರೆ.

*ತಾರಾಗಣ ಮತ್ತು ತಾಂತ್ರಿಕ ವಿವರ*

ರೆಬೆಲ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಸಂಜಯ್ ದತ್, ಬೋಮನ್ ಇರಾನಿ, ಜರೀನಾ ವಹಾಬ್, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿಧಿ ಕುಮಾರ್ ನಟಿಸಿದ್ದಾರೆ. ಟಿಜಿ ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಥಮನ್ ಎಸ್ ಸಂಗೀತ ನೀಡಿದ್ದಾರೆ. ಅಂದಹಾಗೆ, ‘ದಿ ರಾಜಾಸಾಬ್’ ಚಿತ್ರವು 2026ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅಂದರೆ, ಜನವರಿ 9, 2026 ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ