– ರಾಘವೇಂದ್ರ ಅಡಿಗ ಎಚ್ಚೆನ್.

ಬಿಗ್​ಬಾಸ್ ಸೀಸನ್ ಮತ್ತೆ ಆರಂಭವಾಗಿದೆ. ಮಲಯಾಳಂನಲ್ಲಿ ಈಗಾಗಲೇ ಬಿಗ್​ಬಾಸ್ ರಿಯಾಲಿಟಿ ಶೋ ಆರಂಭವಾಗಿದೆ. ಹಿಂದಿಯಲ್ಲಿ ಸಹ ಇದೇ ತಿಂಗಳ ಅಂತ್ಯಕ್ಕೆ ಆರಂಭ ಆಗಲಿದೆ ಎನ್ನಲಾಗುತ್ತಿದೆ. ನೆರೆಯ ತೆಲುಗಿನಲ್ಲೂ ಬಿಗ್​ಬಾಸ್ ಶೋ ಪ್ರಾರಂಭವಾಗುವ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಕನ್ನಡದಲ್ಲಿಯೂ ಸಹ ಬಿಗ್​ಬಾಸ್ ಹೊಸ ಸೀಸನ್​ನ ಅಪ್​ಡೇಟ್ ಒಂದು ದೊರೆತಿದೆ.
ಕಲರ್ಸ್ ಕನ್ನಡ ವಾಹಿನಿಯ ಈ ಸೀಸನ್​ನ ಮೊದಲ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ‘ಕಾದಿದ್ದು ಸಾಕು, ಬಿಗ್​ಬಾಸ್ ಈಸ್ ಬ್ಯಾಕ್’ ಎಂಬ ಸಾಲುಗಳೊಟ್ಟಿಗೆ ಹೊಸ ಬಿಗ್​ಬಾಸ್​​ನ ಟೈಟಲ್ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್​ಬಾಸ್ ಲೋಗೊನ ರಿವೀಲ್ ಮಾತ್ರವೇ ಇದೆ. ಪ್ರೋಮೊನಲ್ಲಿ ಸುದೀಪ್ ಕಾಣುತ್ತಿಲ್ಲ. ‘ಕಾದಿದ್ದು ಸಾಕು, ಬಿಗ್​ಬಾಸ್ ಈಸ್ ಬ್ಯಾಕ್’ ಜೊತೆಗೆ ‘ಈ ಸಲ ಕಿಚ್ಚು ಮಾತ್ರ ಹೆಚ್ಚು’ ಎಂಬ ಧ್ಯೇಯ ವಾಕ್ಯವನ್ನೂ ಸೇರಿಸಲಾಗಿದೆ.
ಈ ಬಾರಿ ಬಿಗ್​ಬಾಸ್ ಸೀಸನ್ 12 ನಡೆಯಲಿದ್ದು, ಈ ಸೀಸನ್ ಅನ್ನು ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ. ಸೀಸನ್ 11ರ ವೇಳೆ, ತಾವು ಇನ್ನು ಮುಂದೆ ಬಿಗ್​ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಹೇಳಿದ್ದರು. ಆದರೆ ಆಯೋಜಕರು ಸುದೀಪ್ ಅವರ ಮನವೊಲಿಸಿ ಸುದೀಪ್ ಅವರನ್ನು ಮತ್ತೆ ನಿರೂಪಕರನ್ನಾಗಿ ಮುಂದುವರೆಯುವಂತೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸುದೀಪ್ ಅವರು ಪ್ರೋಮೊ ಶೂಟ್​ನಲ್ಲಿ ಭಾಗಿ ಆಗಲಿದ್ದಾರೆ.
ಈಗ ಬಿಡುಗಡೆ ಆಗಿರುವ ಬಿಗ್​ಬಾಸ್ ಪ್ರೋಮೋನಲ್ಲಿ ಬಿಗ್​ಬಾಸ್ ಲೋಗೊ ತುಸು ಭಿನ್ನವಾಗಿದೆ. ಚಿನ್ನದ ಬಣ್ಣದ ಅಂಚು ಅದರೊಳಗೆ ವಜ್ರಗಳ ರೀತಿ ಕಾಣುವಂತೆ ಡಿಸೈನ್ ಮಾಡಲಾಗಿದೆ. ಬಿಗ್​ಬಾಸ್​ನ ಲೋಗೊದ ಮಧ್ಯ ಭಾಗದಲ್ಲಿ ಗಡಿಯಾರವೊಂದು ಕಾಣುತ್ತದೆ. ಪ್ರೋಮೊ ಬಿಡುಗಡೆ ಆಗುತ್ತಿದ್ದಂತೆ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ಪ್ರೋಮೋ ನೋಡಿದ್ದಾರೆ. ಶೇರ್ ಮತ್ತು ಕಮೆಂಟುಗಳನ್ನು ಸಹ ಮಾಡಿದ್ದಾರೆ.
ಇನ್ನು ಈ ಬಾರಿಯೂ ಸಹ ಕಿರುತೆರೆ, ಸಾಮಾಜಿಕ ಜಾಲತಾಣ ಹಾಗೂ ಸಿನಿಮಾ ಕ್ಷೇತ್ರದ ಜನಪ್ರಿಯರನ್ನು ಬಿಗ್​ಬಾಸ್ ಮನೆಗೆ ಕರೆತರಲಾಗುತ್ತಿದೆ. ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ನಿಜವಾಗಿಯೂ ಈ ಬಾರಿ ಯಾರು ಮನೆಯ ಒಳಗೆ ಹೋಗುತ್ತಿದ್ದಾರೆ ಎಂಬುದು ಈ ವರೆಗೆ ಖಾತ್ರಿ ಆಗಿಲ್ಲ. ಪ್ರಸ್ತುತ ಟೈಟಲ್ ರಿವೀಲ್ ಪ್ರೋಮೊ ಮಾತ್ರವೇ ಬಿಡುಗಡೆ ಆಗಿದ್ದು, ಇನ್ನು ಕೆಲ ದಿನಗಳಲ್ಲಿ ಸುದೀಪ್ ಅವರಿರುವ ಪ್ರೋಮೊ ಬಿಡುಗಡೆ ಆಗಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ